– ನವೀನ್ ಸೂರಿಂಜೆ
ಕೋಮುವಾದಿಗಳ ಸವಾಲು-ಪ್ರತಿಸವಾಲಿನ ನಂತರ ಕಾಟಿಪಳ್ಳ ಮಸೀದಿಗೆ ದುರ್ಷರ್ಮಿಗಳು ಕಲ್ಲು ತೂರಾಟ ಮಾಡಿದ್ದಾರೆ. ಈ ಸವಾಲಿನ ಸಂಘರ್ಷಕ್ಕೂ ಕಾಟಿಪಳ್ಳಕ್ಕೂ ಸಂಬಂಧವಿಲ್ಲ. ಆದರೂ ಕೋಮುವಾದಿಗಳು ಕಾಟಿಪಳ್ಳ ಮಸೀದಿಯನ್ನು ಯಾಕೆ ಟಾರ್ಗೆಟ್ ಮಾಡಿದರು ?
ಕಾಟಿಪಳ್ಳ ಮಸೀದಿಗೆ ಕಲ್ಲು ತೂರಾಟ ಮಾಡಿದ ಕೋಮುವಾದಿ ಕೈಗಳ ರಟ್ಟೆಗಳಿಗೆ ಬಲ ಬಂದಿರೋದು ಎಲ್ಲಿಂದ ಎಂಬುದು ಅವರಿಗೆ ಗೊತ್ತಿರಬೇಕಿತ್ತು. 1918 ರ ಬರದ ಸಂದರ್ಭದಲ್ಲಿ ಮುಸ್ಲೀಮರು ನೆರವಿಗೆ ಬಾರದೇ ಇದ್ದರೆ ಕಾಟಿಪಳ್ಳ- ಸುರತ್ಕಲ್ ನ ಒಂದಿಡೀ ತಲೆಮಾರು ಹಸಿವಿನಿಂದ ಸಾಯುತ್ತಿತ್ತು. ಆಗ ಮುಸ್ಲೀಮರ ಸಹಾಯದಿಂದ ಹಸಿವು ಮುಕ್ತಗೊಂಡು ಬದುಕುಳಿದವರೇ ಇಂದು ಮಸೀದಿಗೆ ಕಲ್ಲು ತೂರಿದರೆ ಹೇಗೆ ?
1918 ರಲ್ಲಿ ಕರಾವಳಿ ತೀವ್ರವಾದ ಆಹಾರದ ಬರ ಎದುರಿಸಿತ್ತು. ಹಸಿವಿನಿಂದ ಜನ ಸಾಯುವ ಪರಿಸ್ಥಿತಿ ಬಂದಿತ್ತು. ಬರದಿಂದಾಗಿ ಭತ್ತ ಬೆಳೆಯದೇ ಊಟಕ್ಕೆ ಅಕ್ಕಿಯ ಕೊರತೆ ಉಂಟಾಗುತ್ತದೆ. ಆಗ ಉಡುಪಿಯ ಉದ್ಯಮಿ ಹಾಜಿ ಅಬ್ದುಲ್ಲ ಸಾಹೇಬರು ತನ್ನದೇ ಹಡಗಿನಲ್ಲಿ ಬರ್ಮಾದ ರಂಗೂನ್‍ನಿಂದ ಅಕ್ಕಿ ತರಿಸಿದ್ದರು ಎಂದು ದಾಖಲೆಗಳು ಹೇಳುತ್ತವೆ. ಹಾಜಿ ಅಬ್ದುಲ್ಲ ಸಾಹೇಬರು ಅಕ್ಕಿಯನ್ನು ಮಸೀದಿಯಲ್ಲೋ, ಮುಸ್ಲೀಮರ ಮನೆಯಲ್ಲೋ ಶೇಖರಿಸಿ ಮುಸ್ಲೀಮರಿಗೆ ಹಂಚಲಿಲ್ಲ. ಬದಲಾಗಿ ಇಡೀ ಸುರತ್ಕಲ್, ಕಾಟಿಪಳ್ಳ ಮತ್ತು ಗ್ರಾಮಾಂತರ ಪ್ರದೇಶಗಳಿಗೆ ಅಕ್ಕಿ ಹಂಚಿದರು. ಜನ ಹಸಿವು ಮುಕ್ತಗೊಂಡರು.
