janadhvani

Kannada Online News Paper

1

40 ಗಂಟೆಗಳ ವಾದ-ಪ್ರತಿವಾದಕ್ಕೆ ವೇದಿಕೆಯಾದ KT ಮಾನು ಮುಸ್ಲಿಯಾರ್ (ನ:ಮ)ರವರ ಪಂಥಾಹ್ವಾನ

ಮೊನ್ನೆ ಮರಣ ಹೊಂದಿದ ವೈಲತ್ತರ ಮುಹಮ್ಮದ್ ಕುಂಞ್ಞಿ ಮೌಲವಿ ಉಸ್ತಾದರ ಅನುಸ್ಮರಣೆ ಪ್ರಯುಕ್ತ ಸುಲ್ತಾನುಲ್ ಉಲಮಾ AP ಉಸ್ತಾದ್ ಬರೆದ ಲೇಖನ.

ಕನ್ನಡಕ್ಕೆ: ಅಬೂಶಝ ಪುತ್ತೂರು

ಇಸವಿ 1965-68 ನಾನು ಮಂಙ್ಙಾಟ್ಟ್ ಮುದರ್ರಿಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಕಾಲ. ಆ ಕಾಲಘಟ್ಟದ ಪ್ರಮುಖ ವಾಗ್ಮಿಯಾಗಿದ್ದರು ವೈಲತ್ತರ ಮುಹಮ್ಮದ್ ಕುಂಞಿ ಮೌಲವಿ. ಅವರು ಆಲಪ್ಪುಝ ಪ್ರದೇಶದವರಾಗಿದ್ದರೂ, ಅವರ ಹೆಚ್ಚಿನ ಪ್ರಭಾಷಣಗಳು ಮಲಬಾರ್‌ನಲ್ಲಾಗಿತ್ತು.

ಅವರ ಪ್ರತಿ ಕಾರ್ಯಕ್ರಮಕ್ಕೂ ಸಾವಿರಾರು ಮಂದಿ ಕೇಳುಗರಾಗಿ ಸೇರುತ್ತಿದ್ದರು. ಮಲಬಾರಿನ ಜನರಿಗೆ ಹೆಚ್ಚು ಪರಿಚಿತವಲ್ಲದ ಭಾಷಾ ಶೈಲಿಯನ್ನು ಅವರು ಉಪಯೋಗಿಸುತ್ತಿದ್ದರು. ಉಪನ್ಯಾಸದ ಮಧ್ಯದಲ್ಲಿ ಅನೇಕ ಮಲಯಾಳಂ ಕವಿತೆಗಳನ್ನು ಉಲ್ಲೇಖಿಸಿ ಭಾಷಣ ಮಾಡುವ ಶೈಲಿ ವೈಲತರವರ ಭಾಷಣದ ವೈಶಿಷ್ಟ್ಯವಾಗಿತ್ತು.

ಅವರು ಒಮ್ಮೆ ಪೂನೂರು ಸಮೀಪದ ತಚ್ಚಂಪೋಯಿಲ್‌ಗೆ ಬಂದರು. ವಾಸ ಪಿ.ಸಿ. ಅಹಮದ್ ಹಾಜಿಯವರ ಮನೆಯಲ್ಲಾಗಿತ್ತು. ಕರುವಾಂಪೊಯಿಲ್ ಮೊಹಲ್ಲಾದ ಜನತೆಗೆ ಅವರಿಂದ ಪ್ರಭಾಷಣ ಮಾಡಿಸುವ ಆಗ್ರಹ. ಅಂದು ಅವರ ಭಾಷಣ ಆಯಂಜೇರಿಯಲ್ಲಿ ಆಗಿತ್ತು. ಕಾರ್ಯಕ್ರಮದ ಸಂಘಾಟಕರು ಆಯಂಚೇರಿ ಅಧಿಕಾರಿ ಕಾರ್ಯಾಟ್ಟ್ ಕುಂಞ್ಞಹ್ಮದ್ ಹಾಜಿಯಾಗಿದ್ದರು. ವೈಲತ್ತರ ರೊಂದಿಗೆ ನನಗೆ ಉತ್ತಮ ಸಂಬಂಧವಿತ್ತು.

