janadhvani

Kannada Online News Paper

Carrefour ವಿರುದ್ಧದ ಬಹಿಷ್ಕಾರ ಫಲಶ್ರುತಿ- ಒಮಾನ್‌ನಲ್ಲಿರುವ ಎಲ್ಲಾ ಶಾಖೆಗಳು ಬಂದ್

ಇಸ್ರೇಲ್, ಗಾಜಾದಲ್ಲಿ ನಡೆಸುತ್ತಿರುವ ನರಮೇಧಕ್ಕೆ ನೆರವು ನೀಡಿದ ನಂತರ ಕ್ಯಾರಿಫೋರ್ ವಿರುದ್ಧದ ಬಹಿಷ್ಕಾರ ಅಭಿಯಾನ ಯಶಸ್ವಿಯಾಗಿದೆ ಎಂದು ಬಹಿಷ್ಕಾರಕ್ಕೆ ಕರೆ ನೀಡಿದ್ದ Boycott, Divestment and Sanctions (BDS) ಘೋಷಿಸಿದೆ.

ಮಸ್ಕತ್: ಗಾಜಾದಲ್ಲಿ ಮಕ್ಕಳು ಮತ್ತು ಮಹಿಳೆಯರ ಹತ್ಯಾಕಾಂಡದಲ್ಲಿ ಝಿಯೋನಿಸ್ಟ್ ಆಡಳಿತಕ್ಕೆ ಆರ್ಥಿಕ ನೆರವು ನೀಡಿದ ಫ್ರೆಂಚ್ ಚಿಲ್ಲರೆ ಮಾರಾಟದಲ್ಲಿ ದೈತ್ಯ ಸ್ಥಾನದಲ್ಲಿರುವ ಕ್ಯಾರಿಫೋರ್ ಸರಪಳಿಗಳ(Carrefour)ಒಮಾನ್‌ನಲ್ಲಿ ತನ್ನ ಎಲ್ಲಾ ಶಾಖೆಗಳನ್ನು ಮುಚ್ಚಿದೆ. ನವೆಂಬರ್‌ನಲ್ಲಿ ಜೋರ್ಡಾನ್‌ನಲ್ಲಿ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಿದ ನಂತರ ಇಸ್ರೇಲ್ ಪರವಾದ ನಿಲುವಿನ ಮೇಲೆ ಒಮಾನ್‌ನಲ್ಲಿರುವ ತನ್ನ ಎಲ್ಲಾ ಶಾಖೆಗಳನ್ನು ಕ್ಯಾರಿಫೋರ್ ಮುಚ್ಚುವುದು ಅನಿವಾರ್ಯವಾಯಿತು. ಒಮಾನ್‌ನಲ್ಲಿ ಕ್ಯಾರಿಫೋರ್‌ನ ಅಂಗಡಿಗಳನ್ನು ಯುಎಇ ದೈತ್ಯ ಗ್ರೂಪ್ ಅಲ್ಫುತೈಮ್ ನಡೆಸುತ್ತಿತ್ತು.

ನಿನ್ನೆ, ಕ್ಯಾರಿಫೋರ್ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಒಮಾನ್‌ನಲ್ಲಿ ಎಲ್ಲಾ ಕಾರ್ಯಾಚರಣೆಗಳನ್ನು ನಿಲ್ಲಿಸಿದೆ ಮತ್ತು ತನ್ನ ಗ್ರಾಹಕರಿಗೆ ಧನ್ಯವಾದಗಳನ್ನು ಅರ್ಪಿಸಿದೆ. ಕ್ಯಾರಿಫೋರ್ ಗಲ್ಫ್ ಪ್ರದೇಶದ ಪ್ರಮುಖ ಸೂಪರ್ಮಾರ್ಕೆಟ್ ಸರಪಳಿಗಳಲ್ಲಿ ಒಂದಾಗಿದೆ.ದಶಕಗಳಿಂದ ಲಭಿಸುತ್ತಿರುವ ನಿರಂತರ ಬೆಂಬಲಕ್ಕಾಗಿ ಕಂಪನಿಯು ಸಾಮಾಜಿಕ ಮಾಧ್ಯಮಗಳಲ್ಲಿ ಧನ್ಯವಾದಗಳನ್ನು ಸಲ್ಲಿಸಿದೆ.

ಇಸ್ರೇಲ್, ಗಾಜಾದಲ್ಲಿ ನಡೆಸುತ್ತಿರುವ ನರಮೇಧಕ್ಕೆ ನೆರವು ನೀಡಿದ ನಂತರ ಕ್ಯಾರಿಫೋರ್ ವಿರುದ್ಧದ ಬಹಿಷ್ಕಾರ ಅಭಿಯಾನ ಯಶಸ್ವಿಯಾಗಿದೆ ಎಂದು ಬಹಿಷ್ಕಾರಕ್ಕೆ ಕರೆ ನೀಡಿದ್ದ Boycott, Divestment and Sanctions (BDS) ಘೋಷಿಸಿದೆ. ಇಸ್ರೇಲಿ ಆಡಳಿತಕ್ಕೆ ಬೆಂಬಲ ನೀಡುವ ಕಂಪೆನಿಗಳನ್ನು ಅಂತರಾಷ್ಟ್ರೀಯ ಕಾನೂನನ್ನು ಪಾಲಿಸುವಂತೆ ಒತ್ತಾಯಿಸುವ ಸಂಘಟನೆಯಾಗಿದೆ BDS. ಗಲ್ಫ್ ರಾಷ್ಟ್ರದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಕ್ಯಾರಿಫೋರ್ ನಿರ್ದಿಷ್ಟ ಕಾರಣವನ್ನು ನೀಡಲಿಲ್ಲ.

ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ಆಕ್ರಮಣವು ಕಾನೂನುಬಾಹಿರವಾಗಿದೆ ಅದಕ್ಕೆ ಬೆಂಬಲ ನೀಡುವುದನ್ನು ತಡೆಯಬೇಕೆಂದು ಹೇಗ್ ಮೂಲದ ಅಂತರಾಷ್ಟ್ರೀಯ ನ್ಯಾಯಾಲಯ (ICJ) ಜುಲೈ 2024 ರಲ್ಲಿ ಆದೇಶ ನೀಡಿದೆ. ಈ ಪರಿಸ್ಥಿತಿಯಲ್ಲಿ ಆಕ್ರಮಿತ ಸೈನ್ಯಕ್ಕೆ ನೀಡುವ ಯಾವುದೇ ನೆರವು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಬಿಡಿಎಸ್ ತನ್ನ ಬಹಿಷ್ಕಾರದ ಕಂಪನಿಗಳ ಪಟ್ಟಿಯಲ್ಲಿ ಕ್ಯಾರಿಫೋರ್ ಅನ್ನು ಸೇರಿಸಿದೆ.

ಬಹಿಷ್ಕಾರದ ಕರೆಯನ್ನು ಅನುಸರಿಸಿ, ಪ್ಯಾಲೇಸ್ಟಿನಿಯನ್ ಬೆಂಬಲಿಗರು ವಿವಿಧ ದೇಶಗಳ ಕ್ಯಾರಿಫೋರ್ ಮಳಿಗೆಗಳ ಮುಂದೆ ಪ್ರತಿಭಟನೆ ನಡೆಸಿದರು. ಇದರೊಂದಿಗೆ, ಕ್ಯಾರಿಫೋರ್‌ನ ದೈನಂದಿನ ವ್ಯವಹಾರವು ಗಮನಾರ್ಹವಾಗಿ ಕುಸಿತಗೊಂಡಿದೆ. ಅರಬ್ ದೇಶಗಳು ಸೇರಿದಂತೆ ಮಳಿಗೆಗಳಿಗೆ ಜನರ ಪ್ರವೇಶ ಕಡಿಮೆಗೊಂಡ ಹಿನ್ನೆಲೆಯಲ್ಲಿ ಕ್ಯಾರಿಫೋರ್ ನ್ನು ಮುಚ್ಚಬೇಕಾಯಿತು. ಈ ಕಂಪನಿಯು ವಿಶ್ವಾದ್ಯಂತ 3400 ಅಂಗಡಿಗಳನ್ನು ಹೊಂದಿದೆ.

ಗಾಜಾದಲ್ಲಿ ಹತ್ಯಾಕಾಂಡ ನಡೆಸುತ್ತಿದ್ದ ಝಿಯೋನಿಸ್ಟ್ ಸೈನಿಕರಿಗೆ ಕ್ಯಾರಿಫೋರ್ ಉಡುಗೊರೆ ಪೊಟ್ಟಣಗಳನ್ನು ಕಳುಹಿಸಿದ್ದು ದೊಡ್ಡ ವಿವಾದವನ್ನು ಸೃಷ್ಟಿಸಿತು. ಕಂಪನಿಯು ಸೈನಿಕರಿಗಾಗಿ ದೇಣಿಗೆ ಸಂಗ್ರಹಿಸಲು ಪ್ರಾರಂಭಿಸಿದಾಗ ಬಹಿಷ್ಕಾರವು ತೀವ್ರಗೊಂಡಿತು.

ಅಮೇರಿಕನ್ ಕಂಪನಿ HP, ಚೆವ್ರಾನ್, ಪಿಜ್ಜಾ ಹಟ್, ಕ್ಯಾಲ್ಟೆಕ್ಸ್, ಜರ್ಮನ್ ಕಂಪನಿ ಸೀಮೆನ್ಸ್, ಪೂಮಾ, ವಿಮಾ ಕಂಪನಿ AXA, ಇಂಟೆಲ್, ಹುಂಡೈ, ವೋಲ್ವೋ, ಕ್ಯಾಟ್, JCB, ಬಾರ್ಕ್ಲೇಸ್, Google, Amazon, Airbnb, Expedia, Disney, McDonald’s, Burger King, Papa John’s ಮತ್ತು ಇತರರು ಬಹಿಷ್ಕಾರವನ್ನು ಎದುರಿಸುತ್ತಿರುವ BDS ನಲ್ಲಿ ಪಟ್ಟಿ ಮಾಡಲಾದ ಇತರ ಕಂಪನಿಗಳಾಗಿವೆ.

error: Content is protected !! Not allowed copy content from janadhvani.com