✍️ PKM ಉರುವಾಲು ಪದವು
ತುರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪನದಲ್ಲಿ ಎರಡು ದೇಶಗಳು ಅಕ್ಷರಶಃ ನಲುಗಿ ಹೋಗಿದೆ.ಅದರಲ್ಲೂ ತುರ್ಕಿ ದೇಶದಲ್ಲಿ ಹೆಚ್ಚು ಪ್ರಾಣ ಹಾನಿ ಸಂಭವಿಸಿದ್ದು ಬಹುಶಃ ತುರ್ಕಿಯ ಚರಿತ್ರೆಯಲ್ಲಿ ಇದೊಂದು ಭೀಕರ ರೂಪದಲ್ಲಿ ಪ್ರಕೃತಿ ಮುನಿಸಿಕೊಂಡ ಘಟನೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಈಗಾಗಲೇ ರಕ್ಷಣಾ ಕಾರ್ಯಾಚರಣೆ ಮುಂದುವರಿಯುತ್ತಿದೆ.
ಭಾರತ ಸಹಿತ ಹಲವು ರಾಷ್ಟ್ರಗಳು ವಿಪತ್ತು ನಿರ್ವಹಣಾ ತಂಡವನ್ನು ಆಹಾರ, ಮೆಡಿಸಿನ್,ಬಟ್ಟೆಗಳು ಸಹಿತ ಮೂಲಭೂತವಾಗಿ ಬೇಕಾದ ಅಗತ್ಯ ವಸ್ತುಗಳೊಂದಿಗೆ ಅದರಲ್ಲೂ ವಿಶೇಷ ತರಬೇತಿ ಪಡೆದ ಶ್ವಾನದಳಗಳನ್ನೂ ತಂಡದೊಂದಿಗೆ ತುರ್ಕಿಗೆ ಕಳಿಸಿ ಕೊಡಲಾಗುತ್ತಿದೆ ಶ್ವಾನದಳಗಳು ರಕ್ಷಣಾ ಕಾರ್ಯಾಚರಣೆಗೆ ಬಹಳ ಸಹಕಾರಿಯಾಗಲಿದೆ.
ತುರ್ಕಿ ಮತ್ತು ಸಿರಿಯಾದ ಸಂತ್ರಸ್ತರಿಗಾಗಿ ಸೌದಿ ಅರೇಬಿಯಾ ಸಹಾಯವಾಣಿ ವೆಬ್ಸೈಟ್ ತೆರೆದಿದ್ದು, ಕೇವಲ ಒಂದು ಗಂಟೆಯಲ್ಲಿ ಇದಕ್ಕೆ ಹರಿದು ಬಂದದ್ದು ಸುಮಾರು 100 ಕೋಟಿ ರೂಪಾಯಿ ಯಾಗಿರುತ್ತದೆ.
ಹೌದು! ತುರ್ಕಿಗೆ ಎಲ್ಲರೂ ಸಹಾಯ ಮಾಡಲೇಬೇಕು.ಯಾಕೆಂದರೆ ತುರ್ಕಿ ಒಂದು ಬಲಿಷ್ಠ ಸೈನ್ಯದೊಂದಿಗೆ ,ಆರ್ಥಿಕವಾಗಿ ಸದೃಢವಾಗಿರುವ ದೇಶ. ಜಗತ್ತಿನ ಯಾವುದೇ ಕಡೆ ಏನೇ ಆಪತ್ತು ಸಂಭವಿಸಿದರು ಮೊದಲು ಧ್ವನಿ ಎತ್ತುವ ಮತ್ತು ಸಹಾಯ ಹಸ್ತ ಮತ್ತು ತನ್ನ ಸೈನ್ಯವನ್ನು ಕಳಿಸಿ ಕೊಡುವವರು ರಜಬ್ ತ್ವಯ್ಯಿಬ್ ಇರ್ದುಗಾನ್ (ತುರ್ಕಿ ಅಧ್ಯಕ್ಷ), ಆಗಿರುತ್ತಾರೆ.
