ಕೋಯಿಕ್ಕೋಡ್: ಹೈಡ್ರಾಲಿಕ್ ವೈಫಲ್ಯದಿಂದ ಏರ್ ಇಂಡಿಯಾ ವಿಮಾನ ಕರಿಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ದುಬೈನಿಂದ ಕರಿಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವಿಮಾನ ಎಮರ್ಜೆನ್ಸಿ ಅಲರ್ಟ್ ನೀಡಿ ಕೋಝಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ದುಬೈನಿಂದ ಕೋಝಿಕ್ಕೋಡ್‌ಗೆ ಬಂದ ಏರ್ ಇಂಡಿಯಾ ವಿಮಾನ IX344 ತುರ್ತು ಭೂಸ್ಪರ್ಶ ಮಾಡಿದೆ.
ವಿಮಾನದ ಹೈಡ್ರಾಲಿಕ್ ವೈಫಲ್ಯದಿಂದಾಗಿ ಲ್ಯಾಂಡಿಂಗ್ ಗೇರ್ ಕೆಲಸ ಮಾಡದ ಕಾರಣ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೈಡ್ರಾಲಿಕ್ ವೈಫಲ್ಯವನ್ನು ಗಮನಿಸಿದ ನಂತರ, ವಿಮಾನ ನಿಲ್ದಾಣಕ್ಕೆ ಮಾಹಿತಿಯನ್ನು ರವಾನಿಸಲಾಯಿತು. ನಂತರ ತುರ್ತು ಅಲರ್ಟ್ ನೀಡಲಾಗಿದೆ. ಅಷ್ಟರಲ್ಲಿ ವಿಮಾನ ನಿಲ್ದಾಣದಲ್ಲಿ ಸಕಲ ವ್ಯವಸ್ಥೆ ಮಾಡಲಾಗಿತ್ತು. ಹಲವಾರು ಆಂಬ್ಯುಲೆನ್ಸ್‌ಗಳು ಮತ್ತು ಅಗ್ನಿಶಾಮಕ ವ್ಯವಸ್ಥೆಗಳನ್ನು ರನ್‌ವೇಯಲ್ಲಿ ಸಜ್ಜುಗೊಳಿಸಲಾಯಿತು. ಬಳಿಕ ವಿಮಾನವು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದ್ದು, ಭಾರಿ ಅಪಘಾತವೊಂದು ತಪ್ಪಿದಂತಾಗಿದೆ.
ಇದಕ್ಕೆ ಸಮಾನವಾದ ಘಟನೆಯೊಂದು ಇತ್ತೀಚೆಗೆ ದಕ್ಷಿಣ ಕೊರಿಯಾದಲ್ಲಿ ನಡೆದು, ಲ್ಯಾಂಡಿಂಗ್ ವೇಳೆ ವಿಮಾನಕ್ಕೆ ಬೆಂಕಿ ಹೊತ್ತಿ ಉರಿದ ಪರಿಣಾಮ 179 ಮಂದಿ ಪ್ರಯಾಣಿಕರು ಮೃತಪಟ್ಟಿದ್ದರು.
175 ಪ್ರಯಾಣಿಕರು ಮತ್ತು 6 ಮಂದಿ ಸಿಬ್ಬಂದಿಗಳನ್ನು ಹೊತ್ತೊಯ್ಯುತ್ತಿದ್ದ ವಿಮಾನವು ದಕ್ಷಿಣ ಕೊರಿಯಾದ ದಕ್ಷಿಣದಲ್ಲಿರುವ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ನಂತರ ರನ್‌ವೇಯಿಂದ ಸ್ಕಿಡ್ ಆಗಿ ಕಾಂಕ್ರಿಟ್ ತಡೆಗೋಡೆಗೆ ಅಪ್ಪಳಿಸಿದಾಗ ಬೆಂಕಿ ಆವರಿಸಿದೆ. ಅದರ ಲ್ಯಾಂಡಿಂಗ್ ಗೇರ್ ಅನ್ನು ನಿಯೋಜಿಸಲು ವಿಫಲವಾದಾಗ ಈ ದುರ್ಘಟನೆ ನಡೆದಿತ್ತು.