ಜಿದ್ದಾ: 2024ರಲ್ಲಿ ವಿದೇಶಿ ಹಜ್ ಉಮ್ರಾ ಯಾತ್ರಿಕರ ಸಂಖ್ಯೆ ಸಾರ್ವಕಾಲಿಕ ದಾಖಲೆಯನ್ನು ಮುರಿದಿದ್ದು, 1,85,35,689 ವಿದೇಶಿ ಯಾತ್ರಿಕರು ಪುಣ್ಯಭೂಮಿಯನ್ನು ತಲುಪಿದ್ದಾರೆ ಎಂದು ಹಜ್ ಉಮ್ರಾ ಸಚಿವ ಡಾ. ತೌಫೀಖ್ ಬಿನ್ ಫೌಝಾನ್ ಅಲ್ ರಬೀಅ ಹೇಳಿದರು. ಜಿದ್ದಾದಲ್ಲಿ ನಡೆದ 4ನೇ ಹಜ್ ಸಮ್ಮೇಳನ-ಪ್ರದರ್ಶನದಲ್ಲಿ ಅವರು ಮಾತನಾಡಿದರು. ನುಸುಕ್ ಅಪ್ಲಿಕೇಶನ್ ಪ್ರಪಂಚದಾದ್ಯಂತದ ವಿಶ್ವಾಸಿಗಳ ತೀರ್ಥಯಾತ್ರೆಯನ್ನು ತುಂಬಾ ಅನುಕೂಲಕರವಾಗಿಸಿದೆ. ಸುಮಾರು 100 ಹೊಸ ಸೇವೆಗಳನ್ನು ನವೀಕರಿಸಲಾಗಿದೆ ಎಂದು ಅವರು ಹೇಳಿದರು.
2024ರಲ್ಲಿ ಆಗಮಿಸಿದ್ದ 1,85,35,689 ವಿದೇಶಿ ಯಾತ್ರಾರ್ಥಿಗಳಲ್ಲಿ 1,69,24,689 ಮಂದಿ ಉಮ್ರಾ ಯಾತ್ರೆಗೆ ಹಾಗೂ 1,6,11310 ಮಂದಿ ಹಜ್ ಯಾತ್ರೆಗೆ ಆಗಮಿಸಿದ್ದರು. ಕಳೆದ ವರ್ಷ 1 ಕೋಟಿ 30 ಲಕ್ಷ ಜನರು ಮದೀನಾದ ರೌಳಾ ಷರೀಫ್‌ಗೆ ಭೇಟಿ ನೀಡಿದ್ದಾರೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತಿದಿನ 50 ಗ್ರೂಪುಗಳಲ್ಲಾಗಿ ರೌಳಾವನ್ನು ಪ್ರವೇಶಿಸಲು ಅನುಮತಿಸಲಾಗಿದೆ.
ಹಜ್ ಉಮ್ರಾ ಸಚಿವಾಲಯವು ಪವಿತ್ರ ನಗರಗಳಲ್ಲಿ ಯಾತ್ರಾರ್ಥಿಗಳಿಗೆ ಅತ್ಯುತ್ತಮ ಸೇವೆಗಳನ್ನು ಒದಗಿಸಿದೆ. ಹಜ್ ಸಮ್ಮೇಳನ ಮತ್ತು ಪ್ರದರ್ಶನವು ಇದನ್ನು ಸ್ಪಷ್ಟಪಡಿಸುತ್ತದೆ. ಸುಮಾರು 100 ದೇಶಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ. ಸಮ್ಮೇಳನ ಗುರುವಾರ ಮುಕ್ತಾಯವಾಗಲಿದೆ. ಪ್ರದರ್ಶನದ ಭಾಗವಾಗಿ ಹಜ್‌ನ ಇತಿಹಾಸ ಮತ್ತು ಆಚರಣೆಗಳನ್ನು ಪರಿಚಯಿಸುವ 280 ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಈ ಮೇಳವು ಹಜ್ ಯಾತ್ರೆಯನ್ನು ಸುಗಮವಾಗಿ ನಡೆಸಲು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ವಿಧಾನಗಳನ್ನು ಗುರುತಿಸುತ್ತದೆ.
ಈ ವರ್ಷದ ಹಜ್ ಸಮ್ಮೇಳನ ಮತ್ತು ಹಜ್ ಮತ್ತು ಉಮ್ರಾಕ್ಕೆ ಸಂಬಂಧಿಸಿದಂತೆ ಆಯೋಜಿಸಲಾದ ಪ್ರದರ್ಶನವು ಹಜ್ ಮತ್ತು ಉಮ್ರಾ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಸೌಲಭ್ಯಗಳನ್ನು ಒದಗಿಸುತ್ತದೆ. ಸಮ್ಮೇಳನ ನಗರಕ್ಕೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಸಮ್ಮೇಳನದಲ್ಲಿ 90 ದೇಶಗಳ 300ಕ್ಕೂ ಹೆಚ್ಚು ಗಣ್ಯರು ಮತ್ತು ರಾಜತಾಂತ್ರಿಕರು ಭಾಗವಹಿಸುತ್ತಿದ್ದಾರೆ.
ಹಜ್‌ನ ಭಾಗವಾಗಿರುವ ವಿವಿಧ ಉದ್ಯಮಿಗಳಿಗಾಗಿ ವಿವಿಧ ಕಾರ್ಯಾಗಾರಗಳು ಮತ್ತು ಸಮ್ಮೇಳನಗಳನ್ನು ಹಜ್ ಶೃಂಗಸಭೆಯು ಹೊಂದಿದೆ.