janadhvani

Kannada Online News Paper

ನಾಡಿನ ಸರ್ವ ಬಾಂಧವರಿಗೆ ‘ಈದ್ ಮೀಲಾದುನ್ನಬಿ ﷺ’ ಶುಭಾಶಯಗಳು

ದ್ವೇಶವನ್ನು ಪ್ರೀತಿಯಿಂದ ಎದುರಿಸಲು ಕಲಿಸಿಕೊಟ್ಟ ಮಹಾನ್ ಪ್ರವಾದಿ

ಲೋಕಾನುಗ್ರಹಿ ಪುಣ್ಯ ಪ್ರವಾದಿ ﷺ ಯವರು ಕ್ರಿ. ಶ. 571 ನೇ ಇಸವಿ ರಬೀಉಲ್ ಅವ್ವಲ್ ತಿಂಗಳ 12 ನೇ ಸೋಮವಾರದಂದು ಇಡೀ ಜಗತ್ತಿಗೆ ಅನುಗ್ರವಾಗಿ ಅರೇಬಿಯಾದ ಮಕ್ಕಾದಲ್ಲಿ ಜನಿಸಿದರು. ಅಬ್ದುಲ್ಲಾಹ್ ಮತ್ತು ಆಮಿನಾ ದಂಪತಿಗಳ ಏಕೈಕ ಪುತ್ರನಾಗಿ ಜನಿಸಿದ ಪುಣ್ಯ ಪ್ರವಾದಿಯರು ಇಡೀ ಜಗತ್ತಿಗೇ ಶಾಂತಿಯ ಸಂದೇಶವನ್ನು ಸಾರಿದರು.

ತಮ್ಮ ಕಿರು ಪ್ರಾಯದಲ್ಲೇ ಸತ್ಯವನ್ನು ಮಾತ್ರ ಹೇಳುತ್ತಿದ್ದ ಪುಣ್ಯ ಪ್ರವಾದಿﷺ ಯರನ್ನು ಮಕ್ಕಾ ಜನತೆ ಪ್ರೀತಿ ಪೂರ್ವಕವಾಗಿ ಅಲ್ ಅಮೀನ್ ಎಂದು ಕರೆಯುತ್ತಿದ್ದರು.

ತಮ್ಮ 40 ನೇ ವಯಸ್ಸಿನಲ್ಲಿ ನುಬುವ್ವತ್ ಲಭಿಸಿ, ಅಲ್ಲಾಹನ ಪವಿತ್ರ ಧರ್ಮವಾದ ಇಸ್ಲಾಮನ್ನು ಬೋಧಿಸಲು ಆರಂಭಿಸಿದರು. ಅಂದಿನಿಂದ ಮಕ್ಕಾದ ಮುಶ್ರಿಕರು ಪ್ರವಾದಿ ﷺ ಮತ್ತು ಅವರನ್ನು ಅನುಸರಿಸಿದವರನ್ನು ಅಕ್ರಮಿಸಲು ಆರಂಭಿಸಿದರು.ಅಕ್ರಮವನ್ನು ಸಹಿಸಿ, ಸಹನಾಶೀಲರಾಗಿ, ಶತ್ರುಗಳ ವಿರುದ್ಧ ಯಾವುದೇ ಪ್ರತೀಕಾರಕ್ಕೆ ಮುಂದಾಗದೆ, ಧಾರ್ಮಿಕ ಬೋಧನೆಯಲ್ಲಿ ತೊಡಗಿದರು.ಅವರ ಅತ್ಯುನ್ನತ ಸ್ವಭಾವ ಗುಣವನ್ನು ಮನಗಂಡ ಜನತೆಯು ಅವರೊಂದಿಗೆ ಸೇರಿಕೊಂಡರು. ಶತ್ರುಗಳ ಅಕ್ರಮವು ಮಿತಿಮೀರಿದಾಗ ಅಲ್ಲಾಹನ ಆಜ್ಞೆಯಂತೆ ತಮ್ಮ ಹುಟ್ಟೂರನ್ನು ತೊರೆದು ಮದೀನಾದತ್ತ ಹಿಜ್ರಾ ಹೊರಟರು.

ಲೋಕಾನುಗ್ರಹಿ ಮುಹಮ್ಮದ್ ಮುಸ್ತಫಾ ﷺ ರು ಸರ್ವರಿಗೂ ಮಾದರೀಯೋಗ್ಯ ನಾಯಕರಾಗಿದ್ದಾರೆ.
ಪ್ರವಾದಿ (ﷺ)ರವರ ವ್ಯಕ್ತಿತ್ವದ ಬಗ್ಗೆ ಪವಿತ್ರ ಖುರ್ಆನ್ ಬಣ್ಣಿಸಿದ್ದು “ತಾವು ಉತ್ತಮವಾದ ಸ್ವಭಾವ ಗುಣದವರಾಗಿದ್ದೀರಿ” ಎಂದಾಗಿದೆ.

