janadhvani

Kannada Online News Paper

ಹಜ್ ಯಾತ್ರೆಗೆ ಆನ್‌ಲೈನ್ ಅರ್ಜಿಗಳನ್ನು ಸ್ವೀಕರಿಸಲು ಆರಂಭ- ಹಜ್ ಸಮಿತಿ ಪ್ರಕಟ

ಹಜ್ ಯಾತ್ರೆಗೆ ಹಿರಿಯರು, ಮಹಿಳೆಯರು, ವಿಶೇಷ ಚೇತನರಿಗೆ ಯಾತ್ರೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ.

ದೆಹಲಿ: ಈ ವರ್ಷದ ಹಜ್ ಯಾತ್ರೆಗೆ ಆನ್‌ಲೈನ್ ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸಿರುವುದಾಗಿ ಭಾರತೀಯ ಹಜ್ ಸಮಿತಿ (Haj Committee of India) ಪ್ರಕಟಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 10. ಪೋಷಕ ದಾಖಲೆಗಳೊಂದಿಗೆ ಅರ್ಜಿಗಳನ್ನು ಭಾರತದ ಹಜ್ ಸಮಿತಿಯ ಅಧಿಕೃತ ವೆಬ್‌ಸೈಟ್ https://hajcommittee.gov.in/ ಮತ್ತು ಹಜ್ ಸಮಿತಿಯ HCOI ಮೊಬೈಲ್ ಅಪ್ಲಿಕೇಶನ್ ಮೂಲಕ ಸಲ್ಲಿಸಬಹುದು.

ಸೌದಿ ಸರ್ಕಾರ ಈ ಬಾರಿ ಭಾರತಕ್ಕೆ 1,75,025 ಮಂದಿ ಹಜ್ ಯಾತ್ರಿಕರ ಕೋಟಾವನ್ನು ನಿಗದಿಪಡಿಸಿದೆ. ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ಪ್ರಕಟಿಸಿದ ಹೊಸ ಹಜ್ ನೀತಿಯ ಪ್ರಕಾರ ಶೇ.80ರಷ್ಟು ಕೋಟಾ ಸರ್ಕಾರದ ಮೂಲಕ ಹಾಗೂ ಶೇ.20ರಷ್ಟು ಖಾಸಗಿ ಹಜ್ ಗುಂಪುಗಳ ಮೂಲಕ ನೀಡಲಾಗುತ್ತದೆ.

ಕಳೆದ ವರ್ಷ ಇದು 70/30 ಆಗಿತ್ತು. ಇದಲ್ಲದೇ ವಿಐಪಿ ಹಜ್ ಕೋಟಾವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದ್ದು, ಹಜ್ ಗೆ ಅರ್ಜಿ ಸಲ್ಲಿಸಲು ಇದ್ದ 300 ರೂ. ಶುಲ್ಕವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ದೇಶದಲ್ಲಿ ಹಜ್ ನಿರ್ಗಮನ ಕೇಂದ್ರಗಳ ಸಂಖ್ಯೆಯನ್ನು 25 ಕ್ಕೆ ಹೆಚ್ಚಿಸಲಾಗಿದೆ. ಕರ್ನಾಟಕದಲ್ಲಿ ಮಂಗಳೂರು ಮತ್ತು ಬೆಂಗಳೂರು ಹಜ್ ಎಂಬಾರ್ಕೇಶನ್ ಪಾಯಿಂಟ್‌ಗಳಾಗಿವೆ.

ಹಜ್ ಯಾತ್ರೆಗೆ ಹಿರಿಯರು, ಮಹಿಳೆಯರು, ವಿಶೇಷ ಚೇತನರಿಗೆ ಯಾತ್ರೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. 45 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಮಹಿಳೆಯರು ತಾವೇ ಅರ್ಜಿ ಸಲ್ಲಿಸಬಹುದು.

ಕೇಂದ್ರ ಹಜ್ ಸಮಿತಿ ಅಧ್ಯಕ್ಷ ಎ.ಪಿ.ಅಬ್ದುಲ್ಲಕುಟ್ಟಿ ಮಾತನಾಡಿ, ಹಜ್ ಯಾತ್ರೆಯ ವೆಚ್ಚವನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ ಮತ್ತು ಪ್ರತಿ ಯಾತ್ರಿಕರಿಗೆ ಈ ಬಾರಿ ಕನಿಷ್ಠ ಅರ್ಧ ಲಕ್ಷ ರೂಪಾಯಿ ಕಡಿತವಾಗಲಿದೆ. ಈ ಬಾರಿ ಹಜ್ ಸಮಿತಿಯು ಯಾತ್ರಿಕರಿಂದ ಹಣ ವಸೂಲಿ ಮಾಡಿ ಬ್ಯಾಗ್, ಛತ್ರಿ ಖರೀದಿಯಿಲ್ಲ,ಬದಲಾಗಿ ಯಾತ್ರಾರ್ಥಿಗಳೇ ತಮಗೆ ಬೇಕಾದ ಬ್ಯಾಗ್ ಮತ್ತು ಕೊಡೆಗಳನ್ನು ತರಬೇಕು. ಬ್ಯಾಗ್, ಕೊಡೆ ಹೆಸರಿನಲ್ಲಿ ದೊಡ್ಡ ಹಗರಣ ನಡೆದಿದೆ ಎಂದೂ ಅಬ್ದುಲ್ಲಕುಟ್ಟಿ ಹೇಳಿದರು. ಹಜ್ ಯಾತ್ರಿಕರಿಂದ ಭಾರತೀಯ ರೂಪಾಯಿಗಳನ್ನು ಖರೀದಿಸಿ ಸೌದಿ ರಿಯಾಲ್‌ಗಳನ್ನು ನೀಡುವ ಪರಿಪಾಠವನ್ನು ರದ್ದುಗೊಳಿಸಲಾಗಿದೆ ಎಂದರು.

ಶರತ್ತುಗಳು

1. ಅರ್ಜಿದಾರರು ಮೆಷಿನ್ ರೀಡಬಲ್ ಭಾರತೀಯ ಅಂತಾರಾಷ್ಟ್ರೀಯ ಪಾಸ್‌ಪೋರ್ಟ್ ಅನ್ನು ಹೊಂದಿರಬೇಕು. ಇದು 31ನೇ ಡಿಸೆಂಬರ್, 2023 ವರೆಗೆ ಮಾನ್ಯವಾಗಿರಬೇಕು.

2. ಅರ್ಜಿದಾರರು W.H.O ಅನುಮೋದಿತ ಎರಡು ಡೋಸ್ ಕೋವಿಡ್ ಲಸಿಕೆಯನ್ನು ತೆಗೆದುಕೊಂಡಿರಬೇಕು.

3. ಅರ್ಜಿದಾರರು ಪಾಸ್‌ಪೋರ್ಟ್‌ನ ಮೊದಲ ಮತ್ತು ಕೊನೆಯ ಪುಟ, ಬಿಳಿ ಹಿನ್ನೆಲೆಯೊಂದಿಗೆ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರ, ‘ಕವರ್ ಹೆಡ್’ ರದ್ದಾದ ಚೆಕ್‌ನ ಪ್ರತಿ ಮತ್ತು ವಿಳಾಸ ಪುರಾವೆಯ ಪ್ರತಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವುದು ಸಹ ಕಡ್ಡಾಯವಾಗಿದೆ ಎಂದು ಸೂಚನೆಗಳ ಪಟ್ಟಿ ತಿಳಿಸಿದೆ.

4. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10 ಮಾರ್ಚ್ 2023.

error: Content is protected !! Not allowed copy content from janadhvani.com