ಅಂದಿನ ದಿನಗಳಲ್ಲಿ, ಒಂದು ತಿಂಗಳ ಕಾಲ ಫ್ರಭಾಷಣ ಪರಂಪರೆ ನಡೆಯುತ್ತಿತ್ತು. ಅಂತಹ ಕೆಲವು ಕಾರ್ಯಕ್ರಮಗಳಲ್ಲಿ ನಾನು ಮತ್ತು ವೈಲತ್ತರ ಭಾಷಣಕಾರರಾಗಿ ಭಾಗವಹಿಸುತ್ತಿದ್ದೆವು.
ನನ್ನ ಬದಲಿಗೆ ‘ಎಪಿ’ ಆಯಂಜೇರಿಗೆ ಹೋಗುವುದಾದರೆ ನಾನು ಕರುವಂಪೋಯಿಲ್‌ಗೆ ಬರುತ್ತೇನೆ. ಇದು ಸ್ವೀಕಾರಾರ್ಹವೇ ಎಂದು ತನ್ನ ಬಳಿಗೆ ಬಂದ ಆ ಊರಿನ ಜನರೊಂದಿಗೆ ವೈಲತ್ತರ ಕೇಳಿದರು. ವೈಲಿತ್ತರವರ ಬದಲಿಯಾಗಿ ಹೋಗುವುದು ನನಗೆ ಸಂತೋಷದ ವಿಷಯವಾಗಿತ್ತು.

ಜತೆಗೆ ಅರಂಭ ಕಾಲದ ನನ್ನ ಪ್ರಭಾಷಣಕ್ಕೆ ಅದೊಂದು ಅಂಗೀಕಾರವಾಗಿ ನಾನು ತಿಳಿದು ಕೊಂಡಿದೆ. ಕರುವಾಂಪೋಯಿಲ್ ಮೊಹಲ್ಲಾದ ಪ್ರತಿನಿಧಿಗಳು ಆಯಂಜೇರಿಗೆ ಹೋಗಿ ಕುಂಞ್ಞಹ್ಮದ್ ಹಾಜಿಯವರ ಬಳಿ ವಿಷಯ ಹೇಳಿದರು. “ವೈಲತ್ತರ ನಿರ್ದೇಶಿಸಿದ ಭಾಷಣಕಾರನಾದರೆ ತೊಂದರೆ ಇಲ್ಲ ಎಪಿಯವರೊಂದಿಗೆ ಅವರು ಹೇಳಲಿ” ಎಂದಾಗಿತ್ತು ಹಾಜಿಯವರ ಉತ್ತರ. ಕಾರ್ಯಟ್ಟ್ ಕುಂಞ್ಞಹ್ಮದ್ ಹಾಜಿಯವರನ್ನು ಅಂದು ಖುದ್ದು ಪರಿಚಯ ಇರಲಿಲ್ಲ.

ಆಯಂಜೇರಿಯಲ್ಲಿನ ಪ್ರಭಾಷಣವು, ನಂತರದ ಕಾಲದಲ್ಕಿ ಹಲವು ಕಾರಣಗಳಿಂದ ನನಗೆ ಪ್ರಾಮುಖ್ಯವಾಯಿತು. ಅದಾದ ನಂತರ ವೈಲತರ ಮತ್ತು ನನ್ನ ನಡುವಿನ ಸಂಬಂಧ ಇನ್ನಷ್ಟು ಗಾಢವಾಯಿತು. ಅವರು ತನ್ನ ಪ್ರಭಾಷಣ ವೇದಿಕೆಗಳಲ್ಲಿ ನನಗಾಗಿ ಪ್ರಾರ್ಥಿಸುವುದು ಮತ್ತು ಇತರರಿಂದ ನನಗಾಗಿ ಪ್ರಾರ್ಥಿಸಲು ಹೇಳುವುದು ಅವರ ವಾಡಿಕೆಯಾಗಿತ್ತು. ನಾವು ಪರಸ್ಪರ ಪತ್ರಗಳನ್ನು ಬರೆಯುತ್ತಿದ್ದೆವು. ಸಂವಹನ ವ್ಯವಸ್ಥೆಗಳು ಸಾಕಷ್ಟು ವಿಸ್ತರಿಸಿದ್ದರೂ, ನಾನು ವೈಲತರ ಜೊತೆ ಸಂವಹನ ನಡೆಸಲು ಪತ್ರಗಳನ್ನು ಬರೆಯುತ್ತೇನೆ.

