ದಮ್ಮಾಮ್: ಮಂಗಳೂರು ಆಸುಪಾಸಿನ ಹಾಗೂ ಹಾಸನ, ಕೊಡಗು ಮತ್ತು ಕೇರಳದ ಸುಮಾರು 157 ಮಂದಿ ಉಮ್ರಾ ಯಾತ್ರಿಕರನ್ನು ಕರೆದೊಯ್ದು, ಯಾತ್ರಿಕರನ್ನು ಮದೀನಾದಲ್ಲಿ ಬಿಟ್ಟು ಏಜೆಂಟ್ ಪರಾರಿಯಾದ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಯಾತ್ರಿಕರೆಲ್ಲರೂ ಮನೆಗೆ ಮರಳಿದ್ದಾಗಿ ವರದಿಯಾಗಿದೆ.
ಪುತ್ತೂರಿನ ಕಬಕದಲ್ಲಿ ಕೇಂದ್ರ ಕಚೇರಿ ಹೊಂದಿರುವ ಮುಹಮ್ಮದಿಯಾ ಹಜ್ ಉಮ್ರಾ ಏಜೆನ್ಸಿಯಡಿ ಬಂದವರು ಸಂಕಷ್ಟಕ್ಕೆ ಸಿಲುಕಿದ್ದರು. ಇದರ ಏಜೆಂಟ್ ಅಶ್ರಫ್ ಸಖಾಫಿ ಪರ್ಪುಂಜ ಎಂಬವರು ಉಮ್ರಾ ಆರಾಧನಾ ಕರ್ಮಗಳೆಲ್ಲ ಮುಗಿಸಿ ಯಾತ್ರಿಕರು ಊರಿಗೆ ಮರಳಲು ಸಿದ್ಧತೆ ನಡೆಸುವ ಮಧ್ಯೆ ಪರಾರಿಯಾಗಿದ್ದು, ಯಾತ್ರಿಕರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಸಂಕಷ್ಟಕ್ಕೆ ಈಡಾದ ಯಾತ್ರಿಕರಿಗೆ ಪ್ರಥಮವಾಗಿ ಮದೀನಾದಲ್ಲಿ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕಾರ್ಯಕರ್ತರು ಊಟದ ವ್ಯವಸ್ಥೆಯನ್ನು ಕಲ್ಫಿಸಿದ್ದು, ಸೌದಿ ಅರೇಬಿಯಾದಲ್ಲಿರುವ ಹಲವು ಸ್ವಯಂಸೇವಾ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಯಾತ್ರಿಕರನ್ನು ಊರಿಗೆ ಕಳಿಸಲು ಟಿಕೆಟ್ ನೀಡಿ ಸಹಕರಿಸಿದ್ದಾರೆ.
ಮದೀನಾದಿಂದ ಯಾತ್ರಿಕರನ್ನು ದಮ್ಮಾಮ್ ವಿಮಾನ ನಿಲ್ದಾಣಕ್ಕೆ ಕರೆತಂದು, ಕೆಲವು ಯಾತ್ರಿಕರು ಅದೇ ದಿನ ಪ್ರಯಾಣ ಬೆಳೆಸಿ ಊರಿಗೆ ತಲುಪಿದ್ದು, ಉಳಿದವರು ನಿನ್ನೆ ರಾತ್ರಿಯೊಳಗೆ ಬೆಂಗಳೂರಿಗೆ ತಲುಪಿದ್ದಾರೆ. ಯಾತ್ರಿಕರಿಗೆ ಊರಿಗೆ ಮರಳುವ ಟಿಕೆಟ್ ನೀಡದೆ ಏಜೆಂಟ್ ಪರಾರಿಯಾದ ಹಿನ್ನೆಲೆಯಲ್ಲಿ, ಸೌದಿಯಲ್ಲಿರುವ ಉಮ್ರಾ ಕಂಪನಿಯು ಅವರಿಗೆ ದಮ್ಮಾಮ್‌ನಿಂದ ಟಿಕೆಟ್‌ಗಳನ್ನು ಖರೀದಿಸಿತ್ತು. ಮೂರು ವಿಮಾನಗಳಲ್ಲಿ ಪ್ರವಾಸವನ್ನು ನಿಗದಿಪಡಿಸಲಾಗಿತ್ತು. ಅವರನ್ನು ಮದೀನಾದಿಂದ ದಮ್ಮಾಮ್‌ಗೆ ಮೂರು ಬಸ್‌ಗಳಲ್ಲಿ ಕಳುಹಿಸಲಾಯಿತು, ಆದರೆ ಸಮಯಕ್ಕೆ ಸರಿಯಾಗಿ ದಮ್ಮಾಮ್ ವಿಮಾನ ನಿಲ್ದಾಣದಲ್ಲಿ ವರದಿ ಮಾಡದ ಕಾರಣ ಎರಡೂ ವಿಮಾನಗಳು ನಷ್ಟವಾಗಿದೆ.ಸರಿ ಸಮಯಕ್ಕೆ ತಲುಪಿದ ಕೆಲವು ಯಾತ್ರಿಕರು ಅಂದೇ ಪ್ರಯಾಣ ಬೆಳೆಸಿದ್ದು, ಉಳಿದಿರುವ ಯಾತ್ರಿಕರು ದಮ್ಮಾಮ್ ವಿಮಾನ ನಿಲ್ದಾಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರು.
ನಂತರ ಯಾತ್ರಿಕರು ಸ್ವಯಂ-ಖರೀದಿಸಿದ ಟಿಕೆಟ್‌ಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ಮತ್ತು ವ್ಯಕ್ತಿಗಳು ಒದಗಿಸಿದ ಟಿಕೆಟ್‌ಗಳ ಮೇಲೆ ಊರಿಗೆ ಪ್ರಯಾಣ ಬೆಳೆಸಿದ್ದಾರೆ. ಮೊದಲ ಗುಂಪಿನಲ್ಲಿ ನಿನ್ನೆ ಬೆಳಗ್ಗೆ ಕಣ್ಣೂರಿಗೆ ಮತ್ತು ಮಧ್ಯಾಹ್ನ ಕೋಝಿಕ್ಕೋಡ್‌ಗೆ ಪ್ರಯಾಣ ಬೆಳೆಸಿದರು. ಉಳಿದ 21 ಮಂದಿ ರಾತ್ರಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಇನ್ನು ಕೆಲವರು ಸಂಬಂಧಿಕರೊಂದಿಗೆ ಸೌದಿಯಲ್ಲಿ ತಂಗಿದ್ದು, ಬಳಿಕ ಮನೆಗೆ ಮರಳಲಿದ್ದಾರೆ ಎಂದು ಯಾತ್ರೆಯಲ್ಲಿದ್ದವರು ತಿಳಿಸಿದ್ದಾರೆ.
ಮೊದಲನೇ ದಿನ ಎರಡು ವಿಮಾನಗಳು ನಷ್ಟವಾದರೆ, ಮೂರನೇ ಕಣ್ಣೂರಿನ ವಿಮಾನ ಎಂಟು ಗಂಟೆಗೂ ಹೆಚ್ಚು ವಿಳಂಬವಾಗಿತ್ತು. ಇದರಿಂದಾಗಿ ಒಂದು ದಿನ ದಮ್ಮಾಮ್ ವಿಮಾನ ನಿಲ್ದಾಣದಲ್ಲಿ ಎಲ್ಲಾ ಯಾತ್ರಿಕರು ಸಿಲುಕಿಕೊಂಡಿದ್ದರು. ಖಾಸಗಿ ಟ್ಯಾಕ್ಸಿಯಲ್ಲಿ ಪ್ರಯಾಣಿಸಿದ ಕೆಲವರಿಗೆ ಮಾತ್ರ ಮೊದಲನೇ ವಿಮಾನ ಲಭಿಸಿದೆ. ಬಸ್ಸಿನಲ್ಲಿ ಬಂದ ಯಾತ್ರಿಕರು ವಿಮಾನ ನಿಲ್ದಾಣ ತಲುಪಲು ವಿಳಂಬವಾಗಿದೆ.
