ಇಂಫಾಲ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ನಿತೀಶ್ ಕುಮಾರ್ ನೇತೃತ್ವದ ಜನತಾ ದಳ (ಸಂಯುಕ್ತ) ಪಕ್ಷವು, ಮಣಿಪುರದ ಎನ್. ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದೆ. ಇದೀಗ ಮಣಿಪುರದ ಏಕೈಕ ಜೆಡಿಯು ಶಾಸಕ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಬೆಂಚ್‌ನಲ್ಲಿ ಕುಳಿತುಕೊಳ್ಳಲಿದ್ದಾರೆ.
ಬಿಜೆಪಿ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂದೆಗೆದುಕೊಳ್ಳಲು ನಿರ್ಧರಿಸಿದ್ದಕ್ಕಾಗಿ ನಿತೀಶ್ ಕುಮಾರ ನೇತೃತ್ವದ ಜೆಡಿಯು ತನ್ನ ರಾಜ್ಯ ಘಟಕದ ಅಧ್ಯಕ್ಷ ಕ್ಷೇತ್ರಿಮಯೂಮ ಬೀರೇನ್ ಸಿಂಗ್ ಅವರನ್ನು ಬುಧವಾರ ಹುದ್ದೆಯಿಂದ ವಜಾಗೊಳಿಸಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅಫಾಕ್ ಅಹ್ಮದ್ ತಿಳಿಸಿದ್ದಾರೆ.
ಮಣಿಪುರ ಸರಕಾರಕ್ಕೆ ಬೆಂಬಲವನ್ನು ಹಿಂದೆಗೆದುಕೊಳ್ಳುವಲ್ಲಿ ಪಕ್ಷದ ಕೇಂದ್ರ ನಾಯಕತ್ವದೊಂದಿಗೆ ಸಮಾಲೋಚಿಸದಿದ್ದಕ್ಕಾಗಿ ಮತ್ತು ಸ್ವಂತ ನಿರ್ಧಾರವನ್ನು ತೆಗೆದುಕೊಂಡಿದ್ದಕ್ಕಾಗಿ ಮಣಿಪುರ ಘಟಕದ ಅಧ್ಯಕ್ಷರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ಜೆಡಿಯು ವಕ್ತಾರ ರಾಜೀವ ರಂಜನ ಪ್ರಸಾದ ಅವರು ದೃಢಪಡಿಸಿದರು.
ಮಣಿಪುರ ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆಯುವ ಜೆಡಿಯು ನಿರ್ಧಾರದಿಂದ ಸರ್ಕಾರದ ಸ್ಥಿರತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವಾದರೂ, ಕೇಂದ್ರ ಮತ್ತು ಬಿಹಾರದಲ್ಲಿ ಜೆಡಿಯು ಪಕ್ಷವು ಬಿಜೆಪಿಯ ಪ್ರಮುಖ ಮಿತ್ರ ಪಕ್ಷವಾಗಿರುವುದು ಹಲವು ರೀತಿಯ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ.
ಮೇಘಾಲಯದಲ್ಲಿ ಅಧಿಕಾರದಲ್ಲಿರುವ ಕಾನ್ರಾಡ್ ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿಯು, ಮಣಿಪುರದ ಬಿರೇನ್ ಸಿಂಗ್ ಸರ್ಕಾರಕ್ಕೆ ಬೆಂಬಲವನ್ನು ಹಿಂತೆಗೆದುಕೊಂಡ ಒಂದು ತಿಂಗಳ ನಂತರ ಜೆಡಿಯು ಕೂಡ ಬೆಂಬಲ ಹಿಂಪಡೆದಿದೆ.