ಆಗಾಗ ಮರ್ಕಝ್‌ನಿಂದ ಅಲಪ್ಪುಝಕ್ಕೆ ಹೋಗುವ ವಿದ್ಯಾರ್ಥಿಗಳ ಕೈಗಳಲ್ಲಿ ಏನಾದರೂ ಬರೆದು ಕೊಡುತ್ತಿದ್ದೆ. ನಾನು ಅಲ್ಲಿಗೆ ಹೋದಾಗ ಅವರನ್ನು ಭೇಟಿ ಮಾಡುತ್ತಿದ್ದೆ. ಕಳೆದ ಡಿಸೆಂಬರ್‌ನಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ, ಮೊದಲ ಪತ್ರ ಬರೆದದ್ದು ಕೂಡ ವೈಲತ್ತರ ಮೌಲವಿಗೆ ಆಗಿತ್ತು. ಕಾರ್ಯಾಟ್ಟ್ ಕುಂಞ್ಞಹಮ್ಮದ್ ಹಾಜಿಯವರೊಂದಿಗೆ ಪ್ರಾರಂಭವಾದ ಸಂಬಂಧವು ಕೂಡ ಅವರ ಮರಣದವರೆಗೂ ಮುಂದುವರೆಯಿತು.

ಆರಂಭದಲ್ಲಿ, ಅವರು ಮರ್ಕಝ್‌ನ ಉತ್ತಮ ಸಹಾಯಕರಾಗಿದ್ದರು ಅಲ್ಲದೆ ಮರ್ಕಝ್ ಸಮಿತಿಯ ಸದಸ್ಯರಾಗಿದ್ದರು. ಎಷ್ಟೇ ಸುಸ್ತಾದರೂ ಮರ್ಕಝ್‌ನಲ್ಲಿ ನಡೆಯುವ ಸಮ್ಮೇಳನ, ಸಭೆಗಳಿಗೆ ಅವರು ಹಾಜರಾಗುತ್ತಿದ್ದರು. ಮರಣ ಹೊಂದುವಾಗ ಅವರು ಮರ್ಕಝ್‌ನ ಖಜಾಂಚಿಯಾಗಿದ್ದರು. ಅವರ ಕುಟುಂಬದವರೊಂದಿಗೆ ಉತ್ತಮ ಸಂಬಂಧ ಈಗಲೂ ಮುಂದುವರಿಯುತ್ತಿದೆ.
ಆ ಸಂಬಂಧಕ್ಕೆ ವೈಲಿತರ ಮೌಲವಿ ಕಾರಣಕರ್ತರಾಗಿದ್ದಾರೆ.

ವರ್ಷಗಳ ನಂತರ, ವೈಲತ್ತರ ನನ್ನ ಪ್ರಭಾಷಣಕ್ಕೆ ಬದಲಿಗಾರನಾಗಿ ಪ್ರಭಾಷಣ ಮಾಡಿದ ಸಂದರ್ಭ ಬಂದಿತ್ತು.

