janadhvani

Kannada Online News Paper

ಮಕ್ಕಾ-ಮದೀನಾ ಸಂಪರ್ಕ ಕಲ್ಪಿಸುವ ಅತಿವೇಗದ ‘ಹರಮೈನ್’ ರೈಲು

ಜಿದ್ದಾ: ಸೌದಿ ಅರೇಬಿಯಾದಲ್ಲಿ ಮಕ್ಕಾ-ಮದೀನಾ ನಗರಗಳಿಗೆ ಸಂಪರ್ಕ ಕಲ್ಪಿಸುವ ಹರಮೈನ್ ಹೈ ಸ್ಪೀಡ್ ರೈಲು ಮುಂದಿನ ಸೆಪ್ಟೆಂಬರ್ ನಲ್ಲಿ ಸೇವೆ ಆರಂಭಿಸಲಿದೆ.ಸೌದಿ ಸಾರಿಗೆ ಸಚಿವ ನಬಿಲ್ ಅಲ್-ಅಮೂದಿ ಈ ವಿಷಯವನ್ನು ತಿಳಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಹರಮೈನ್ ರೈಲು ಅತಿವೇಗದ ರೈಲಾಗಲಿದೆ.

ಈ ವರ್ಷದ ಹಜ್‌ಗೆ ಮುಂಚಿತವಾಗಿ, ರೈಲು ಆರಂಭವಾಗಲಿದೆ ಎಂದು ಈ ಹಿಂದೆ ವರದಿಯಾಗಿದ್ದವು. ಆಗಸ್ಟ್ ಮೂರನೇ ವಾರ ಹಜ್ ಪ್ರಾರಂಭವಾಗಲಿದೆ.ಹರಮೈನಿ ರೈಲು ಸೇವೆಯು ಹಜ್ ಮತ್ತು ಉಮ್ರಾ ಯಾತ್ರಿಗಳಿಗೆ ಹೆಚ್ಚಿನ ಫಲ ನೀಡಲಿದೆ.

ಬಹುತೇಕ ಯಾತ್ರಿಕರು ಪ್ರಸ್ತುತ ಮಕ್ಕಾ ಮತ್ತು ಮದೀನಾಗೆ ಐದು ಅಥವಾ ಆರು ಗಂಟೆಗಳ ಕಾಲ ವ್ಯಯಿಸಿ ರಸ್ತೆ ಮೂಲಕ ಪ್ರಯಾಣಿಸುತ್ತಿದ್ದಾರೆ.ರೈಲು ಸೇವೆಯ ಪ್ರಾರಂಭದೊಂದಿಗೆ, ಈ ನಗರಗಳ ನಡುವೆ ಸುರಕ್ಷಿತವಾಗಿ ಎರಡು ಗಂಟೆಗಳಲ್ಲಿ ಪ್ರಯಾಣಿಸಬಹುದು.

ಗಂಟೆಗೆ 300 ಕಿ.ಮೀ ವೇಗದಲ್ಲಿ ಹರಮೈನ್ ರೈಲು ಸಂಚರಿಸಲಿದ್ದು,ಹರಮೈನ್ ಎಕ್ಸ್ ಪ್ರೆಸ್ ನ್ನು ಗಂಟೆಗೆ 360 ಕಿಮೀ ಸಂಚರಿಸಬಲ್ಲ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.ಜಪಾನ್ ನಲ್ಲಿ ಬುಲೆಟ್ ರೈಲು ಗಂಟೆಗೆ 320 ಕಿ.ಮೀ. ಸಂಚರಿಸುತ್ತಿದ್ದು, ಇದು ವಿಶ್ವದಲ್ಲೇ ಅತಿವೇಗದ ರೈಲು ಗಾಡಿಯಾಗಿದೆ.

2019 ರಲ್ಲಿ ಹರಮೈನ್ ರೈಲು ಪೂರ್ತಿಯಾಗಿ ಕಾರ್ಯಾಚರಿಸಲಿದೆ. ಆ ಮೂಲಕ ಆರು ಕೋಟಿ ಪ್ರಯಾಣಿಕರು ವರ್ಷದಲ್ಲಿ ಪ್ರಯಾಣಿಸಬಹುದು.ಮಕ್ಕಾ ಮತ್ತು ಮದೀನಾ ನಡುವೆ, ಜಿದ್ದಾದ ಸುಲೈಮಾನಿಯಾ, ಜಿದ್ದಾ ವಿಮಾನ ನಿಲ್ದಾಣ ಮತ್ತು ಕಿಂಗ್ ಅಬ್ದುಲ್ಲಾ ಎಕನಾಮಿಕ್ ಸಿಟಿಯಲ್ಲಿ ಮಾತ್ರ ‘ಹರಮೈನಿ’ ನಿಲ್ದಾಣ ಗಳಿವೆ.

error: Content is protected !! Not allowed copy content from janadhvani.com