ನೆರವಿಗೆ ಧಾವಿಸಿದ ಸ್ವಯಂಸೇವಾ ಸಂಸ್ಥೆಗಳು ಹಾಗೂ ಉದ್ಯಮಿಗಳು
ಉಮ್ರಾ ಏಜಂಟನ ವಂಚನೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಉಮ್ರಾ ಯಾತ್ರಿಕರಿಗೆ ಮದೀನಾದಲ್ಲಿ ಕೆಸಿಎಫ್ ಕಾರ್ಯಕರ್ತರು ಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಬಳಿಕ ಹಲವು ಸ್ವಯಂಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಯಾತ್ರಿಕರನ್ನು ಊರಿಗೆ ಕಳಿಸಲು ಉಮ್ರಾ ಏಜೆನ್ಸಿಗಳನ್ನು ಸಂಪರ್ಕಿಸಿ ದಮ್ಮಾಮ್ ಮೂಲಕ ಪ್ರಯಾಣಿಸುವ ವ್ಯವಸ್ಥೆಯನ್ನು ಮಾಡಲಾಯಿತು. ಆದರೆ, ದಮ್ಮಾಮ್ ತಲುಪಲು ವಿಳಂಬವಾದ ಹಿನ್ನೆಲೆಯಲ್ಲಿ ನಿಗದಿಪಡಿಸಲಾದ ಎರಡೂ ವಿಮಾನಗಳು ನಷ್ಟವಾಯಿತು.
ಕೂಡಲೇ ದಮ್ಮಾಮ್ ಅಲ್ ಖೋಬರ್, ಜುಬೈಲ್ ನಲ್ಲಿರುವ ಕೆಸಿಎಫ್, ಡಿಕೆಯಸ್ಸಿ ಸಹಿತವಿರುವ ಸ್ವಯಂಸೇವಾ ಸಂಸ್ಥೆಗಳು ನೆರವಿಗೆ ಧಾವಿಸಿ, ಯಾತ್ರಿಕರಿಗೆ ಆಹಾರ ಮತ್ತು ಟಿಕೆಟ್ ಖರೀದಿಸುವ ವ್ಯವಸ್ಥೆಯನ್ನು ಮಾಡಿದೆ. ಟೇಬಲ್4 ಕಂಪನಿಯ ಮುಬೀನ್, ಸ್ಕೈವಾಕ್ ಕಂಪನಿಯ ಸಾದಿಕ್ ಮತ್ತು ಯೂನುಸ್ ಹಾಗೂ ಕೆಲವು ಉದ್ಯಮಿಗಳಿಂದ ಟಿಕೆಟ್ ವ್ಯವಸ್ಥೆ ಹಾಗೂ ಗಾರ್ನಿಷ್ ರೆಸ್ಟೋರೆಂಟ್ ನಿಂದ ಊಟದ ವ್ಯವಸ್ಥೆಯನ್ನು ಮಾಡಲಾಯಿತು. ಜುಬೈಲ್ ಟ್ರಾವೆಲ್ಸ್ ಫೋರ್ಟ್ ವೇ ಫಾರೂಖ್ ಕನ್ಯಾನ ಅವರು ಟಿಕೆಟ್ ಸಂಯೋಜನೆಗೆ ಸಹಕರಿಸಿದ್ದಾರೆಂದು ನೆರವು ನೀಡಿರುವ ಸ್ವಯಂಸೇವಾ ಸಂಸ್ಥೆಗಳ ಸಮ್ಮುಖದಲ್ಲಿ ಸಾಮಾಜಿಕ ಕಾರ್ಯಕರ್ತ ರಶೀದ್ ಸಖಾಫಿ ಮಿತ್ತೂರು ಅವರು ಮಾಹಿತಿ ನೀಡಿದರು.
