ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು (ಎಸ್.ವೈ.ಎಸ್) ಮೂವತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಸಂಘಟನೆಯ ಮೂವತ್ತನೇ ವರ್ಷಾಚರಣೆಯ ಘೋಷಣಾ ಸಮಾವೇಶವು ಡಿಸೆಂಬರ್ 24 ಶನಿವಾರ ಮಂಗಳೂರು ಪುರಭವನದಲ್ಲಿ ನಡೆಯಲಿದೆ.
2023 ಜನವರಿ 24 ರಂದು ಶಿವಮೊಗ್ಗದಲ್ಲಿ ಉದ್ಘಾಟನೆಗೊಂಡು 2024 ಜನವರಿ 24 ರಂದು ಸಮಾರೋಗೊಳ್ಳುವ ಒಂದು ವರ್ಷದ ಅಭಿಯಾನದ ಅಂಗವಾಗಿ ರಾಜ್ಯಾದ್ಯಂತ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದ್ದು ಇದರ ಘೋಷಣೆಯನ್ನು ಮಂಗಳೂರಿನಲ್ಲಿ ನಡೆಸಲಾಗುವುದು. ಸಮಾವೇಶದ ವೇದಿಕೆಗೆ ಸಂಘಟನೆಯ ಪ್ರಥಮ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಅಬ್ದುರಹ್ಮಾನ್ ಇಂಜಿನಿಯರ್ ಅವರ ಹೆಸರು ನೀಡಲಾಗಿದೆ.
ವರ್ಷಾಚರಣೆಯನ್ನು ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್ ಘೋಷಣೆ ಮಾಡಲಿದ್ದು ಸಮಸ್ತ ಕಾರ್ಯದರ್ಶಿ ಮೌಲಾನಾ ಪೇರೋಡ್ ಅಬ್ದುರಹ್ಮಾನ್ ಸಖಾಫಿ ಸಂದೇಶ ಭಾಷಣ ಮಾಡಲಿದ್ದಾರೆ. “ಪರಂಪರೆಯ ಪ್ರತಿನಿಧಿಗಳಾಗೋಣ” ಎಂಬುದು ವರ್ಷಾಚರಣೆಯ ಘೋಷವಾಕ್ಯವಾಗಲಿದೆ.
ಒಂದು ವರ್ಷದ ಕಾರ್ಯ ಯೋಜನೆಗಳ ಪಟ್ಟಿಯನ್ನು ಕರ್ನಾಟಕ ರಾಜ್ಯ ವಖ್ಫ್ ಮಂಡಳಿ ಅಧ್ಯಕ್ಷ ಶಾಫಿ ಸಅದಿ ಬೆಂಗಳೂರು ಪ್ರಕಾಶನ ಮಾಡಲಿದ್ದಾರೆ.
ಸಮಾವೇಶದಲ್ಲಿ ಜಂಇಯ್ಯತುಲ್ ಉಲಮಾ, ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ಸೆಸ್ಸೆಫ್, ಜಂಇಯ್ಯತುಲ್ ಮುಅಲ್ಲಿಮೀನ್, ಸುನ್ನೀ ಮೆನೇಜ್ಮೆಂಟ್ ಅಸೋಸಿಯೇಷನ್‌ಗಳ ರಾಜ್ಯ ಸಮಿತಿಯ ಸದಸ್ಯರು, ಕೆಸಿಎಫ್ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಮಿತಿಗಳ ಪದಾಧಿಕಾರಿಗಳು ಆಹ್ವಾನಿತರಾಗಿರುವರು. ಕಾರ್ಯಕ್ರಮವು ಸಾರ್ವಜನಿಕವಾಗಿರುವುದಿಲ್ಲ.
ಸಭೆಯಲ್ಲಿ ಸಂಘಟನೆಗೆ ಕಳೆದ ಮೂರು ದಶಕಗಳಲ್ಲಿ ನೇತೃತ್ವ ನೀಡಿದ ರಾಜ್ಯಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳಿಗೆ ಸನ್ಮಾನ ಮಾಡಲಾಗುವುದು.
ಎಸ್.ವೈ.ಎಸ್. ರಾಜ್ಯಾಧ್ಯಕ್ಷ ಡಾ ಎಮ್ಮೆಸ್ಸೆಂ ಝೈನೀ ಕಾಮಿಲ್ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಲಿದ್ದು ಮೂವತ್ತನೇ ವರ್ಷಾಚರಣೆಯ ನಿರ್ವಹಣಾ ಸಮಿತಿ, ಪರ್ಲ್ ಬೋಡಿಯ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ಉದ್ಘಾಟನೆ ಮಾಡಲಿದ್ದಾರೆಂದು ಪರ್ಲ್ ಬೋಡಿ ನಿರ್ವಾಹಕ ಸಂಚಾಲಕ ಅಶ್‌ರಫ್ ಸಅದಿ ಮಲ್ಲೂರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.