1977ರಲ್ಲಿ ಕುಮರಂ ಪುತ್ತೂರು ಅಲಿ ಮುಸ್ಲಿಯಾರ್‌ರವರು ಮನ್ನಾರ್ಕಾಡ್ ಬಳಿಯ ಚಂತಪ್ಪಡಿಯಲ್ಲಿ ವಹ್ಹಾಬಿಗಳ ವಿರುದ್ದ ಮೂರು ದಿನಗಳ ಖಂಡನಾ ಭಾಷಣವನ್ನು ಆಯೋಜಿಸಿದರು. ಇ.ಕೆ. ಹಸನ್ ಮುಸ್ಲಿಯಾರ್ (ಖ:ಸಿ) ವೈಲತ್ತರ ಮುಹಮ್ಮದ್ ಕುಂಞಿ ಮೌಲವಿ (ಖ:ಸಿ) ಮತ್ತು ನಾನು ಭಾಷಣಕಾರರಾಗಿದ್ದೆವು. ಒಂದು ದಿನ ಮುಂಚೆ ವಹ್ಹಾಬಿ ಮೌಲವಿ ರಂಡತ್ತಾಣಿ ಸೈದ್ ಎಂಬವರು ಮಾಡಿದ ಭಾಷಣಗಳಿಗೆ ಪ್ರತ್ಯುತ್ತರವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಎರಡನೇ ದಿನದಂದು ವೈಲತ್ತರ ಮೌಲವಿಯ ಭಾಷಣ ನಿಗದಿಯಾಗಿತ್ತು. ಆದರೆ ನನ್ನ ಭಾಷಣ ಕೇಳುವ ಆಸೆಯನ್ನು ವ್ಯಕ್ತಪಡಿಸಿದ ವೈಲತ್ತರ ಮೌಲವಿ, ಮೊದಲ ದಿನವೇ ಬಂದು ವೇದಿಕೆಯಲ್ಲಿ ಕುಳಿತರು. ನಾನು ಭಾಷಣ ಮಾಡುತ್ತಿದ್ದ ಮದ್ಯೆ ವೆಳ್ಳಿಂಯಜೇರಿ ಪ್ರದೇಶದಿಂದ ಕಾರ್ಯಕರ್ತರ ತಂಡವೊಂದು ಬಂದಿತ್ತು. ವೆಳ್ಳಿಯಂಜೇರಿಯಲ್ಲಿ ಕೆ.ಟಿ. ಮಾನು ಮುಸ್ಲಿಯಾರ್ (ಖ:ಸಿ)ರವರ ಪ್ರಭಾಷಣ ಇತ್ತು. ಭಾಷಣದ ಮಧ್ಯದಲ್ಲಿ ಮಾನು ಮುಸ್ಲಿಯಾರ್ ವಹ್ಹಾಬಿಗಳಿಗೆ ಸವಾಲೆಸೆದರು. ಮರುದಿನ, ವಹ್ಹಾಬಿಗಳು ಮಾನು ಮುಸ್ಲಿಯಾರರ ವೇದಿಕೆಯ ಪಕ್ಕದಲ್ಲಿ ಮತ್ತೊಂದು ವೇದಿಕೆಯನ್ನು ನಿರ್ಮಿಸಿ ವಾದಕ್ಕೆ ಸಿದ್ಧರಾದರು. ಆದರೆ ಕಾರಣಾಂತರಗಳಿಂದ ಕೆ.ಟಿ. ಮಾನು ಮುಸ್ಲಿಯಾರ್‌ಗೆ ಆ ದಿನ ಸ್ಥಳಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಹೀಗಾಗಿ ವೆಳ್ಳಿಯಂಜೇರಿಯ ಜನ ನನ್ನನ್ನು ಹುಡುಕಿಕೊಂಡು ಮಣ್ಣಾರ್ಕಾಡ್‌ಗೆ ಬಂದಿದ್ದರು. ನಾನು ಈ ವಿಷಯವನ್ನು ಆ ವೇದಿಕೆಯ ಸಂಘಟಕ ಕುಮರಂಪುತ್ತೂರು ಅಲಿ ಮುಸ್ಲಿಯಾರ್‌ಗೆ ತಿಳಿಸಿ, ಇನ್ನುಳಿದ ಭಾಷಣವನ್ನು ವೈಲತ್ತರ ಮೌಲವಿಗೆ ಬಿಟ್ಟು ಆ ರಾತ್ರಿ ವೆಳ್ಳಿಯಂಜೇರಿಗೆ ಹೊರಟೆ.

