janadhvani

Kannada Online News Paper

ಮಂ.ದೇವಿ ಸಂತೆ ಸ್ಥಳ ಪಾಲಿಕೆಯದ್ದು,ಸರ್ವ ಧರ್ಮೀಯ ವರ್ತಕರಿಗೆ ಸೇರಿದ್ದು- ಕೆ.ಅಶ್ರಫ್

ಸಾಮೂಹಿಕವಾಗಿ ವರ್ತಕ ಸಮುದಾಯಕ್ಕೆ ನಿಷೇಧ ಹೇರಿದರೆ ಅದು ಸಾಂವಿಧಾನಿಕ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಆಗಿದೆ.

ಮಂಗಳೂರು: ಮಂಗಳಾ ದೇವಿ ದಸರಾ ಜಾತ್ರೆ ಮಹೋತ್ಸವದ ಸಂದರ್ಭದಲ್ಲಿ ಸಂತೆ ನಡೆಸುವಂತಹಾ ಸ್ಥಳ ಪಾಲಿಕೆಗೆ ಸೇರಿದ್ದು, ಸರ್ವ ಧರ್ಮೀಯ ವರ್ತಕರಿಗೆ ಮಂಗಳೂರು ಮಹಾ ನಗರ ಪಾಲಿಕೆ ಆದ್ಯತೆಯ ಆಧಾರದಲ್ಲಿ ವರ್ತಕ ಸ್ಟಾಲ್ ( ಮುಂಗಟ್ಟು) ಗಳನ್ನು ಏಲಂ ಪ್ರಕ್ರಿಯೆಯಲ್ಲಿ ಹಂಚಿಕೆ ಮಾಡಬೇಕಿದೆ ಎಂದು ಮಾಜಿ ಮೇಯರ್, ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು ಹೇಳಿದ್ದಾರೆ.

ಯಾವುದೇ ಧಾರ್ಮಿಕ ಉತ್ಸವಗಳ ಸಮಯದಲ್ಲಿ ಸಂತೆ ವರ್ತಕ ಚಟುವಟಕೆಗಳನ್ನು ಕೋಮು ಭಾವನೆಯಲ್ಲಿ ತಾರತಮ್ಯ ಗೊಳಿಸಿದರೆ, ಸ್ಥಳೀಯ ಆರ್ಥಿಕ ಚಟುವಟಿಕೆ ಸ್ಥಗಿತ ಗೊಳ್ಳುವ ಸಂಭಾವ್ಯ ಅಪಾಯವಿದೆ. ಸಂತೆ ಸ್ಥಳವನ್ನು ಮತೀಯ ವರ್ತಕರ ಸಂಘಟನೆ ಸ್ಥಾಪಿಸುವ ಮೂಲಕ ಸಾಮೂಹಿಕವಾಗಿ ವರ್ತಕ ಸಮುದಾಯಕ್ಕೆ ನಿಷೇಧ ಹೇರಿದರೆ ಅದು ಸಾಂವಿಧಾನಿಕ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಆಗಿದೆ.

ಮಂಗಳಾ ದೇವಿ ಉತ್ಸವದ ಪ್ರಕ್ರಿಯೆಯನ್ನು ಗೌರವಿಸುವುದರೊಂದಿಗೆ ಸರ್ವ ಧರ್ಮೀಯರ ವರ್ತಕರ ಹಕ್ಕುಗಳನ್ನು ಪಾಲಿಸಲು ಆಡಳಿತ ಮಂಡಳಿ ನಿರ್ಧರಿಸಬೇಕಿದೆ.
ಮತೀಯ ವರ್ತಕರ ಸಂಘಟನೆ ಸ್ಥಾಪಿಸಿ ಆ ಮೂಲಕ ಅಕ್ರಮ ಹಫ್ತಾ ವಸೂಲಿ ಅಥವಾ ಸಂತೆ ಸ್ಟಾಲ್ ಬ್ಲಾಕ್ ದಂಧೆ ನಿಲ್ಲಬೇಕಿದೆ.

ಸಂಘಟನೆಯ ಹೆಸರಲ್ಲಿ ಅನ್ಯ ಧರ್ಮೀಯರ ವರ್ತಕ ಹಕ್ಕುಗಳನ್ನು ತಡೆಯುವವರ ಪಾವಿತ್ರ್ಯತೆಯೇ ಮೇಲು ಎಂದಿದ್ದರೆ, ಜಿಲ್ಲೆಯ ಇತರ ವಾಣಿಜ್ಯ ಮಳಿಗೆಗಳಲ್ಲಿ ಅನ್ಯ ಧರ್ಮೀಯ ಗ್ರಾಹಕರನ್ನು ನಿಷೇಧಿಸುವ ಪ್ರಸ್ತಾಪ ಮುಂದಿಟ್ಟು ನೋಡಲಿ. ಹಿಂದಿನ ವರ್ಷ ನಗರ ಮತ್ತು ಹೊರವಲಯದ ಹಲವು ವಾಣಿಜ್ಯ ಉತ್ಸವಗಳಲ್ಲಿನ ಫಲಿತಾಂಶವೇ ಮುಂದೆ ಸಂಭವಿಸಿದರೆ ಆಶ್ಚರ್ಯವಿಲ್ಲ ಎಂದು ಅಶ್ರಫ್ ಹೇಳಿದರು.

ಮಂಗಳೂರಿನ ವಾಣಿಜ್ಯ ಮಂಡಳಿ ಈ ಬಗ್ಗೆ ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸಬೇಕು. ತಪ್ಪಿದಲ್ಲಿ ನಿರ್ಧಿಷ್ಟ ಸಮುದಾಯದ ಜನರು ಬಹು ಅಗತ್ಯ ವ್ಯವಹಾರಗಳನ್ನು ಇತರ ಜಿಲ್ಲೆಗಳಿಗೆ ಒತ್ತಾಯ ಪೂರ್ವಕ ವಿಕೇಂದ್ರೀಕರಿಸಬೇಕಾಗುತ್ತದೆ. ವಾಣಿಜ್ಯ ಸಮುದಾಯ ಇದನ್ನು ತಿಳಿಯುವುದು ಒಳಿತು ಎಂದು ಕೆ.ಅಶ್ರಫ್( ಮಾಜಿ ಮೇಯರ್) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com