ನವದೆಹಲಿ: ಎಲ್ಲಾ ಟೀಕೆಗಳು ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಎಲ್ಲಾ ಟೀಕೆಗಳನ್ನು ಅಪರಾಧ ಎಂದು ಪರಿಗಣಿಸಿದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370 ರದ್ದತಿಯನ್ನು ಟೀಕಿಸಿದ ಕಾಲೇಜು ಪ್ರಾಧ್ಯಾಪಕರ ಪ್ರಕರಣವನ್ನು ರದ್ದುಗೊಳಿಸುತ್ತಾ ಸುಪ್ರೀಂ ಕೋರ್ಟ್ ಈ ನಿರ್ಣಾಯಕ ಅವಲೋಕನ ನಡೆಸಿದೆ.
ಭಾರತದ ಸಂವಿಧಾನದ 19(1)a ಪರಿಚ್ಛೇದವು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ನಾಗರಿಕರಿಗೆ ಒದಗಿಸುತ್ತದೆ. 370 ನೇ ವಿಧಿಯನ್ನು ರದ್ದುಗೊಳಿಸುವ ನಿರ್ಧಾರವನ್ನು ಟೀಕಿಸಲು ನಾಗರಿಕರಿಗೆ ಈ ಸ್ವಾತಂತ್ರ್ಯವನ್ನು ಬಳಸಲು ಹಕ್ಕಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ತಮಗೆ ಆಸಕ್ತಿಯಿಲ್ಲದ ಸರ್ಕಾರದ ಯಾವುದೇ ನಿರ್ಧಾರವನ್ನು ಟೀಕಿಸುವ ಹಕ್ಕು ನಾಗರಿಕರಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
“ನಮ್ಮ ಪೊಲೀಸ್ ವ್ಯವಸ್ಥೆಗೆ ಈ ಬಗ್ಗೆ ತಿಳಿವಳಿಕೆ ಮೂಡಿಸುವ ಸಮಯವಾಗಿದೆ.ಅವರು ಆರ್ಟಿಕಲ್ 19 (ಎ) ಮತ್ತು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಪ್ರಜಾಸತ್ತಾತ್ಮಕ ಮೌಲ್ಯಗಳ ಬಗ್ಗೆ ಅವರು ಸಂವೇದನಾಶೀಲರಾಗಬೇಕು” ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠ ಹೇಳಿದೆ.
ಮಹಾರಾಷ್ಟ್ರದ ಕೊಲ್ಹಾಪುರ ಕಾಲೇಜಿನಲ್ಲಿ ಉದ್ಯೋಗದಲ್ಲಿರುವ ಜಾವೇದ್ ಅಹಮದ್ ಹಜಾಮ್ ವಿರುದ್ಧ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಕಾಶ್ಮೀರದ ಇತಿಹಾಸದಲ್ಲಿ ಆಗಸ್ಟ್ ‘5’ ಕರಾಳ ದಿನ ಎಂಬ ಹೇಳಿಕೆ ಹಾಗೂ ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ್ದಕ್ಕೆ ಈ ಕ್ರಮ ಕೈಗೊಳ್ಳಲಾಗಿತ್ತು. ಆಗಸ್ಟ್ 5 ಕರಾಳ ದಿನ ಎಂದು ಹೇಳುವ ಮೂಲಕ ಪ್ರಾಧ್ಯಾಪಕರು ತಮ್ಮ ದುಃಖವನ್ನು ವ್ಯಕ್ತಪಡಿಸುತ್ತಿದ್ದಾರೆ ಮತ್ತು ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರುವುದು ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಪ್ರಕರಣವನ್ನು ರದ್ದುಗೊಳಿಸಿದೆ.