ನಾನು ಅಲ್ಲಿಗೆ ತಲುಪಿದಾಗ, ಸಿ ಪಿ. ಉಮರ್ ಸುಲ್ಲಮಿ ನೇತೃತ್ವದಲ್ಲಿ ಮೌಲವಿಗಳ ಗುಂಪು ಕಿತಾಬುಗಳನ್ನು ತಂದು ಮೈಕ್ ಕಟ್ಟಿ ವೇದಿಕೆಯ ಮೇಲೆ ಕುಳಿತ್ತಿದ್ದರು. ಎ.ಪಿ. ಅಬ್ದುಲ್ ಖಾದಿರ್ ಮೌಲವಿ, ಅಲಿ ಅಬ್ದುರ್ರಝಾಖ್ ಮೌಲವಿ, ಐದೀದ್ ತಂಙಳ್ ಆಸೀನರಾಗಿದ್ದರು. ವೇದಿಕೆ ಏರಿದ ಕೂಡಲೇ ಪ್ರಶ್ನೋತ್ತರ ಕಾರ್ಯಕ್ರಮ ಆರಂಭವಾಯಿತು. ವಿಷಯ ಇಸ್ತಿಗಾಸ ಮತ್ತು ಖಬರ್ ಝಿಯಾರತ್ ಆಗಿದ್ದವು. ಬೆಳಿಗ್ಗೆ ತನಕ ವಾದಪ್ರತಿವಾದ ಮುಂದುವರೆಯಿತು. ಸುಬಹಿ ಅಝಾನ್ ಕರೆದಾಗ ಪಕ್ಕದ ಮನೆಗೆ ಹೋಗಿ ನಮಾಜು ಮಾಡಿದೆ. ಕಾರ್ಯಕ್ರಮವನ್ನು ಮತ್ತೆ ಮುಂದುವರಿಸಲು ನಿರ್ಧರಿಸಲಾಯಿತು. ಅಂದು ರಾತ್ರಿ ಮನ್ನಾರ್ಕ್ಕಾಡ್‌ನಲ್ಲಿ ವೈಲತ್ತರವರ ವಯಳ್ ಮುಗಿದು ಹೋದ ಅಲ್ಲಿನ ಸ್ಥಳೀಯರಿಗೆ ಈ ವಿಷಯ ಗೊತ್ತಿರಲಿಲ್ಲ.

ಮರುದಿನವೂ ವಾದಪ್ರತಿವಾದ ಕಾರ್ಯಕ್ರಮ ಮುಂದುವರಿಯಲಿದೆ ಎಂದು ತಿಳಿದು ಸಹಸ್ರಾರು ಜನರು ವೆಳ್ಳಿಯಂಜೇರಿಗೆ ಬರಲು ಆರಂಭಿಸಿದರು. ಸುದ್ದಿ ತಿಳಿದ ಇ.ಕೆ. ಹಸನ್ ಮುಸ್ಲಿಯಾರ್ (ಖ:ಸಿ) ಕೂಡ ಮಧ್ಯಾಹ್ನದ ವೇಳೆಗೆ ಸ್ಥಳಕ್ಕೆ ಆಗಮಿಸಿದರು. ನಮಾಜಿಗಾಗಿ ವಿರಾಮಗಳನ್ನು ಹೊರತುಪಡಿಸಿ ಬಾಕಿ ಎಲ್ಲಾ ಸಮಯದಲ್ಲೂ ಪ್ರಶ್ನೋತ್ತರ ಕಾರ್ಯಕ್ರಮ ಮುಂದುವರೆಯಿತು.

ಚಂತಪ್ಪಡಿಯಲ್ಲಿ ನಿಗದಿಯಾದಂತೆ ಎರಡನೇ ದಿನ ವೈಲಿತ್ತರವರ ಭಾಷಣ ಆರಂಭವಾದ ಕೂಡಲೇ ವೈಲತ್ತರ ಸಭಿಕರಲ್ಲಿ ಹೇಳಿದರು,” ‘ಎಪಿ’ ಮತ್ತು ಸಂಗಡಿಗರು ವಹ್ಹಾಬಿಗಳೊಂದಿಗೆ 24 ಗಂಟೆಗಳಿಗೂ ಹೆಚ್ಚು ಕಾಲ ವಾದಪ್ರತಿವಾದ ನಡೆಸುತ್ತಾ ಇದ್ದಾರೆ. ಆದ್ದರಿಂದ ನಾವೆಲ್ಲ ಅಲ್ಲಿಗೆ ಹೋಗುತ್ತಿದ್ದೇವೆ” ಎಂದಾಗ ಅನೇಕ ವಾಹನಗಳಲ್ಲಾಗಿ ಎಲ್ಲರೂ ವಾದಪ್ರತಿವಾದ ನಡೆಯುವ ಪ್ರದೇಶಕ್ಕೆ ಆಗಮಿಸಿದರು.