ಆಪತ್ತುಗಳು ಯಾವಾಗ, ಎಲ್ಲಿ, ಯಾರಿಗೆ, ಯಾವ ರೀತಿ ಬಂದೆರಗಬಹುದೆಂದು ಯಾರಿಗೂ ಹೇಳಲು ಸಾದ್ಯವಿಲ್ಲ. ಪ್ರಕೃತಿ ವಿಕೋಪಗಳಿಗೆ ತುತ್ತಾಗದ ದೇಶವೇ ಕಡಿಮೆ.
ಭೂಕಂಪನಗಳು, ಚಂಡಮಾರುತ, ಸುನಾಮಿ, ಅತಿಯಾದ ಮಳೆ ಹೀಗೆ ವಿವಿಧ ರೂಪದಲ್ಲಿ ಅಲ್ಲಾಹನ ಪರೀಕ್ಷೆಗಳು ಜಗತ್ತಿನಲ್ಲಿ ಸಂಭವಿಸುತ್ತಿದೆ. ಹೀಗೆ ಸಂಭವಿಸುವ ಆಪತ್ತುಗಳಿಗೆ ಧರ್ಮ,ಜಾತಿ, ವರ್ಗ, ವರ್ಣ, ಪಂಗಡ ದೇಶ ಎಂಬ ಭೇದವಿರಲ್ಲ. ಮರಣ ಮತ್ತು ಅಲ್ಲಾಹನ ಆಪತ್ತು ಯಾವಾಗ ಬೇಕಾದರೂ ಸಂಭವಿಸಬಹುದು.
ಈ ರೀತಿಯ ಆಗಾಗ್ಗೆ ನಡೆಯ ವಿಪತ್ತುಗಳು ಅನ್ಯಾಯ, ಅನಾಚಾರ, ಅಧರ್ಮ ಮತ್ತು ಅಲ್ಲಾಹನಲ್ಲಿ ಯಾವುದೇ ಭಯವಿಲ್ಲದೆ ಬೇಕಾ ಬಿಟ್ಟಿಯಾಗಿ, ಧಿಕ್ಕಾರಿಯಾಗಿ ಜೀವಿಸುತ್ತಿರುವ ಮನುಷ್ಯನನ್ನು ಹೆಚ್ಚರಿಸಲೋಸ್ಕರ ಮತ್ತು ಅಲ್ಲಾಹನ ಶಿಕ್ಷೆಯು ಅತಿ ಕಠಿನ ಮತ್ತು ಕಠೋರವಾಗಿರುವುದು ಎಂಬುದನ್ನು ನೆನಪಿಸುವ ಸಲುವಾಗಿ ಮಾತ್ರವಾಗಿರುತ್ತದೆ.
ಆದರೆ ಇಲ್ಲಿ ಕೆಲವೊಂದು ವಿಕೃತ ಮನಸ್ಥಿತಿಯ, ಮನುಷ್ಯ ವರ್ಗಕ್ಕೆ ಅಪಚಾರವಾಗಿರುವ, ಪ್ರಾಣಿಗಳಿಗೆ ಹೋಲಿಸಿದರೆ ಪಾಪ ಆ ಮೂಕ ಪ್ರಾಣಿಗಳಿಗೆ ಮಾಡುವ ಅವಮಾನವಾಗುವ ರೀತಿಗಳಲ್ಲಿ ಒಂದು ವಿಭಾಗ ಮನುಷ್ಯ ರಕ್ಕಸರು ಸಾಮಾಜಿಕ ಜಾಲ ತಾಣಗಳಲ್ಲಿ ಮಾಡುತ್ತಿರುವ ಕಮೆಂಟ್ ಗಳನ್ನು ನೋಡುವಾಗ ಹೇಸಿಗೆ ಮತ್ತು ವಾಕರಿಕೆ ಬರುತ್ತಿದೆ.
