ಕೋಝಿಕ್ಕೋಡ್ | ಸೌದಿ ಅರೇಬಿಯಾಕೆ ಕುಟುಂಬ, ವ್ಯಾಪಾರ, ವಿದ್ಯಾರ್ಥಿ, ಮತ್ತು ಭೇಟಿ ಸಹಿತವಿರುವ ವೀಸಾಗಳಿಗೆ ವಿಎಫ್‌ಎಸ್ ಕೇಂದ್ರಗಳ ಮೂಲಕ ಮಾತ್ರ ಸ್ಟಾಂಪಿಂಗ್ ಪ್ರಕ್ರಿಯೆಯನ್ನು ಆರಂಭಿಸಿರುವುದರಿಂದ ಉಂಟಾಗಿರುವ ತೊಂದರೆಯನ್ನು ನಿವಾರಿಸುವಂತೆ ಕೋರಿ, ಭಾರತೀಯ ಗ್ರಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರು ಸೌದಿ ಪ್ರಧಾನ ಮಂತ್ರಿ ಮತ್ತು ಕ್ರೌನ್ ಪ್ರಿನ್ಸ್ ಮುಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಪತ್ರ ಬರೆದಿದ್ದಾರೆ.
ಭಾರತೀಯ ಸೌದಿ ರಾಯಭಾರಿ ಮೂಲಕ ಕಳುಹಿಸಲಾದ ಪತ್ರದಲ್ಲಿ, ವೀಸಾ ಸ್ಟಾಂಪಿಂಗ್ ಪ್ರಕ್ರಿಯೆಯು ವಲಸಿಗ-ಸ್ನೇಹಿ ಆಗಿರಬೇಕು ಮತ್ತು VFS ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸ ಬೇಕೆಂದು ಕಾಂತಪುರಂ ಉಸ್ತಾದರು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಕಳೆದ ತಿಂಗಳಿನಿಂದ ಸೌದಿ ಅರೇಬಿಯಾದ ವೀಸಾ ಪ್ರಕ್ರಿಯೆಯಲ್ಲಿ ಬದಲಾವಣೆಯಾಗಿದೆ. ಟ್ರಾವೆಲ್ ಏಜೆನ್ಸಿಗಳ ಮೂಲಕ ಮಾಡಲಾಗುತ್ತಿದ್ದ ಸ್ಟಾಂಪಿಂಗ್ ಕಾರ್ಯವಿಧಾನಗಳು ಈಗ VFS ಕೇಂದ್ರಗಳ ಮೂಲಕ ಮಾತ್ರ ಸಾಧ್ಯ. ಕೆಲಸದ ವೀಸಾಗಳಿಗೂ ಈ ನಿಯಮವನ್ನು ಜಾರಿಗೊಳಿಸಲಾಗಿದ್ದರೂ, ಹಜ್ ಯಾತ್ರೆ ಪೂರ್ಣಗೊಳ್ಳುವವರೆಗೆ ಸಡಿಲಿಕೆ ಇರಬಹುದೆಂದು ಅಂದಾಜಿಸಲಾಗಿದೆ.
ವೀಸಾ ಸ್ಟಾಂಪಿಂಗ್‌ಗಾಗಿ ಸೌದಿ ಅರೇಬಿಯಾದ ವಿದೇಶಾಂಗ ಸಚಿವಾಲಯದ ವೆಬ್‌ಸೈಟ್‌ನಲ್ಲಿ ನೋಂದಣಿ ಸೇರಿದಂತೆ ಎಲ್ಲಾ ಸೇವೆಗಳನ್ನು ವಿಎಫ್‌ಎಸ್ ಕೇಂದ್ರಗಳ ಮೂಲಕವೇ ಮಾಡಬೇಕಾಗಿದೆ.
ಕೇರಳದ ಕೊಚ್ಚಿಯಲ್ಲಿನ ಕೇಂದ್ರ ಸೇರಿದಂತೆ ದೇಶದಾದ್ಯಂತ ವೀಸಾ ಸೇವೆಗಳಿಗಾಗಿ ಒಂಬತ್ತು ಕೇಂದ್ರಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ. ಅಪಾಯಿಂಟ್ಮೆಂಟ್ ಪಡೆದು, ದಾಖಲೆಗಳನ್ನು ಪ್ರಸ್ತುತಪಡಿಸಿ,ಬಯೋಮೆಟ್ರಿಕ್ಸ್ ಸೇರಿದಂತೆ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿದರೆ ಮಾತ್ರ ವೀಸಾ ಸ್ಟಾಂಪಿಂಗ್ ಸಾಧ್ಯ.
ಹೆಚ್ಚು ವಲಸಿಗರಿರುವ ಕೇರಳದಂತಹ ರಾಜ್ಯಗಳಲ್ಲಿ ಒಂದೇ VFS ಕೇಂದ್ರಕ್ಕೆ ಸರಿಹೊಂದಿಸಲು ಸಾಧ್ಯವಾಗದಷ್ಟು ಅರ್ಜಿದಾರರ ಸಂಖ್ಯೆ ಇರುವುದರಿಂದ, ಅಪಾಯಿಂಟ್ಮೆಂಟ್ ಲಭಿಸಲು ವಿಳಂಬವಾಗುತ್ತಿದೆ.
ತಿರುವನಂತಪುರದಿಂದ ಕಾಸರಗೋಡಿನವರೆಗಿನ ಜನರು ಸೌದಿ ವೀಸಾ ಸ್ಟಾಂಪಿಂಗ್ ಪ್ರಕ್ರಿಯೆಗಳಿಗೆ ಕೊಚ್ಚಿಯನ್ನು ಅವಲಂಬಿಸುವುದು ಕಷ್ಟಕರವಾಗಿದೆ. ಈ ಪರಿಸ್ಥಿತಿಯಲ್ಲಿ ಕೊಚ್ಚಿಯ ಹೊರತಾಗಿ ಹೆಚ್ಚು ಸೌದಿ ಅನಿವಾಸಿಗಳಿರುವ ಮಲಬಾರ್ ನಲ್ಲೂ ವಿಎಫ್ ಎಸ್ ಕೇಂದ್ರ ಆರಂಭಿಸಬೇಕು ಎಂದು ಕಾಂತಪುರಂ ಉಸ್ತಾದ್ ಪತ್ರದಲ್ಲಿ ಆಗ್ರಹಿಸಿದ್ದಾರೆ