ವೈಲತ್ತರ ಅಲ್ಲಿಗೆ ತಲುಪಿದಾಗ, ಇ.ಕೆ. ಹಸನ್ ಮುಸ್ಲಿಯಾರ್ ಮತ್ತು ನಾನು ಸುನ್ನಿ ಭಾಗದ ಭಾಷಣಕಾರರಾಗಿ ವೇದಿಕೆಯಲ್ಲಿದ್ದೆವು. ಇದೀಗ ವೈಲತ್ತರ ನಮ್ಮೊಂದಿಗೆ ಸೇರಿದರು ಅಂದು ವೆಳ್ಳಿಯಂಜೇರಿ ಪ್ರದೇಶದಲ್ಲಿ ಅಪಾರ ಜನಸ್ತೋಮ ನೆರೆದಿತ್ತು. ಕೊನೆಗೆ ವೈಲಿತ್ತರ ತನ್ನ ಬೆರಳನ್ನು ತೋರಿಸುತ್ತಾ ವಹ್ಹಾಬಿ ಕಡೆಯವರಲ್ಲಿ ಕೇಳಿದರು. “ಅಲ್ಲಾಹನು ನನಗೆ ಈ ಬೆರಳನ್ನು ಮುಂಚಿತವಾಗಿ ಅಲುಗಾಡಿಸುವ ಸಾಮರ್ಥ್ಯವನ್ನು ನೀಡಿದ್ದಾನೆಯೇ ಅಥವಾ ಅದನ್ನು ಚಲಿಸುವ ಸಮಯದಲ್ಲಿ ಮಾತ್ರ ನೀಡುತ್ತಾನೆಯೇ?”… ಎಂದು ಮೂರು ಬಾರಿ ಈ ಪ್ರಶ್ನೆ ಕೇಳಿದರೂ ಸಳಪಿಗಳು ಉತ್ತರ ನೀಡಲಾಗದೆ ಚಡಪಡಿಸುತ್ತಿದ್ದರು.

ಏನೇ ಉತ್ತರ ಕೊಟ್ಟರೂ ವಹಾಬಿಗಳು ಸಿಕ್ಕು ಹಾಕಿಕೊಳ್ಳುತ್ತಾರೆ. ಇನ್ನೂ ಕೊನೆಯದಾಗಿ ಐದು ನಿಮಿಷಗಳ ಕಾಲಾವಕಾಶ ನೀಡುತ್ತೇನೆ. ಆಗಲೂ ಉತ್ತರ ಸಿಗದಿದ್ದರೆ ನೀವು ಪರಾಜಿತರೆಂದು ಘೋಷಿಸಲಾಗುವುದು’ ಎಂದು ವೈಲತ್ತರ ಹೇಳಿದರು. ಕೊನೆಯ ಐದು ನಿಮಿಷಗಳ ನಂತರವೂ ವಹಾಬಿಗಳ ವೇದಿಕೆಯಲ್ಲಿ ನೀರವ ಮೌನ ಮಾತ್ರವಾಗಿತ್ತು ಉತ್ತರ. ಅದಾಗಲೇ ಜನರು ತಕ್ಬೀರ್‌ ಕೂಗಿದರು. ಅದು ತುರ್ತು ಪರಿಸ್ಥಿತಿಯ ನಂತರದ ಮೊದಲ ಚುನಾವಣೆಯನ್ನು ಘೋಷಿಸಿದ ಸಮಯವಾಗಿತ್ತು. ಸುತ್ತಲೂ ದೊಡ್ಡ ಪೊಲೀಸ್ ಬಂದೋಬಸ್ತ್ ಇತ್ತು. ಆದ್ದರಿಂದ, ವಹಾಬಿಗಳಿಗೆ ಎಂದಿನಂತೆ ಕೂಗಾಡಲು ಸಾಧ್ಯವಾಗಲಿಲ್ಲ. ವೈಲಿತರವರ ತೀಕ್ಷ್ಣ ಪ್ರಶ್ನೆಯೊಂದಿಗೆ ಧೀರ್ಘವಾದ 40 ಗಂಟೆಗಳ ಕಾಲ ನಡೆದ ವಾದ-ಪ್ರತಿವಾದವು ಕೊನೆಗೊಂಡಿತು.

1
1
1

error: Content is protected !! Not allowed copy content from janadhvani.com