ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಗೆ ಭರ್ಜರಿ ತಯಾರಿ ನಡೆದಿದೆ. ಸರ್ಕಾರ ರಚನೆ ಸಂಬಂಧ ಉಭಯ ಪಕ್ಷಗಳ ನಾಯಕರು ಶನಿವಾರ ರಾತ್ರಿ ಹಿಲ್ಟನ್ ರೆಸಾರ್ಟ್‌ನಲ್ಲಿ ಸಭೆ ಸೇರಿ, ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ, ಖಾತೆಗಳ ಹಂಚಿಕೆ, ಆಡಳಿತ ಸೂತ್ರ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದರು.
ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಜಾದ್, ಮುಖಂಡ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ, ನಿಯೋಜಿತ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಪ್ರಮುಖರು ಸಭೆಯಲ್ಲಿದ್ದರು.
ಹಿಲ್ಟನ್ ರೆಸಾರ್ಟ್ ಬಳಿ ಮಾತನಾಡಿದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್, ‘ನಾನು ಯಾವುದೇ ಖಾತೆಗೆ ಬೇಡಿಕೆ ಇಟ್ಟಿಲ್ಲ. ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಅಷ್ಟಕ್ಕೂ ನಾನು ಕೇಳೋಕೆ ಆಗುತ್ತಾ’ ಎಂದು ಪ್ರಶ್ನಿಸಿದರು.
‘ಗಾಂಧಿ ಪ್ರತಿಮೆ ಬಳಿ ಎಚ್.ಡಿ. ದೇವೇಗೌಡ ಜೊತೆ ಶುಕ್ರವಾರ ಮಾತನಾಡಿದ್ದೇನೆ. ಎಚ್.ಡಿ. ಕುಮಾರಸ್ವಾಮಿ ಜೊತೆಯಲ್ಲೂ ಮಾತನಾಡಿದ್ದೇನೆ. ದೇವೇಗೌಡರು ನಮ್ಮ ಗುರುಗಳು’ ಎಂದರು.
ಸಮನ್ವಯ ಸಮಿತಿಯಲ್ಲಿ ಯಾರೆಲ್ಲ?
ಮೈತ್ರಿ ಸರ್ಕಾರದ ಸುಗಮ ನಡೆಗೆ ‘ಸಮನ್ವಯ ಸಮಿತಿ’ ರಚಿಸಲು ಎರಡೂ ಪಕ್ಷಗಳ ಪ್ರಮುಖರು ತೀರ್ಮಾನಿಸಿದ್ದಾರೆ.ಈ ಸಮಿತಿಯಲ್ಲಿ ಕಾಂಗ್ರೆಸ್‌ನಿಂದ ಗುಲಾಂ ನಬಿ ಆಜಾದ್, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್, ಸಿದ್ದರಾಮಯ್ಯ, ಜಿ. ಪರಮೇಶ್ವರ, ಡಿ.ಕೆ. ಶಿವಕುಮಾರ್, ಜೆಡಿಎಸ್‌ನಿಂದ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ, ಎಚ್. ವಿಶ್ವನಾಥ್, ಎಚ್.ಕೆ. ಕುಮಾರಸ್ವಾಮಿ, ಎ.ಟಿ. ರಾಮಸ್ವಾಮಿ, ಬಿ. ಸತ್ಯನಾರಾಯಣ ಇರಲಿದ್ದಾರೆ.