ಝಂಝಂ ನೀರಿಗಾಗಿ 100 ರಿಂದ 150 ರಿಯಾಲ್ ವಸೂಲಿ ಮಾಡಿದ ಏಜೆಂಟ್
ಸೌದಿಯಲ್ಲಿ ಉಮ್ರಾ ಯಾತ್ರಿಕರನ್ನು ಬಿಟ್ಟು ಪರಾರಿಯಾದ ಏಜೆಂಟ್ ಝಂಝಂ ನೀರಿಗೆಂದು 100 ರಿಂದ 150 ರಿಯಾಲ್ ವಸೂಲಿ ಮಾಡಿದ್ದಾಗಿ ಯಾತ್ರಿಕರು ಹೇಳಿದ್ದಾರೆ. ಸೌದಿ ರಿಯಾಲ್‌ಗಳನ್ನು ಭಾರತೀಯ ರೂಪಾಯಿಗೆ ಪರಿವರ್ತಿಸುವುದಾಗಿ ಭರವಸೆ ನೀಡಿ ಸುಮಾರು 10,000 ರಿಯಾಲ್‌ಗಳನ್ನು ಪಡೆದಿದ್ದಾರೆ ಎಂದು ಅವರು ದೂರಿದ್ದಾರೆ.
ಪುತ್ತೂರಿನ ಮುಹಮ್ಮದಿಯಾ ಹಜ್ ಉಮ್ರಾ ಏಜೆನ್ಸಿಯ ಮಾಲೀಕ ವಿರುದ್ಧ ಯಾತ್ರಾರ್ಥಿಗಳು ದೂರು ದಾಖಲಿಸಿದ್ದಾರೆ.ನಾಲ್ಕು ತಿಂಗಳ ಹಿಂದೆ ಇದೇ ಏಜೆಂಟ್ ಉಮ್ರಾ ಯಾತ್ರಿಕರೊಂದಿಗೆ ಬಂದಾಗ ಇದೇ ರೀತಿಯ ಘಟನೆಗಳು ನಡೆದಿವೆ ಎಂದು ಕೆಲವು ಯಾತ್ರಿಕರು ಹೇಳಿದ್ದಾರೆ. ವರ್ಷಗಳ ಹಿಂದೆ ದಮ್ಮಾಮ್‌ನಲ್ಲಿ ಉಮ್ರಾ ಹಜ್ ಸೇವೆಯನ್ನು ನೀಡುತ್ತಿದ್ದ ಅಶ್ರಫ್ ಸಖಾಫಿ ಅವರು ಹಜ್ ಭರವಸೆ ನೀಡಿ,ಆರ್ಥಿಕ ವಂಚನೆ ನಡೆಸಿದ ಪರಿಣಾಮ ಮನೆಗೆ ಮರಳಬೇಕಾಯಿತು ಎಂದು ಸಾಮಾಜಿಕ ಕಾರ್ಯಕರ್ತರು ಹೇಳಿದ್ದಾರೆ.
