ಕಾಸರಗೋಡು: ಇಲ್ಲಿನ ಕುಂಬಳೆಯಲ್ಲಿ ಪಿಸ್ತಾದ ಸಿಪ್ಪೆ ಗಂಟಲಲ್ಲಿ ಸಿಲುಕಿ ಪುಟ್ಟ ಮಗುವೊಂದು ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಕುಂಬಳೆ ಭಾಸ್ಕರ ನಗರದ ಅನ್ವರ್ ಮೆಹರೂಫಾ ದಂಪತಿಗಳ ಪುತ್ರ ಅನಸ್ ಎಂಬ ಎರಡು ವರ್ಷದ ಮಗು ಮೃತಪಟ್ಟಿದೆ.
ಶನಿವಾರ ಸಂಜೆ ಮಗು ಪಿಸ್ತಾವನ್ನು ತಿನ್ನುತ್ತಿದ್ದ ವೇಳೆ ಸಿಪ್ಪೆ ಗಂಟಲಲ್ಲಿ ಸಿಲುಕಿದ್ದು, ಮನೆಯವರು ಸಿಪ್ಪೆಯ ಒಂದು ತುಂಡನ್ನು ಹೊರ ತೆಗೆದಿದ್ದಾರೆ. ಬಳಿಕ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ವೈದ್ಯರು ತಪಾಸಣೆ ನಡೆಸಿದಾಗ ಗಂಟಲಲ್ಲಿ ಯಾವುದೇ ವಸ್ತುಗಳು ಸಿಲುಕಿಲ್ಲ ಎಂದು ತಿಳಿಸಿದ್ದರಿಂದ ಅವರು ಮನೆಗೆ ಮರಳಿದರು, ಆದರೆ ಉಸಿರಾಟದ ತೊಂದರೆ ಅನುಭವಿಸಿದ ನಂತರ ಭಾನುವಾರ ಬೆಳಿಗ್ಗೆ ಮಗುವನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಮಗು ಮೃತಪಟ್ಟಿದೆ.
ಮಗುವಿನ ತಂದೆ ಅನ್ವರ್ ಕೆಲವು ದಿನಗಳ ಹಿಂದೆಯಷ್ಟೇ ಗಲ್ಫ್‌ಗೆ ಹೋಗಿದ್ದರು. ಸುದ್ದಿ ತಿಳಿದು ತಂದೆ ಊರಿಗೆ ಮರಳಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಪುಟ್ಟ ಮಗು ಅನಸ್ ನ ಅನಿರೀಕ್ಷಿತ ನಿಧನವು ಕುಟುಂಬ ಸದಸ್ಯರು ಮತ್ತು ಸ್ಥಳೀಯರನ್ನು ಶೋಕದಲ್ಲಿ ಮುಳುಗಿಸಿದೆ. ಕುಂಬಳೆ ಬದರ್ ಜುಮಾ ಮಸೀದಿಯ ಖಬರ್ ಸ್ಥಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಅನಸ್ ಗೆ ಆಯಿಷಾ ಎಂಬ ಸಹೋದರಿಯೂ ಇದ್ದಾಳೆ.