ಕಲ್ಲು ತೂರಾಟಗೊಂಡ ಕಾಟಿಪಳ್ಳ ಮಸೀದಿಯ ಅನತಿ ದೂರದಲ್ಲಿ ಕೃಷ್ಣಾಪುರ ಮಠವಿದೆ. ಇವತ್ತಿನ ಕೃಷ್ಣಾಪುರ ಮಠದ ವೈಭೋಗದ ಹಿಂದೆ ಮುಸ್ಲಿಂ ಕೈಗಳಿವೆ. 1918 ರ ಬರದ ಬಳಿಕ 1920 ಕ್ಕೆ ಉಡುಪಿಯ ಅಷ್ಟ ಮಠಗಳು ಆರ್ಥಿಕ ಸಂಕಷ್ಟದಲ್ಲಿದ್ದು ಇನ್ನೇನು ಮುಚ್ಚಬೇಕು ಎನ್ನುವಾಗ ಹಾಜಿ ಅಬ್ದುಲ್ಲರು ಮಠಗಳಿಗೆ ಅಗತ್ಯವಿದ್ದ ಆಹಾರ, ಹಣವನ್ನು ನೀಡಿ ರಕ್ಷಿಸುತ್ತಾರೆ. ಜನ ಆಹಾರವಿಲ್ಲದೆ ಸಾಯುವ ಪರಿಸ್ಥಿತಿ ಇದ್ದಾಗ ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಕೃಷ್ಣಾಪುರ ಮಠವು ಚಿನ್ನದ ಪಲ್ಲಕ್ಕಿ ನಿರ್ಮಿಸಲು ಸಹಾಯ ಮಾಡುವಂತೆ ಹಾಜಿ ಅಬ್ದುಲ್ಲರನ್ನು ಕೇಳಿಕೊಳ್ಳುತ್ತದೆ. ಹಾಜಿ ಅಬ್ದುಲ್ಲರಿಗೆ ಜನರ ಹಸಿವಿನ ಚಿಂತೆಯಾದರೆ ಮಠಗಳಿಗೆ ಚಿನ್ನದ ಚಿಂತೆ. ಒಂದು ಕಡೆ ಜನರಿಗೆ ಅಕ್ಕಿ ವಿತರಿಸುತ್ತಿದ್ದ ಹಾಜಿ ಅಬ್ದುಲ್ಲ ಸಾಹೇಬರು ಕೃಷ್ಣಾಪುರ ಮಠದ ಸ್ವಾಮೀಜಿಯ ಮನವಿಯಂತೆ ಒಂದು ಸೇರು ಚಿನ್ನವನ್ನು ಕೃಷ್ಣಾಪುರ ಮಠಕ್ಕೆ ನೀಡುತ್ತಾರೆ. ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಈ ಕೃಷ್ಣಾಪುರ ಮಠ ಇರುವುದು ಕೋಮುವಾದಿಗಳಿಂದ ಕಲ್ಲು ತೂರಾಟಕ್ಕೆ ಒಳಗಾದ ಮಸೀದಿಯಿಂದ ಒಂದೆರಡು ಕಿಮಿ ದೂರದಲ್ಲಿ !. ಯಾವ ಬೀದಿಯಲ್ಲಿ ಇಂದು ಕೋಮುವಾದಿಗಳು ಕಲ್ಲು ಹಿಡಿದುಕೊಂಡು ಓಡಾಡುತ್ತಿದ್ದಾರೋ ಅದೇ ಬೀದಿಯಲ್ಲಿ ಅಂದು ಮುಸ್ಲೀಮರು ಅಕ್ಕಿ ಚೀಲ ಹಿಡಿದುಕೊಂಡು ಓಡಾಡುತ್ತಿದ್ದರು.