ರಿಯಾದ್ : (ಜನಧ್ವನಿ ವಾರ್ತೆ) ಕರಾವಳಿ ಕರ್ನಾಟಕದ ಮುಸ್ಲಿಂ ಅನಿವಾಸಿ ಕನ್ನಡಿಗರ ಅಧಿಕೃತ ವೇದಿಕೆ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಝೋನಲ್ ಘಟಕವು ಹಮ್ಮಿಕೊಂಡ ‘ಬೃಹತ್ ಫ್ಯಾಮಿಲಿ ಇಫ್ತಾರ್ ಕೂಟ’ ವು ಇದೇ ಬರುವ ಜೂನ್ ಒಂದರಂದು ಶುಕ್ರವಾರ ನಡೆಯಲಿದ್ದು ಕಾರ್ಯಕ್ರಮದ ಯಶಸ್ಸಿಗಾಗಿ ಈಗಾಗಲೇ ಭರದ ಸಿದ್ಧತೆ ನಡೆದಿದೆ.
ಎಕ್ಸಿಟ್ 18 ರ ಪ್ರತಿಷ್ಠಿತ “ಅಲ್ ನೋಫಾ ಇಸ್ತಿರಾಃ” ದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ನಗರ ಹಾಗೂ ಪರಿಸರದ ಪ್ರದೇಶಗಳಿಂದ ವಿವಿಧ ಕಂಪನಿಗಳಲ್ಲಿ ದುಡಿಯುತ್ತಿರುವ ಸಾಮಾನ್ಯ ಕಾರ್ಮಿಕರೂ ಸೇರಿದಂತೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮುಸ್ಲಿಂ ಕನ್ನಡಿಗರು ಭಾಗವಹಿಸುವ ನಿರೀಕ್ಷೆಯಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ಕುಟುಂಬ ಸಮೇತ ಎಲ್ಲರಿಗೂ ಭಾಗವಹಿಸುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ವರ್ಷದಂತೆ ಈ ಬಾರಿ ಕೂಡ ಬಹಳ ಅದ್ದೂರಿಯಾಗಿಯೇ ಇಫ್ತಾರ್ ಕೂಟ ನಡೆಸಲಾಗುತ್ತಿದೆ. ಇದು ಕೇವಲ ಒಂದು ಇಫ್ತಾರ್ ಕಾರ್ಯಕ್ರಮ ಎನ್ನುವುದಕ್ಕಿಂತ ಮಿಗಿಲಾಗಿ ರಿಯಾದ್ ಪ್ರಾಂತದ ಮುಸ್ಲಿಂ ಅನಿವಾಸಿ ಕುಟುಂಬಗಳ ಸ್ನೇಹ ಸಂಗಮವಾಗಿ ಮಾರ್ಪಾಡುವುದು ಸಾಮಾನ್ಯ.
ಕಾರ್ಯಕ್ರಮದಲ್ಲಿ ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ, ಡಿ.ಪಿ.ಯೂಸುಫ್ ಸಖಾಫಿ ಬೈತಾರ್, ಉಪ್ಪಿನಂಗಡಿ – ಮೂಡಡ್ಕ ಅಲ್ ಮದೀನತುಲ್ ಮುನವ್ವರ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಅಶ್ರಫ್ ಸಖಾಫಿ ಮಾಡಾವು, ರಿಯಾದ್ ಕಿಂಗ್ ಸುಊದ್ ಮೆಡಿಕಲ್ ಸಿಟಿಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಸಲ್ಮಾನ್ ಖಾಲಿದ್, ಶಿಫಾ ಅಲಿಫ್ ಇಂಟರ್ ನ್ಯಾಶನಲ್ ಸ್ಕೂಲ್ ಚೆಯರ್ಮಾನ್ ಆಲಿಕುನ್ಜಿ ಮುಸ್ಲಿಯಾರ್ ಸೇರಿದಂತೆ ಧಾರ್ಮಿಕ, ಸಾಮಾಜಿಕ ಹಾಗೂ ರಾಜತಾಂತ್ರಿಕ ವಲಯದ ಅನೇಕ ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ನಗರದ ವಿವಿಧ ಕಡೆಗಳಿಂದ ಆಗಮಿಸುವ ಜನರಿಗಾಗಿ ವಾಹನ ವ್ಯವಸ್ಥೆ ಏರ್ಪಾಡು ಮಾಡಲಾಗಿದ್ದು ಇಫ್ತಾರ್ ನಲ್ಲಿ ಭಾಗವಹಿಸಲು ಬಯಸುವವರು ಸಂಜೆ ಐದು ಗಂಟೆಗೆ ಮುಂಚಿತವಾಗಿ ಬತ್ತಾ ದ ಅಲ್ ರಯ್ಯಾನ್ ಪಾಲಿ ಕ್ಲಿನಿಕ್ ನ ಮುಂಭಾಗಕ್ಕೆ ಬರಬೇಕೆಂದು ಸ್ವಾಗತ ಸಮಿತಿ ಅಧ್ಯಕ್ಷ ನಝೀರ್ ಕಾಷಿಪಟ್ಣ ಹಾಗೂ ಕಾರ್ಯದರ್ಶಿ ಹನೀಫ್ ಕಣ್ಣೂರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.