ರಿಯಾದ್: ಸೌದಿ ಅರೇಬಿಯಾವು ಭಾರತದಿಂದ ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸಲು ಯೋಜಿಸಿದೆ. ಸೌದಿ ಏರ್ಲೈನ್ಸ್ ಅಥವಾ ಫ್ಲೈನಾಸ್ ಮೂಲಕ ಪ್ರಯಾಣಿಸುವವರಿಗೆ ಉಚಿತ 96 ಗಂಟೆಗಳ ‘ಸ್ಟಾಪ್ಓವರ್’ ವೀಸಾವನ್ನು ನೀಡಲಾಗುವುದು ಎಂದು ‘SATTE – 2024 ಟ್ರಾವೆಲ್ ಶೋ’ ದಲ್ಲಿ ಏಷ್ಯಾ ಪೆಸಿಫಿಕ್ ಮತ್ತು ಸೌದಿ ಪ್ರವಾಸೋದ್ಯಮ ಪ್ರಾಧಿಕಾರದ ಅಧ್ಯಕ್ಷ ಅಲ್ ಹಸನ್ ಅಲ್ ದಬ್ಬಾಗ್ ಹೇಳಿದರು.
ವೀಸಾ ಸೌಲಭ್ಯವನ್ನು ಉದ್ದೇಶಿಸಿ ಮಾತನಾಡಿದ ಅವರು, “ಭಾರತದ ಪ್ರಾಮುಖ್ಯತೆಯನ್ನು ಗುರುತಿಸಿ, 10 VFS ಕಚೇರಿಗಳೊಂದಿಗೆ ನಾವು ಸೌದಿಗೆ ಪ್ರವೇಶವನ್ನು ಸುವ್ಯವಸ್ಥಿತಗೊಳಿಸಿದ್ದೇವೆ. ಈ ವರ್ಷ ಮತ್ತಷ್ಟು ವಿಸ್ತರಿಸಲು ಯೋಜಿಸಿದ್ದೇವೆ” ಎಂದರು.
2030ರ ವೇಳೆಗೆ 75 ಲಕ್ಷ ಭಾರತೀಯ ಪ್ರವಾಸಿಗರನ್ನು ಆಕರ್ಷಿಸುವ ಗುರಿ ಹೊಂದಲಾಗಿದೆ. ಕಳೆದ ವರ್ಷ ಸೌದಿ ಅರೇಬಿಯಾಕ್ಕೆ ಭೇಟಿ ನೀಡುವ ಭಾರತೀಯರಲ್ಲಿ ಶೇಕಡಾ 50 ರಷ್ಟು ಏರಿಕೆ ಕಂಡುಬಂದಿದೆ. ಈ ಅವಧಿಯಲ್ಲಿ 15 ಲಕ್ಷ ಭಾರತೀಯ ಪ್ರವಾಸಿಗರು ಆಗಮಿಸಿದ್ದರು.
US, UK ಅಥವಾ ಷೆಂಗೆನ್ ವೀಸಾಗಳನ್ನು ಹೊಂದಿರುವ ವ್ಯಕ್ತಿಗಳು ಇ-ವೀಸಾ ಅಥವಾ ವೀಸಾ ಆನ್ ಅರೈವಲ್ ಗೆ ಅರ್ಹರಾಗಿರುತ್ತಾರೆ ಎಂದು ಅಲ್ ಹಸನ್ ಅಲ್ ದಬ್ಬಾಗ್ ಹೇಳಿದರು. ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ಸಂಬಂಧವು ಕೇವಲ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮಾತ್ರವಲ್ಲದೆ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ವಿಸ್ತರಿಸುತ್ತಿದೆ ಎಂದು ಅವರು ಹೇಳಿದರು.