ವಿಶ್ವದ ಮೊಟ್ಟ ಮೊದಲ ಸೃಷ್ಟಿಯೆಂದರೆ, ಅದು ಪ್ರವಾದಿ ﷺ ಯವರ ಪ್ರಕಾಶವಾಗಿದೆ.ಅದರ ನಂತರವಷ್ಟೇ ಇತರ ಚರಾಚರಗಳನ್ನು ಸೃಷ್ಟಿಸಲಾಗಿದೆ.

ತಮಗೆ ಅಕ್ರಮವನ್ನೆಸಗಿದ ಕ್ರೂರಿಗಳಾದ ಮಕ್ಕಾ, ತ್ವಾಯಿಫ್ ಜನರನ್ನು ಕ್ಷಮಿಸುವ ಮೂಲಕ ದ್ವೇಶವನ್ನು ಪ್ರೀತಿಯಿಂದ ಎದುರಿಸಲು ಕಲಿಸಿಕೊಟ್ಟರು. ಕ್ರಿಯೆಗೆ ಪ್ರತಿಕ್ರಿಯೆ ಎಂಬುದು ಪ್ರವಾದಿ (ಸ.ಅ) ರ ಜೀವನದಲ್ಲಿ ಅನ್ಯವಾಗಿತ್ತು.

ತನ್ನ ನೆರೆಯವನು ಯಾವುದೇ ಧರ್ಮದವನಾದರೂ, ಅವನನ್ನು ಗೌರವಿಸು ಎಂದಿರುವ ಪುಣ್ಯ ಪ್ರವಾದಿಯವರ ನುಡಿ ಮುತ್ತುಗಳು, ಧಾರ್ಮಿಕವಾಗಿ ಪರಸ್ಫರ ಕಚ್ಚಾಡುತ್ತಿರುವ ಇಂದಿನ ತಲೆಮಾರಿಗೆ ಬಲು ದೊಡ್ಡ ಧಾರ್ಮಿಕ ಸೌಹಾರ್ದತೆಯ ಸಂದೇಶವಾಗಿದೆ.

“ನೀವು ಮಾಡಿದ ಪದಾರ್ಥದ ಒಂದಂಶ ನೆರೆಯವರಿಗೂ ನೀಡಿ,ನೆರೆಯವರು ಹಸಿದಿರುವಾಗ ಹೊಟ್ಟೆ ತುಂಬಿ ಉಣ್ಣುವವನು ನಮ್ಮವನಲ್ಲ” ಎಂದು ಬೋಧಿಸುವ ಮೂಲಕ ನೆರೆಹೊರೆಯವರ ಸಂಬಂಧ ಸುಭದ್ರಗೊಳಿಸಲು ಕರೆ ನೀಡುವುದರೊಂದಿಗೆ ಇಡೀ ಜಗತ್ತಿಗೇ ಮಾನವೀಯತೆಯನ್ನು ಕಲಿಸಿಕೊಟ್ಟರು.

ಹೆಣ್ಣು ಸಮಾಜಕ್ಕೆ ಅಪಮಾನ, ಅಭಿಮಾನಕ್ಕೆ ಧಕ್ಕೆ ಎಂದು ಬಗೆದವರ ಮಧ್ಯೆ ತಮಗೊಂದು ಹೆಣ್ಣುಮಗು ಜನಿಸಿದೆ ಎಂದು ತಿಳಿಸಿದ ದಾಸಿಗೆ ಇನಾಮು ನೀಡಿ ಗೌರವಿಸಿದರು.

ವಿನಯವನ್ನೇ ಮುದ್ರೆಯನ್ನಾಗಿಸಿದ ಅವರ ಜೀವನದಲ್ಲಿ, ಅಹಂಕಾರ ಎಂಬುವುದು ಕಿಂಚಿತ್ತೂ ಕಾಣಲು ಸಾಧ್ಯವಿಲ್ಲ. ಅವರ ಕುಟುಂಬ ಪ್ರೇಮ ಅಪಾರವಾಗಿತ್ತು,ಯಾರಿಗೂ ಅಪ್ರಿಯವಾಗುವಂತೆ ಮಾತನಾಡುತ್ತಿರಲಿಲ್ಲ. ವಿಶಾಲವಾದ ಅರ್ಥವನ್ನು ಒಳಗೊಳ್ಳುತ್ತಿದ್ದ ಕೆಲವೇ ಕೆಲವು ನುಡಿಮುತ್ತುಗಳನ್ನು ಆಡುತ್ತಿದ್ದರು. ನೆಬಿಯವರು ಸಹನಾಶೀಲ ಮತ್ತು ಧೈರ್ಯವಂತರಾಗಿದ್ದರು.

ಇಸ್ಲಾಮಿನ ದಿವ್ಯ ಸಂದೇಶವನ್ನು ಜಗತ್ತಿಗೆ ಸಾರಿದ, ಪುಣ್ಯ ಪ್ರವಾದಿ ﷺ ಯವರು ತಮ್ಮ 63 ನೇ ವಯಸ್ಸಿನಲ್ಲಿ ಮದೀನಾದಲ್ಲಿ ವಫಾತ್ ಆದರು.

error: Content is protected !! Not allowed copy content from janadhvani.com