ಪರಿಷತ್‌ನ ನಾಲ್ಕು ಸ್ಥಾನ ತೆರವು
ಬೆಂಗಳೂರು: ವಿಧಾನ ಪರಿಷತ್ ಸದಸ್ಯರಾದ ಜಿ.ಪರಮೇಶ್ವರ, ಕೆ.ಎಸ್.ಈಶ್ವರಪ್ಪ, ಬಿ.ಎಸ್.ಸುರೇಶ್ 15ನೇ ವಿಧಾನಸಭೆಗೆ ಸದಸ್ಯರಾಗಿ ಆಯ್ಕೆಯಾಗಿದ್ದು, ಇವರ ಪರಿಷತ್ ಸ್ಥಾನ ತೆರವಾಗಿವೆ.ಮತ್ತೊಬ್ಬ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ರಾಜೀನಾಮೆ ಕೊಟ್ಟು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ, ಅವರು ಸೋಲುಂಡಿದ್ದಾರೆ. ಹೀಗಾಗಿ ಸದ್ಯ ಪರಿಷತ್‌ನ ನಾಲ್ಕು ಸ್ಥಾನ ತೆರವಾದಂತಾಗಿವೆ.ಜೂನ್ ತಿಂಗಳಲ್ಲಿ ಒಟ್ಟು 11 ಪರಿಷತ್ ಸ್ಥಾನಗಳ ಅವಧಿ ಮುಕ್ತಾಯವಾಗಲಿದ್ದು ಇವುಗಳಿಗೆ ಚುನಾವಣೆ ನಡೆಯಬೇಕಿದೆ.
ಸಂಭವನೀಯ ಸಚಿವರು ಯಾರು?
ಬೆಂಗಳೂರು: ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದಲ್ಲಿ ಯಾರಿರಬೇಕು ಎಂಬ ಬಗ್ಗೆ ಹಿರಿಯ ನಾಯಕರು ಚರ್ಚೆ ನಡೆಸಿದ್ದು, ಸಂಭವನೀಯ ಪಟ್ಟಿ ಸಿದ್ಧಪಡಿಸಿದ್ದಾರೆ.ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮಧ್ಯೆ ಮಾತುಕತೆ ನಡೆದ ಬಳಿಕ ಪಟ್ಟಿ ಆಖೈರಾಗಲಿದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿಯಾಗಲಿರುವ ಎಚ್.ಡಿ.ಕುಮಾರಸ್ವಾಮಿ ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲಿದ್ದಾರೆ. ಉಪಮುಖ್ಯಮಂತ್ರಿಯಾಗಲಿರುವ ಜಿ. ಪರಮೇಶ್ವರ ಅವರಿಗೆ ಗೃಹ ಖಾತೆ ಸಿಗುವ ಸಾಧ್ಯತೆ ಇದೆ.
78 ಶಾಸಕರ ಬಲ ಹೊಂದಿರುವ ಕಾಂಗ್ರೆಸ್, ಲೋಕೋಪಯೋಗಿ, ಕಂದಾಯ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ತಮ್ಮ ಪಕ್ಷಕ್ಕೆ ಬೇಕು ಎಂಬ ಬೇಡಿಕೆ ಇಟ್ಟಿದೆ.
ಕಾಂಗ್ರೆಸ್‌ನ ಆರ್.ವಿ. ದೇಶಪಾಂಡೆ, ಶಾಮನೂರು ಶಿವಶಂಕರಪ್ಪ, ಡಿ.ಕೆ. ಶಿವಕುಮಾರ್, ಎಚ್.ಕೆ. ಪಾಟೀಲ, ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ, ಯು.ಟಿ. ಖಾದರ್, ಎಸ್. ಆರ್ ಪಾಟೀಲ ಹಾಗೂ ಕೆಲವು ಯುವ ಶಾಸಕರು ಸಚಿವ ಸ್ಥಾನದ ಪಟ್ಟಿಯಲ್ಲಿದ್ದಾರೆ ಎಂದು ಮೂಲಗಳು ಹೇಳಿವೆ.
ಜೆಡಿಎಸ್‌ನ ಎಚ್.ಡಿ. ರೇವಣ್ಣ, ಬಸವರಾಜ ಹೊರಟ್ಟಿ, ಬಂಡೆಪ್ಪ ಕಾಶೆಂಪೂರ, ಜಿ.ಟಿ. ದೇವೇಗೌಡ, ಕೆ.ಎಂ. ಶಿವಲಿಂಗೇಗೌಡ,ಎಚ್.ಕೆ. ಕುಮಾರಸ್ವಾಮಿ, ಎಚ್. ವಿಶ್ವನಾಥ, ಸಿ.ಎಸ್. ಪುಟ್ಟರಾಜು, ಎ.ಟಿ. ರಾಮಸ್ವಾಮಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್ ಸಂಪುಟ ಸೇರುವ ನಿರೀಕ್ಷೆ ಇದೆ.