janadhvani

Kannada Online News Paper

ಮಸೀದಿ, ದರ್ಗಾಗಳ ಮೇಲಿನ ಹಕ್ಕೊತ್ತಾಯಗಳು ದೇಶವನ್ನು ಘಾಸಿಗೊಳಿಸುತ್ತಿದೆ- ಇಂಡಿಯನ್ ಗ್ರ್ಯಾಂಡ್ ಮುಫ್ತಿ

ಅಜ್ಮೀರ್‌ ದರ್ಗಾ ಶತಮಾನಗಳಿಂದ ಭಾರತದ ಧಾರ್ಮಿಕ ಸಾಮರಸ್ಯ ಮತ್ತು ಸೂಫಿ ಸಂಪ್ರದಾಯದ ಸಂಕೇತವಾಗಿದೆ

ಕೋಝಿಕ್ಕೋಡ್ | ಮಸೀದಿಗಳು ಮತ್ತು ದರ್ಗಾಗಳ ಮೇಲಿನ ಅವಕಾಶ ವಾದಗಳು ಅಂತಿಮವಾಗಿ ದೇಶದ ಜಾತ್ಯತೀತ ಪರಿಕಲ್ಪನೆ ಮತ್ತು ಏಕತೆಯನ್ನು ಘಾಸಿಗೊಳಿಸಲಿದೆ ಎಂದು ಭಾರತದ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ.

ಪ್ರಾರ್ಥನಾ ಸ್ಥಳಗಳನ್ನು ಯಥಾಸ್ಥಿತಿಯಲ್ಲಿ ಸಂರಕ್ಷಿಸಲು ಮತ್ತು ಕೋಮುವಾದ ಹಾಗೂ ಮತೀಯ ಚಿಂತನೆಯನ್ನು ತೊಡೆದುಹಾಕಲು ಪ್ರಜಾಪ್ರಭುತ್ವದಲ್ಲಿ ವಿಶ್ವಾಸ ಇರಿಸಿಕೊಂಡವರು, ರಾಜಕೀಯ ಪಕ್ಷಗಳು ಹಾಗೂ ಆಡಳಿತಗಾರರು ಸಿದ್ಧರಾಗಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಜ್ಮೀರ್‌ ದರ್ಗಾ ಶತಮಾನಗಳಿಂದ ಭಾರತದ ಧಾರ್ಮಿಕ ಸಾಮರಸ್ಯ ಮತ್ತು ಸೂಫಿ ಸಂಪ್ರದಾಯದ ಸಂಕೇತವಾಗಿದೆ. ದರ್ಗಾದ ಕೆಳಗೆ ಮಂದಿರವಿದೆ ಎಂಬ ಆಧಾರ ರಹಿತ ಹೇಳಿಕೆಯ ಹಿನ್ನೆಲೆಯಲ್ಲಿ ದರ್ಗಾ ಸಮಿತಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ಕೇಂದ್ರಕ್ಕೆ ನೋಟಿಸ್‌ ಜಾರಿ ಮಾಡಿರುವ ನ್ಯಾಯಾಲಯದ ಕ್ರಮ ಅತ್ಯಂತ ಕಳವಳಕಾರಿಯಾಗಿದೆ.

ಜ್ಞಾನವಾಪಿ ಮಸೀದಿ, ಮಥುರಾ ಶಾಹಿ ಈದ್ಗಾಹ್, ಸಂಭಾಲ್ ಶಾಹಿ ಜುಮಾ ಮಸೀದಿ ಮತ್ತು ಅಜ್ಮೀರ್ ದರ್ಗಾ ಸೇರಿದಂತೆ ಮುಸ್ಲಿಂ ಆರಾಧನಾ ಸ್ಥಳಗಳ ಮೇಲಿನ ಹಕ್ಕೊತ್ತಾಯಗಳು ಮತ್ತು ಮುಂದುವರಿದ ಕ್ರಮಗಳು ದೇಶದ ಸಾಮರಸ್ಯ ಮತ್ತು ಒಗಟ್ಟಿಗೆ ಕೊಡಲಿಯೇಟಾಗಿದೆ. ಧಾರ್ಮಿಕ ಸ್ಥಳಗಳಿಗೆ ಸಂಬಂಧಿಸಿದಂತೆ 1947 ರ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ 1991 ರ ಪೂಜಾ ಸ್ಥಳಗಳ ಸಂರಕ್ಷಣಾ ಕಾಯಿದೆಗಳು ಅಸ್ತಿತ್ವದಲ್ಲಿರುವಾಗ, ಇಂತಹ ಅಪಾಯಕಾರಿ ಘಟನೆಗಳು ಮರುಕಳಿಸದಂತೆ ನ್ಯಾಯಾಂಗ ವ್ಯವಸ್ಥೆ ಮತ್ತು ಕಾನೂನು ಪಾಲಕರು ಎಚ್ಚರದಿಂದ ಕೆಲಸಮಾಡಬೇಕಿದೆ.

ಅಂತಿಮವಾಗಿ ಇಂತಹ ಘಟನೆಗಳು ದೇಶದಲ್ಲಿ ಕೋಮುವಾದದ ಸೃಷ್ಟಿಗೆ ಕಾರಣವಾಗಲಿದೆ. ಯುಪಿಯ ಸಂಭಾಲ್ ಘಟನೆ ಇದಕ್ಕೆ ಸಾಕ್ಷಿಯಾಗಿದೆ. ಯಥಾಸ್ಥಿತಿಯಲ್ಲಿ ಪೂಜಾ ಸ್ಥಳಗಳನ್ನು ರಕ್ಷಿಸಲು, ಭಾರತದ ಜಾತ್ಯತೀತ ಸ್ವರೂಪ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಮತ್ತು ಕೋಮು ಮತ್ತು ಮತೀಯ ಚಿಂತನೆಯನ್ನು ತೊಡೆದುಹಾಕಲು ಎಲ್ಲಾ ಪ್ರಜಾಪ್ರಭುತ್ವವಾದಿಗಳು, ರಾಜಕೀಯ ಪಕ್ಷಗಳು ಮತ್ತು ಆಡಳಿತಗಾರರು ಮುಂದಾಗಬೇಕು ಎಂದು ಗ್ರ್ಯಾಂಡ್ ಮುಫ್ತಿ ಹೇಳಿದರು.

error: Content is protected !! Not allowed copy content from janadhvani.com