ಮುಹಮ್ಮದಿಯಾ ಏಜಂಟ್ ನ ಧಾರ್ಮಿಕ ಬಿರುದಿನ ಹಿಂದೆ ಜೋತು ಬಿದ್ದ ಟೀಕಾಕಾರರು
ಸಖಾಫಿ ಮುಂತಾದ ಧಾರ್ಮಿಕ ಬಿರುದನ್ನು ಪಡೆದಿರುವ ವ್ಯಕ್ತಿಗಳು ಸಮಾಜದಲ್ಲಿ ಗೌರವಯುತ ಸ್ಥಾನದಲ್ಲಿರುತ್ತಾರೆ. ಸಮೂಹದಲ್ಲಿ ಆಲಿಂ ಎಂದು ಗುರುತಿಸಲ್ಪಡುವ ಅಂಥವರು ವಂಚನೆ ಮುಂತಾದ ಪ್ರಕರಣದಲ್ಲಿ ಭಾಗಿಯಾಗುವುದು ಸಮೂಹಕ್ಕೂ, ಅವರು ಕಲಿತ ವಿದ್ಯಾ ಸಂಸ್ಥೆಗಳಿಗೂ ಕಪ್ಪು ಚುಕ್ಕೆ ಎಂಬುದರಲ್ಲಿ ಎರಡು ಮಾತಿಲ್ಲ. ಓರ್ವ ಸಾಮಾನ್ಯ ವ್ಯಕ್ತಿ ಮತ್ತು ವಿದ್ಯಾವಂತರ ಮಧ್ಯೆ ಅಜಗಜಾಂತರ ವ್ಯತ್ಯಾಸವಿದೆ ಅಲ್ಲದೇ, ಸಮೂಹದಲ್ಲಿ ಅದೇ ರೀತಿಯ ಸ್ಥಾನಮಾನವಿದೆ ಎಂಬುದನ್ನು ವಿದ್ಯಾವಂತರು ಅರಿತುಕೊಳ್ಳಬೇಕಾದ ಅನಿವಾರ್ಯತೆ ಇದೆ.
ಮರ್ಕಝುಸ್ಸಖಾಫತಿ ಸುನ್ನಿಯ್ಯಾ ಎಂಬ ವಿಶ್ವ ವಿಖ್ಯಾತ ಸಂಸ್ಥೆಯಲ್ಲಿ ಕಲಿತು ಸಖಾಫಿ ಬಿರುದು ಪಡೆದು, ಉಮ್ರಾ ಯಾತ್ರೆ ಎಂಬ ಹೆಸರಿನಲ್ಲಿ ಜನರನ್ನು ವಂಚಿಸುವುದು ತಾವು ಕಲಿತ ಸಂಸ್ಥೆಗೆ ಎಸಗುವ ಘೋರ ಅನ್ಯಾಯವಾಗಿದೆ ಎಂಬುದನ್ನು ನೆನಪಿಡಬೇಕಾಗಿದೆ.
ಆದರೆ, ಅವರ ಸಖಾಫಿ ಬಿರುದನ್ನು ಮುಂದಿಟ್ಟು ಕೆಲವು ಪುಂಡರು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಮುಂದಾಗಿರುವುದಲ್ಲದೆ, ಅವರು ಕೆಸಿಎಫ್ ಮತ್ತು ಎಸ್ಸೆಸ್ಸೆಫ್ ನ ಮುಖಂಡರು ಎಂಬಿತ್ಯಾದಿಯಾಗಿ ಗೀಚಿ ಸಮಯ ವ್ಯರ್ಥ ಮಾಡುತ್ತಿರುವುದು ನಿಜಕ್ಕೂ ಖೇದಕರವಾಗಿದೆ.
ಅವರು ಯಾತ್ರಿಕರನ್ನು ವಂಚಿಸಿ ಪರಾರಿಯಾದ ಕೂಡಲೇ ಅವರ ಉಮ್ರಾ ಗ್ರೂಪಿನ ಬಗ್ಗೆ ಎಚ್ಚರಿಕೆ ನೀಡಿರುವುದು ಮದೀನಾದಲ್ಲಿರುವ ಕೆಸಿಎಫ್ ಕಾರ್ಯಕರ್ತರೇ ಆಗಿದ್ದರು. ಓರ್ವ ವ್ಯಕ್ತಿ ಏನೇ ವಂಚನೆ ಕೃತ್ಯ ಎಸಗಿದ್ದಲ್ಲಿ, ಆ ವ್ಯಕ್ತಿಯ ಬಿರುದನ್ನು ನೋಡಿ ಇಡೀ ಸಮೂಹವನ್ನೂ ಸಂಘಟನೆಯನ್ನೂ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸುವುದರಿಂದ ಲಭಿಸುವ ಲಾಭವಾದರೂ ಏನು ಎಂಬುದನ್ನು ಟೀಕಾಕಾರರು ಚಿಂತಿಸಬೇಕಾಗಿದೆ.