ಮಣಿಪುರದಲ್ಲಿ 2022ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು ಆರು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಯುನ ಐವರು ಶಾಸಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. 60 ಸದಸ್ಯ ಬಲದ ಮಣಿಪುರ ವಿಧಾನಸಭೆಯಲ್ಲಿ ಸದ್ಯ ಬಿಜೆಪಿ 37 ಶಾಸಕರನ್ನು ಹೊಂದಿದೆ. ನಾಗಾ ಪೀಪಲ್ಸ್ ಫ್ರಂಟ್‌ನ ಐವರು ಶಾಸಕರು ಮತ್ತು ಮೂವರು ಪಕ್ಷೇತರರು ಸರ್ಕಾರಕ್ಕೆ ಬೆಂಬಲ ನೀಡಿದ್ದು, ಜೆಡಿಯು ಬೆಂಬಲ ಹಿಂಪಡೆದಿರುವುದರಿಂದ ಬಹುಮತದ ಮೇಲೆ ಪರಿಣಾಮ ಬೀರದು.
ಮಣಿಪುರದ ಜೆಡಿಯು ಘಟಕದ ಮುಖ್ಯಸ್ಥರಾದ ಕ್ಷ ಬಿರೇನ್ ಸಿಂಗ್ ಅವರು, ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರಿಗೆ ಪತ್ರ ಬರೆದು ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆಯುವ ಪಕ್ಷದ ನಿರ್ಧಾರವನ್ನು ತಿಳಿಸಿದ್ದಾರೆ. ಅದರಂತೆ ಮಣಿಪುರ ವಿಧಾನಸಭೆ ಸ್ಪೀಕರ್ ಅವರು ಸದನದ ಏಕೈಕ ಜೆಡಿಯು ಶಾಸಕ ಎಂ.ಡಿ. ಅಬ್ದುಲ್ ನಾಸಿರ್ ಅವರಿಗೆ, ಇದೀಗ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಸಾಲಿನಲ್ಲಿ ಆಸನದ ವ್ಯವಸ್ಥೆ ಮಾಡಿದ್ದಾರೆ.
“ಮಣಿಪುರದಲ್ಲಿರುವ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವನ್ನು, ಜೆಡಿಯು ಮಣಿಪುರ ಘಟಕವು ಬೆಂಬಲಿಸುವುದಿಲ್ಲ ಮತ್ತು ನಮ್ಮ ಏಕೈಕ ಶಾಸಕ ಎಂ.ಡಿ. ಅಬ್ದುಲ್ ನಾಸಿರ್ ಅವರನ್ನು ಸದನದಲ್ಲಿ ವಿರೋಧ ಪಕ್ಷದ ಶಾಸಕರನ್ನಾಗಿ ಪರಿಗಣಿಸಲಾಗುವುದು..” ಎಂದು ಮಣಿಪುರದ ಜೆಡಿಯು ಘಟಕದ ಮುಖ್ಯಸ್ಥರಾದ ಕ್ಷ ಬಿರೇನ್ ಸಿಂಗ್ ಬರೆದಿರುವ ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ 12 ಸ್ಥಾನಗಳನ್ನು ಗೆದ್ದಿರುವ ನಿತೀಶ್ ಕುಮಾರ್ ಅವರ ಜೆಡಿಯು, ಎನ್‌ಡಿಎ ಮೈತ್ರಿಕೂಟದ ಪ್ರಮುಖ ಮಿತ್ರಪಕ್ಷಗಳಲ್ಲಿ ಒಂದಾಗಿದೆ. ಜೆಡಿಯು ಮತ್ತು ಆಂಧ್ರಪ್ರದೇಶದ ಟಿಡಿಪಿ ಬೆಂಬಲದ ಸಹಾಯದಿಂದ ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಸರ್ಕಾರ ರಚಿಸಿದ್ದಾರೆ.
ಅದೇ ರೀತಿ ಈ ವರ್ಷ ಬಿಹಾರದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯು ಒಟ್ಟಾಗಿ ಸ್ಪರ್ಧಿಸಲಿವೆ. ಈ ಮಧ್ಯೆ ಮಣಿಪುರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಜೆಡಿಯು ಹಿಂಪಡೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.