janadhvani

Kannada Online News Paper

ವಿದೇಶೀಯರ ಜೀವನ ಮಟ್ಟ ಸುಧಾರಿಸಲು ವಿಫುಲ ಯೋಜನೆಯೊಂದಿಗೆ ಸೌದಿ ಸರಕಾರ

ಜಿದ್ದಾ: ಸೌದಿ ಅರೇಬಿಯಾದಲ್ಲಿ ವಲಸಿಗರಿಗೆ ಜೀವನ ಮಟ್ಟವನ್ನು ಸುಧಾರಿಸಲು ವಿಫುಲ ಯೋಜನೆ ಜಾರಿಗೆ ಬರಲಿದೆ. ಮಹಮ್ಮದ್ ಬಿನ್ ಸಲ್ಮಾನ್ ರಾಜಕುಮಾರನ ಅಧ್ಯಕ್ಷತೆಯಲ್ಲಿ ನಡೆದ ಸಭೆಯು, ವಿದೇಶಿಗಳಿಗೆ ಹೆಚ್ಚಿನ ಸೇವೆಗಳನ್ನು ಒದಗಿಸಲು ವಿಶೇಷ ಕಾರ್ಡ್ ಜಾರಿಗೆ ತರಲು ನಿರ್ಣಯಿಸಿದೆ.ಕಿರೀಟಾಧಿಕಾರಿ, ರಕ್ಷಣಾ ಮಂತ್ರಿ ಮಹಮ್ಮದ್ ಬಿನ್ ಸಲ್ಮಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಈ ಮಹತ್ವಪೂರ್ಣ ನಿರ್ಣಯ ಕೈಗೊಳ್ಳಲಾಗಿದೆ.

ವಿದೇಶೀಯರಿಗೆ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಲಭ್ಯವಾಗಿಸುವುದು, ವಿದೇಶಿ ಪ್ರಜೆಗಳ ಮಕ್ಕಳ ಶಿಕ್ಷಣಕ್ಕಾಗಿ ಉನ್ನತ ಗುಣಮಟ್ಟದ ಶೈಕ್ಷಣಿಕ ಸಂಸ್ಥೆಗಳನ್ನು ಮತ್ತು ಇತರ ಮೂಲ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದು ಮುಂತಾದವುಗಳು ಹೊಸ ಯೋಜನೆಯಲ್ಲಿದೆ.

ವಿದೇಶಿಯರು ತಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ದೇಶೀಯರೊಂದಿಗೆ ಪರಸ್ಪರ ಹಂಚಿಕೊಳ್ಳಲು ಅವಕಾಶಗಳು ಲಭ್ಯವಾಗಲಿದೆ.ಜೊತೆಗೆ, ಜೀವನ ನಿರ್ವಹಣೆ, ನಗರಾಭಿವೃದ್ಧಿ, ಆಧುನೀಕರಣ, ವಾಸ ಸೌಕರ್ಯಗಳು, ಪ್ರಯಾಣ, ಕ್ರೀಡೆ,  ಮನರಂಜನೆ ಮತ್ತು ಶಿಕ್ಷಣದ ಗುಣಮಟ್ಟವನ್ನು ನವೀಕರಿಸಲು 130 ಶತಕೋಟಿ ರಿಯಾಲ್ ಗಳನ್ನು ಖರ್ಚು ಮಾಡಲಾಗುವುದು.ಅಂತಾರಾಷ್ಟ್ರೀಯ ಗುಣಮಟ್ಟದ ವಾಸ ಸ್ಥಳ, ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದಂತಹ ವಿವಿಧ ಸೇವೆಗಳು ಮೂಲ ನಿವಾಸಿಗಳ ಜೊತೆಗೆ ವಿದೇಶಿಗಳಿಗೂ ಲಭ್ಯವಾಗಲಿವೆ.

ವಿವಿಧ ಇಲಾಖೆಗಳಿಂದ ಹೆಚ್ಚಿನ ಸೇವೆಗಳನ್ನು ಒದಗಿಸಲು ವಿದೇಶಿಗಳಿಗೆ ವಿಶೇಷ ಕಾರ್ಡುಗಳನ್ನು ಅನುಮತಿಸಲು ಪ್ರಿನ್ಸ್ ಸಲ್ಮಾನ್ ಅಧ್ಯಕ್ಷತೆಯಲ್ಲಿ ಸೇರಿದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

error: Content is protected !! Not allowed copy content from janadhvani.com