janadhvani

Kannada Online News Paper

ಜನಸಂಖ್ಯಾ ವರದಿ: ಪಾಕಿಸ್ತಾನ ಧ್ವಜ ಬಳಸಿದ ಸುವರ್ಣ- ದೇಶದ್ರೋಹ ಪ್ರಕರಣ ದಾಖಲಿಸಲು ಆಗ್ರಹ

ಆ್ಯಂಕರ್ ಅಜಿತ್ ಹನುಮಕ್ಕನವರ್ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ವರದಿಯನ್ನು ಚರ್ಚಿಸುವಾಗ 20 ಕೋಟಿ ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನದ ಧ್ವಜ ಬಳಸಿ ಚಿತ್ರಿಸಿದ್ದಾರೆ.

ಬೆಂಗಳೂರು: ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ ಬಿಡುಗಡೆ ಮಾಡಿರುವ ಜನಸಂಖ್ಯಾ ವರದಿ ದೇಶದಲ್ಲಿ ಹಿಂದೂಗಳ ಜನ ಸಂಖ್ಯೆ ಇಳಿಕೆಯಾಗಿದೆ. ಮುಸ್ಲಿಮರ ಜನಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ತಿಳಿಸಿತ್ತು. ಚುನಾವಣೆಯ ಹೊತ್ತಲ್ಲೇ ಬಿಡುಗಡೆ ಮಾಡಿರುವ ವರದಿ ದೇಶದಾದ್ಯಂತ ವಿವಾದದ ಕಿಡಿ ಹೊತ್ತಿಸಿದೆ.

ಏತನ್ಮಧ್ಯೆ, ಮುಸ್ಲಿಂ ಜನಸಂಖ್ಯೆ ತೋರಿಸಲು ಸುವರ್ಣ ನ್ಯೂಸ್ ಎಂಬ ಕನ್ನಡ ಸುದ್ದಿ ವಾಹಿನಿಯೊಂದು ಪಾಕಿಸ್ತಾನ ಧ್ವಜದ ಗ್ರಾಫಿಕ್ಸ್ ಬಳಸಿದ್ದು, ಭಾರೀ ಜನಾಕ್ರೋಶಕ್ಕೆ ಕಾರಣವಾಗಿದ್ದು, ಸುವರ್ಣ ಮತ್ತು ನಿರ್ವಾಹಕ ಅಜಿತ್ ಹನುಮಕ್ಕನವರ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಆಗ್ರಹಿಸಲಾಗಿದೆ.

ಈ ವರದಿ ಆಧರಿಸಿ ಮೇ 9, 2024ರಂದು ರಾತ್ರಿ 8:30ಕ್ಕೆ ಸುವರ್ಣ ನ್ಯೂಸ್ ಸುದ್ದಿ ಪ್ರಕಟಿಸಿತ್ತು. ಅಜಿತ್ ಹನುಮಕ್ಕನವರ್ ಸುದ್ದಿ ವಿಶ್ಲೇಷಣೆ ಮಾಡಿದ್ದರು. ಸುದ್ದಿಯಲ್ಲಿ ಹಿಂದೂ ಮುಸ್ಲಿಮರ ಜನಸಂಖ್ಯೆ ತೋರಿಸುವಾಗ ಹಿಂದೂಗಳ ಜನಸಂಖ್ಯೆಗೆ ಭಾರತದ ಧ್ವಜ ಮತ್ತು ಮುಸ್ಲಿಮರ ಜನಸಂಖ್ಯೆಗೆ ಪಾಕಿಸ್ತಾನ ಧ್ವಜದ ಗ್ರಾಫಿಕ್ಸ್ ಬಳಸಲಾಗಿದೆ.

ಇದರ ವಿಡಿಯೋ ಹಾಗೂ ಸ್ಕ್ರೀನ್‌ಶಾಟ್‌ನ ವಿಡಿಯೋವನ್ನು ಆಲ್ಟ್‌ನ್ಯೂಸ್‌ನ ಸಹ ಸಂಸ್ಥಾಪಕ ಹಾಗೂ ಪತ್ರಕರ್ತ ಮುಹಮ್ಮದ್ ಝುಬೈರ್ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಬಳಿಕ ವಿಷಯ ಬಹಿರಂಗಗೊಂಡಿದೆ.


“ಭಾರತೀಯ ಹಿಂದೂಗಳಿಗೆ ಭಾರತದ ಧ್ವಜ ಮತ್ತು ಭಾರತೀಯ ಮುಸ್ಲಿಮರಿಗೆ ಪಾಕಿಸ್ತಾನದ ಧ್ವಜ ಬಳಸಲಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಕನ್ನಡ ಮತ್ತು ಅದರ ಆ್ಯಂಕರ್ ಅಜಿತ್ ಹನುಮಕ್ಕನವರ್ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ವರದಿಯನ್ನು ಚರ್ಚಿಸುವಾಗ 20 ಕೋಟಿ ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನದ ಧ್ವಜ ಬಳಸಿ ಚಿತ್ರಿಸಿದ್ದಾರೆ. ಕರ್ನಾಟಕದ ಸಂಘಟನೆಗಳು ಆ್ಯಂಕರ್ ಮತ್ತು ಚಾನೆಲ್ ವಿರುದ್ಧ ದೂರು ದಾಖಲಿಸುತ್ತವೆ ಎಂದುಕೊಂಡಿದ್ದೇನೆ” ಎಂದು ಝಬೈರ್ ತನ್ನ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.

ಝುಬೈರ್ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸುವರ್ಣ ನ್ಯೂಸ್ ಮತ್ತು ಸುದ್ದಿ ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಭಾರತೀಯರು ಮುಸ್ಲಿಮರನ್ನು ಪಾಕಿಸ್ತಾನದವರು ಎಂದು ಚಿತ್ರಿಸುವ ಮೂಲಕ ಸುವರ್ಣ ನ್ಯೂಸ್ ದೇಶದ್ರೋಹಕ್ಕೆ ಸಮನಾದ ಕೃತ್ಯವೆಸಗಿದೆ ಎಂದು ಜನರು ಕಿಡಿಕಾರಿದ್ದಾರೆ.

ಜನಸಂಖ್ಯಾ ವರದಿ: ಸುವರ್ಣ – ಅಜಿತ್ ಹನುಮಕ್ಕನವರ್ ಓರ್ವ ದೇಶದ್ರೋಹಿ

error: Content is protected !! Not allowed copy content from janadhvani.com