janadhvani

Kannada Online News Paper

ಸುರತ್ಕಲ್ ಅಕ್ರಮ ಟೋಲ್ ಗೇಟ್ ರದ್ದುಗೊಳಿಸಲು ಮತ್ತೆ ಮುಂದುವರಿದ ಹೋರಾಟ

ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯಿಂದ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭ

ಸುರತ್ಕಲ್,ಅ.28: ಸುರತ್ಕಲ್ ಎನ್‌ಐಟಿಕೆ ಟೋಲ್‌ಗೇಟ್ ಬಳಿ ಇಂದಿನಿಂದ ಆರಂಭಿಸಲು ಉದ್ದೇಶಿಸಲಾಗಿದ್ದ ಟೋಲ್‌ಗೇಟ್ ವಿರೋಧಿ ಹೋರಾಟಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಆದರೆ ಇನ್ನೊಂದೆಡೆ ಟೋಲ್‌ಗೇಟ್ ವಿರೋಧಿ ಹೋರಾಟಗಾರರು ತಮ್ಮ ಅನಿರ್ದಿಷ್ಟಾವಧಿ ಧರಣಿ ಇದೀಗ ಆರಂಭಿಸಿದ್ದಾರೆ.

ಸುರತ್ಕಲ್ ಟೋಲ್‌ಗೇಟ್ ತೆರವಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದಿಂದ ಅಂತಿಮ ಪ್ರಕ್ರಿಯೆಗಳು ನಡೆಯುತ್ತಿವೆ. ಸರಕಾರವು ಅಧಿಕೃತವಾಗಿ ಗೆಜೆಟ್ ನೋಟಿಫಿಕೇಶನ್ ಹೊರಡಿಸುವವರೆಗೂ ಧರಣಿಯನ್ನು ಮುಂದೂಡುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕುಮಾರ್ ನಿನ್ನೆ ಮನವಿ ಮಾಡಿದ್ದಾರೆ.

ಇನ್ನೊಂದೆಡೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರು ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಟೋಲ್ ಗೇಟ್ ಸಮೀಪದ 200 ಮೀಟರ್ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ 6ರಿಂದ ನವೆಂಬರ್ 3ರ ಸಂಜೆ 6ರವರೆಗೆ ಸೆಕ್ಷನ್ 144 ಪ್ರಕಾರ ನಿಷೇಧಾಜ್ಞೆ ವಿಧಿಸಿ ಆದೇಶಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಹದಗೆಡುವ, ಸಾರ್ವಜನಿಕರ ಸುರಕ್ಷತೆ ಕಾಪಾಡುವ ಮತ್ತು ಟೋಲ್ ಗೇಟ್‌ನ ಭದ್ರತೆಯ ಹಿತದೃಷ್ಠಿಯಿಂದ ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಕಮಿಷನರ್ ಹೇಳಿದ್ದಾರೆ. ಆದರೆ ಪ್ರತಿಭಟನಾಕಾರರು ಈಗಾಗಲೇ 200 ಮೀಟರ್ ವ್ಯಾಪ್ತಿಯಿಂದ ಹೊರತಾದ ಪ್ರದೇಶದಲ್ಲಿ ತಮ್ಮ ಪ್ರತಿಭಟನೆಯನ್ನು ಆರಂಭಿಸುವುದಾಗಿ ಹೇಳಿದ್ದಾರೆ.

ಅದೇ ರೀತಿ ಇದೀಗ ಇಂದು ಮತ್ತೆ ಟೋಲ್‌ಗೇಟ್ ಬಳಿ ಹೋರಾಟಗಾರರು ನಿಷೇಧಾಜ್ಞೆ ಇರುವ ವ್ಯಾಪ್ತಿಯನ್ನು ಹೊರತುಪಡಿಸಿ ಮತ್ತೆ ಪ್ರತಿಭಟನೆ ಆರಂಭಿಸಿದ್ದಾರೆ.

ವರದಿ: ಅದ್ದಿ ಬೊಳ್ಳೂರು

error: Content is protected !! Not allowed copy content from janadhvani.com