janadhvani

Kannada Online News Paper

ಪರಸ್ಪರ ಅನ್ಯೋನ್ಯತೆಯಿಂದ ಬದುಕಬೇಕು- ‘ಸಮಸ್ತ’ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಸಲಹೆ

ಯಾವುದೇ ಧರ್ಮ ಇದ್ದರೂ ಎಲ್ಲರೂ ಸೌಹಾರ್ದತೆಯಿಂದ ಬದುಕಿದರೆ ಮಾತ್ರ ಶಾಂತಿ ನೆಲೆಸಲು ಸಾಧ್ಯ ಎಂದರು.

ಬೆಂಗಳೂರು : ಎಲ್ಲಾ ಧರ್ಮಗಳನ್ನು ಸಮಾನ ಗೌರವದಿಂದ ಕಾಣಬೇಕು ಎಂದು ಸಂವಿಧಾನ ಹೇಳುತ್ತದೆ. ನಾವು ಮನುಷ್ಯರಾಗಿ ಸೌಹಾರ್ದ ಭಾವನೆ ಮೂಡಿಸಬೇಕು. ಇಸ್ಲಾಂ ಶಾಂತಿ ಸಹನೆ ಬೋಧಿಸುತ್ತದೆ. ಸಂವಿಧಾನ ಸಹಿಷ್ಣುತೆ ಹಾಗೂ ಸಹಬಾಳ್ವೆ ಬೋಧಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ರವಿವಾರ ಆಯೋಜಿಸಿದ್ದ ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಸಂಘಟನೆಯ ನೂರನೇ ವರ್ಷಚಾರಣೆಯ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ನಾವು ನಮ್ಮಧರ್ಮ ಅನುಸರಿಸಿ, ಅನ್ಯ ಧರ್ಮವನ್ನು ಗೌರವಿಸಬೇಕು. ಕುವೆಂಪು ಹೇಳುವಂತೆ ನಮ್ಮ ಸಮಾಜ ಸರ್ವ ಜನಾಂಗದ ಶಾಂತಿಯ ತೋಟವಾಗಿರಬೇಕು. ಯಾವುದೇ ಧರ್ಮ ಇದ್ದರೂ ಎಲ್ಲರೂ ಸೌಹಾರ್ದತೆಯಿಂದ ಬದುಕಿದರೆ ಮಾತ್ರ ಶಾಂತಿ ನೆಲೆಸಲು ಸಾಧ್ಯ ಎಂದರು.

ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಸಂಘಟನೆಯು ನೂರನೆ ವರ್ಷಾಚರಣೆ ಕಾರ್ಯಕ್ರಮ ಉದ್ಘಾಟಿಸಲು ಸಂತೋಷವಾಗುತ್ತದೆ. ಯಾವುದೇ ಒಂದು ಸಂಸ್ಥೆ ಅಥವಾ ಸಂಘಟನೆ 100 ವರ್ಷ ಪೂರೈಸಿರುವುದು ಒಂದು ಮೈಲಿಗಲ್ಲು. ಇಂತಹ ನೂರನೆ ವರ್ಷದ ಆಚರಣೆ ಮಾಡುವಾಗ ನಾವು ಬಂದಿರುವ ಹಾದಿ ನೋಡಬೇಕು. ಮುಂದಿನ ಗುರಿ ನೋಡಿ, ಅದನ್ನು ಸಾಧಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಪ್ರತಿಯೊಬ್ಬರಿಗೂ ಶಿಕ್ಷಣ ಬೇಕು. ಸಂವಿಧಾನದಲ್ಲಿ ಉಚಿತ ಶಿಕ್ಷಣ ಕಡ್ಡಾಯವಾಗಿ ನೀಡಬೇಕು ಎಂದು ಹೇಳಿದೆ. ಸಮಸ್ತ ಸಂಘಟನೆಯು ಶಿಕ್ಷಣಕ್ಕೆ ಒತ್ತು ನೀಡುತ್ತಿದೆ. ಮುಸ್ಲಿಮ್ ಸಮಾಜ ಶಿಕ್ಷಣ ಪಡೆದರೆ ಸ್ವಾಭಿಮಾನದಿಂದ ಬದುಕುವ ಶಕ್ತಿ ಬರುತ್ತದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಇದಕ್ಕೂ ಮುನ್ನ ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ ಶಿಸ್ತು ಬದ್ಧ ಸಮ್ಮೇಳನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಸ್ಕೆ ಎಸ್ಸೆಸ್ಸೆಫ್ ನೂತನ 2500 ವಿಖಾಯ ಸದಸ್ಯರನ್ನು ರಾಜ್ಯಕ್ಕೆ ಅರ್ಪಿಸಿದರು.

error: Content is protected !! Not allowed copy content from janadhvani.com