janadhvani

Kannada Online News Paper

ನೌಶಾದ್ ಹಾಜಿಯ ಕಳೆದ ರಾತ್ರಿಯ ಕೊನೆ ಮಾತು..

✒️ NKM ಶಾಫಿ ಸ‌ಅದಿ ಬೆಂಗಳೂರು
(ಚೇರ್ಮೇನ್, ಕರ್ನಾಟಕ ವಖ್ಫ್ ಬೋರ್ಡ್)

ನೌಶಾದ್ ಹಾಜಿ(Noushad Haji Suralpady) ನನ್ನ ಆತ್ಮೀಯ ಸ್ನೇಹಿತರು. ಹಲವು ಕಾರ್ಯಕ್ರಮಗಳಲ್ಲಿ ಪರಸ್ಪರ ಭೇಟಿಯಾಗುವಾಗ ಹಲವು ವಿಚಾರ ಚರ್ಚಿಸುತ್ತಿದ್ದೆವು. ಆದರೂ ನಿನ್ನೆ ರಾತ್ರಿ ಬೈಕಂಪಾಡಿ ಅಡ್ಕ ಉರೂಸ್(Baikampady Adka Uroos) ಕಾರ್ಯಕ್ರಮದ ವೇದಿಕೆಗೆ ಬಂದು ಅತ್ಯಗತ್ಯವಾಗಿ ಕೆಲವು ವಿಷಯ ಮಾತನಾಡಲಿಕ್ಕಿದೆ ಎಂದಾಗ ಓಕೆ ಎನ್ನುತ್ತಾ ಕಾರ್ಯಕ್ರಮದಲ್ಲಿ ಮುಂದುವರಿದಿದ್ದೆ.

ನನ್ನ ಭಾಷಣ ಮುಗಿಸಿ ವೇದಿಕೆಯಿಂದ ಕೆಳಗಿಳಿದು ಬರುತ್ತಿರುವಾಗ ನನ್ನನ್ನೇ ಕಾಯುತ್ತಿದ್ದ ನೌಶಾದ್ ಹಾಜಿ ಕೈಹಿಡಿದು ಒಂದೆಡೆ ಕರೆದುಕೊಂಡು ಹೋದರು. ಏನೋ ವೈಯಕ್ತಿಕ ವಿಚಾರವಾಗಿರಬಹುದೆಂದು ಭಾವಿಸಿದ್ದೆ. ವಕ್ಫ್ ಬೋರ್ಡಿನಲ್ಲಿ ನಡೆಯುತ್ತಿರುವ ಪ್ರಗತಿಯ ಬಗ್ಗೆ ಪ್ರಶಂಸಿಸುತ್ತಾ ಒಂದು ವಿಚಾರ ನನ್ನ ಗಮನಕ್ಕೆ ತಂದರು. ಅದು ಅವರ ಮಾತಿನಿಂದಲೇ ಕೇಳೋಣ.

“ಉಸ್ತಾದ್, ನೀವು ರಾಜ್ಯದ ಮುಸ್ಲಿಮರಿಗೆ ಮಾರ್ಗದರ್ಶನ ನೀಡುತ್ತಿದ್ದೀರಿ. ಆದರೆ ನಮ್ಮ ಜಿಲ್ಲೆಯ ನಾಯಕರಿಗೇನು ಮಾರ್ಗದರ್ಶನ ನೀಡುತ್ತಿಲ್ಲ, ಜಿಲ್ಲೆಯ ವಾತಾವರಣ ತಿಳಿಯಾಗಿದೆ. ಅಧಿಕಾರವೂ ನಿಮ್ಮಲ್ಲಿದೆ. ಎ.ಪಿ- ಇ.ಕೆ ಸಮಸ್ಯೆಗಳನ್ನು ಪರಿಹರಿಸಿರಿ
ಇದು ದಕ್ಷಿಣ ಕನ್ನಡ ಉಮರಾ ನಾಯಕರ ಸಾಮಾನ್ಯ ಕಮೆಂಟ್ ಅಂತ ಭಾವಿಸಿ ಪಕ್ಕದಲ್ಲೇ ನನಗಾಗಿ ಕಾಯುತ್ತಿದ್ದ ಶಾಕಿರ್ mse ಮತ್ತು ಬಜ್ಪೆ ಪ್ರದೇಶದ ಎಸ್ಸೆಸ್ಸೆಫ್ ಕಾರ್ಯಕರ್ತರೊಂದಿಗೆ ಕಾರಿನತ್ತ ನಡೆದೆ.

ಯಾತ್ರೆಯಲ್ಲಿ ನಿದ್ರೆಗೆ ಜಾರಿದ್ದೆ. ಡ್ರೈವರ್ ನಿದ್ರೆಯಿಂದ ಎಬ್ಬಿಸುತ್ತಾ ನೌಶಾದ್ ಹಾಜಿಯ ಮರಣವಾರ್ತೆ ತಿಳಿಸಿದರು. ಇನ್ನಾಲಿಲ್ಲಾಹ್… ಸಿಡಿಲೆರಗಿದಂತಾಯಿತು. ಮಾತೇ ಹೊರಡಲಿಲ್ಲ. ಐದು ನಿಮಿಷ ಮೌನಕ್ಕೆ ಶರಣಾದೆ. ಕಳೆದ ರಾತ್ರಿಯ ನನ್ನೊಂದಿಗಿನ ಮಾತು ಅವರ ಕೊನೆಯ ವಸಿಯ್ಯತ್ ಆಗಿತ್ತೆಂಬುವುದನ್ನು ನೆನೆಯುವಾಗ ದುಃಖ ತಡೆಯಲಾಗುತ್ತಿಲ್ಲ.

ನನ್ನ ನೆಚ್ಚಿನ ಸ್ನೇಹಿತ ನೌಶಾದ್ ಹಾಜಿಯ ಖಬರ್ ಸ್ವರ್ಗವಾಗಿಸು ಅಲ್ಲಾಹ್. ಪಾರತ್ರಿಕ ಬದುಕು ಹಸನುಗೊಳಿಸು. ‘ನಂಡೆ ಪೆಂಙಳ್’ ಸಹಿತವಿರುವ ಅವರ ಜನಕಲ್ಯಾಣ ಸೇವೆಗಳ ಕಾರಣದಿಂದ ಖಬರ್ ಪ್ರಕಾಶಿಸುವಂತಾಗಲಿ, ಎಲ್ಲರೂ ಖರ್‌ಆನ್ ಪಾರಾಯಣ, ತಹ್ಲೀಲ್ ಮೂಲಕ ದುಆಃ ಮಾಡಿ.

error: Content is protected !! Not allowed copy content from janadhvani.com