ಭೂಕಂಪ ಸಂಭವಿಸಿದ್ದು ಎರಡು ಮುಸ್ಲಿಂ ರಾಷ್ಟ್ರಗಳಾದ ಕಾರಣಕ್ಕಾಗಿ ಕೆಲವು ಮನುಷ್ಯ ವರ್ಗಕ್ಕೆ ಸೇರಿದವರು ಎನ್ನುವವರು ಮಾಡುವ ವಿಶ್ಲೇಷಣೆಗಳು ನೋಡುವಾಗ ಸಾವಿನಲ್ಲೂ ಆನಂದ ಪಡೆಯುವ ಇಂತಹ ಸಮೂಹ ಭೂಮಿ ಮೇಲಿರುವಾಗ ಇಲ್ಲಿ ಭೂಕಂಪನವಲ್ಲ ಇನ್ನು ಏನು ಸಂಭವಿಸಿದರು ಅಚ್ಚರಿಯಿಲ್ಲ. ಅದರಲ್ಲೂ ಕೆಲವೊಂದು ವಿಧ್ಯಾಭ್ಯಾಸ ಹೊಂದಿರುವ ವ್ಯಕ್ತಿಗಳೇ ಈ ಮತಿಗೆಟ್ಟ ಕೆಲಸ ನಡೆಸುತ್ತಿರುವಾಗ, ಮಾನವೀಯತೆ ಇಲ್ಲದ ಎಂತಹಾ ಕಠೋರ ಮನಸ್ಥಿತಿಯವರು ಇದ್ದಾರೆ ಎಂಬುದನ್ನು ಊಹಿಸುವಾಗ ನಿಜವಾಗಲೂ ಅಸಹ್ಯವೆನಿಸುತ್ತದೆ.
ಇಂತಹ ವಿಕೃತ ಮನಸ್ಸಿನ ಕಲ್ಲು ಹೃದಯದವರೇ ನಾನು ನನ್ನದು ಎಂಬ ಆಹಾಂಕರ ಬಿಟ್ಟು, ಧರ್ಮ ಜಾತಿ ಹೆಸರಲ್ಲಿ ಕಲುಷಿತ ಗೊಂಡ ಹೃದಯವನ್ನು ಶುದ್ಧ ಗೊಳಿಸಿ ಒಂದಿಷ್ಟು ಮಾನವೀಯ ಮೌಲ್ಯಗಳನ್ನು ತುಂಬಿ ಕೊಳ್ಳಿರಿ. ಇಲ್ಲಿ ಯಾರೂ ಶಾಶ್ವತರಲ್ಲ ಹುಟ್ಟು ಆಕಸ್ಮಿಕ ಸಾವು ಖಚಿತ.ಹುಟ್ಟಿದ ಪ್ರತಿಯೊಬ್ಬನೂ ಕಡ್ಡಾಯವಾಗಿ ಸಾಯಲೇಬೇಕು.
ಸಾವು, ಕಷ್ಟ, ನಷ್ಟ,ವಿಪತ್ತು ಯಾರಿಗೆ ಯಾವಾಗ ಬೇಕಾದರೂ ಸಂಭವಿಸಬಹುದು. ಇರುವಷ್ಟು ದಿನ ಸಂತೋಷವಾಗಿ, ಪರಸ್ಪರ ಪ್ರೀತಿ ವಿಶ್ವಾಸ ಗಳಿಸಿಕೊಂಡು, ಮಾನವರಾಗಿ ಜೀವಿಸೋಣ. ನಾಳೆ ನಮಗೂ ಏನು ಕಾದಿದೆ ಎಂದು ಯಾರಿಗೂ ತಿಳಿಯದು. ಅಲ್ಲಾಹನು ನಮ್ಮೆಲ್ಲರಿಗೂ ಅವನ ಎಲ್ಲಾ ವಿಧದ ವಿಫತ್ತುಗಳಿಂದ ಸಂರಕ್ಷಣೆ ನೀಡಲಿ, ತುರ್ಕಿ ಮತ್ತು ಸಿರಿಯಾದ ಸಂತ್ರಸ್ತ ಕುಟುಂಬಕ್ಕೆ ಬೇಕಾಗಿ ಪ್ರಾರ್ಥಿಸುವ, ಸಾಧ್ಯವಾದಷ್ಟು ಅವರಿಗೆ ನಮ್ಮಿಂದಾಗುವ ಸಹಾಯ ನೀಡುವ.