ಜಿದ್ದಾ: ಸೌದಿ ಅರೇಬಿಯಾದಲ್ಲಿ ಇತ್ತೀಚೆಗೆ ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಗೃಹ ಕಾರ್ಮಿಕರು ಮತ್ತು ಉದ್ಯೋಗದಾತರ ಹಕ್ಕುಗಳನ್ನು ರಕ್ಷಿಸಲು ಹಲವಾರು ಹೊಸ ಕಾನೂನುಗಳನ್ನು ಜಾರಿಗೆ ತರಲಾಗಿದೆ.
ಮುಂದುವರಿದ ಭಾಗವಾಗಿ, ಎರಡೂ ವಿಭಾಗದ ಹಕ್ಕುಗಳನ್ನು ರಕ್ಷಿಸಲು ಹೆಚ್ಚಿನ ನಿಯಮಗಳನ್ನು ಜಾರಿಗೆ ತರಲಾಗುತ್ತದೆ. ಗೃಹ ಕಾರ್ಮಿಕರನ್ನು ಕೆಟ್ಟದಾಗಿ ನಡೆಸಿಕೊಂಡರೆ, ಉದ್ಯೋಗದಾತರಿಗೆ ಗರಿಷ್ಠ 2000 ರಿಯಾಲ್‌ಗಳ ದಂಡ ಅಥವಾ ಒಂದು ವರ್ಷ ನೇಮಕಾತಿ ರದ್ದು ಅಥವಾ ಎರಡನ್ನೂ ವಿಧಿಸಲಾಗುತ್ತದೆ.
ಈ ಬಗ್ಗೆ ಗೌಪ್ಯವಾಗಿ ಕಾರ್ಮಿಕರು ಮಾಹಿತಿ ನೀಡಿದರೆ, ಉದ್ಯೋಗದಾತರಿಗೆ ದಂಡ ವಿಧಿಸಲಾಗುವುದು ಎಂದು ಹೊಸ ನಿಯಮಗಳಲ್ಲಿ ಸೂಚಿಸಲಾಗಿದೆ.
ಗೃಹ ಕಾರ್ಮಿಕರನ್ನು ಅವರ ಆರೋಗ್ಯ ಅಥವಾ ಸುರಕ್ಷತೆಗೆ ಧಕ್ಕೆ ತರುವ ಅಥವಾ ಅಪಾಯಕಾರಿ ಕೆಲಸಕ್ಕೆ ನಿಯೋಜಿಸಬಾರದು ಹಾಗೂ ಕಾರ್ಮಿಕರ ಮಾನವ ಘನತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಉದ್ಯೋಗದಾತನ ಜವಾಬ್ದಾರಿಯಾಗಿದೆ ಎಂದು ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ.
ನಿಯಮಗಳನ್ನು ಉಲ್ಲಂಘಿಸುವ ಕಾರ್ಮಿಕರಿಗೂ 2000 ರಿಯಾಲ್‌ಗಳಿಂದ 5000 ರಿಯಾಲ್‌ಗಳ ನಡುವೆ ದಂಡ ವಿಧಿಸಲಾಗುತ್ತದೆ, ಮುಂದೆ ಜೀವಮಾನದವರೆಗೆ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಲಾಗುತ್ತದೆ ಅಥವಾ ಎರಡನ್ನೂ ವಿಧಿಸಲಾಗುತ್ತದೆ.
ಪುನರಾವರ್ತಿತ ಅಪರಾಧಿಗಳಿಂದ ದಂಡ ಹೆಚ್ಚಾದಲ್ಲಿ, ಕೆಲಸಗಾರನು ಊರಿಗೆ ತೆರಳುವ ವೆಚ್ಚವನ್ನೂ ಭರಿಸಬೇಕಾಗುತ್ತದೆ ಎಂದು ಹೊಸ ನಿಯಮಗಳು ಸೂಚಿಸುತ್ತವೆ.