ಮಂಗಳೂರು,ನ.9: ಇಲ್ಲಿನ ಹೊರವಲಯದ ಅತಿ ಪುರಾಣ ಮಳಲಿ ಮಸೀದಿಯ ಕಾಮಗಾರಿ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ನ ಅರ್ಜಿಯನ್ನು ಮಂಗಳೂರು ನ್ಯಾಯಾಲಯ ಸ್ವೀಕರಿಸಿದೆ.
ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್, ಮಸೀದಿಯ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ತೀರ್ಪುನೀಡಿದೆ.
ಮಸೀದಿ ಕಾಮಗಾರಿ ತಡೆಯಾಜ್ಞೆಯನ್ನು ತೆರವುಗೊಳಿಸಿ, ವಿಎಚ್ ಪಿ ಅರ್ಜಿ ವಜಾಗೊಳಿಸುವಂತೆ ಮಸೀದಿ ಕಮಿಟಿ ಸಲ್ಲಿಸಿದ ಅರ್ಜಿ ಇದೀಗ ವಜಾಗೊಂಡಿದೆ.
ಈ ಕುರಿತ ಅರ್ಜಿ ವಿಚಾರಣೆ ಸಿವಿಲ್ ಕೋರ್ಟ್ ವ್ಯಾಪ್ತಿಯಲ್ಲಿ ನಡೆಯಲಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಮುಂದಿನ ವಿಚಾರಣೆ 2023 ರ ಜನವರಿ ಮೊದಲ ವಾರಕ್ಕೆ ಮುಂದೂಡಲಾಗಿದೆ.
ಸುಮಾರು 900 ವರ್ಷಗಳ ಇತಿಹಾಸವಿರುವ ಮಳಲಿ ಪೇಟೆ ಜುಮಾ ಮಸೀದಿಯನ್ನು ನವೀಕರಣಗೊಳಿಸಲು ಉದ್ದೇಶಿಸಲಾಗಿತ್ತು. ಅದರಂತೆ ಒಳಗಿನ ಮಸೀದಿಯ ಇತಿಹಾಸಕ್ಕೆ ಧಕ್ಕೆಯಾಗದಂತೆ ರಕ್ಷಿಸಿ ಹೊರಭಾಗವನ್ನು ಕೆಡವಿ ನವೀಕರಣ ಮಾಡುವುದಕ್ಕಾಗಿ ಹೊರಗಿನ ಪಾರ್ಶ್ವವನ್ನು ಕೆಡವಲಾಗಿತ್ತು.
ಈ ನಡುವೆ ಯಾರೋ ಕಿಡಿಗೇಡಿಗಳು ಒಳಗಿನ ಮಸೀದಿಯ ಚಿತ್ರವನ್ನು ದೇವಸ್ಥಾನ ಎಂದು ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಹರಡಿರುವುದು ವಿವಾದಕ್ಕೆ ಕಾರಣವಾಯಿತು.