janadhvani

Kannada Online News Paper

ಸೌದಿ: ಪರಿಷ್ಕೃತ ಆರೋಗ್ಯ ವಿಮಾ ಪಾಲಿಸಿ ಜಾರಿಗೆ- 18 ಹೊಸ ಪ್ರಯೋಜನಗಳು ಸೇರ್ಪಡೆ

18 ಹೊಸ ಪ್ರಯೋಜನಗಳೊಂದಿಗೆ, ಅಸ್ತಿತ್ವದಲ್ಲಿರುವ 10 ಪ್ರಯೋಜನಗಳನ್ನು ಸುಧಾರಿಸಲಾಗಿದೆ.

ಜಿದ್ದಾ: ಸೌದಿ ಅರೇಬಿಯಾದಲ್ಲಿ(K.S.A) ಪರಿಷ್ಕೃತ ಆರೋಗ್ಯ ವಿಮಾ ಪಾಲಿಸಿ( Health Insurance) ಜಾರಿಗೆ ಬಂದಿದೆ. ಹೊಸ ನೀತಿಯಲ್ಲಿ 18 ಹೊಸ ಪ್ರಯೋಜನಗಳೊಂದಿಗೆ, ಅಸ್ತಿತ್ವದಲ್ಲಿರುವ 10 ಪ್ರಯೋಜನಗಳನ್ನು ಸುಧಾರಿಸಲಾಗಿದೆ.

ಅಕ್ಟೋಬರ್ 1 ರಿಂದ ಹೊಸತಾಗಿ ಪಡೆಯುವ ಅಥವಾ ನವೀಕರಿಸುವ ಪಾಲಿಸಿಗಳಿಗೆ ಹೊಸ ಪ್ರಯೋಜನಗಳು ಲಭಿಸಲಿದೆ. ಹೊಸ ಬದಲಾವಣೆಯ ಪ್ರಕಾರ, ಮಾನಸಿಕ ಅಸ್ವಸ್ಥತೆಯ ಗರಿಷ್ಠ ಚಿಕಿತ್ಸಾ ಕವರ್ ಅನ್ನು 15,000 ರಿಯಾಲ್‌ಗಳಿಂದ 50,000 ರಿಯಾಲ್‌ಗಳಿಗೆ ಹೆಚ್ಚಿಸಲಾಗಿದೆ. ಹಿಮೋಡಯಾಲಿಸಿಸ್(hemodialysis) ವ್ಯಾಪ್ತಿಯ ಮೌಲ್ಯವನ್ನು ಸಹ ಹೆಚ್ಚಿಸಲಾಗಿದೆ.ಪರಿಷ್ಕೃತ ತಿದ್ದುಪಡಿಯಲ್ಲಿ ಕೌನ್ಸಿಲ್ ಅಂಗೀಕರಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾಮಾನ್ಯ ವೈದ್ಯಾಧಿಕಾರಿಯನ್ನು ಭೇಟಿಮಾಡಲು ಶುಲ್ಕದ ಪಾಲು ಪಾವತಿಸಬೇಕೆಂಬ ನಿಯಮವನ್ನು ರದ್ದುಗೊಳಿಸಲಾಗಿದೆ.

ಈ ಪಾಲಿಸಿಯು ದಂತರೋಗ ತಡೆಗಟ್ಟುವ ಚಿಕಿತ್ಸೆ, ದಂತ ಸಮಸ್ಯೆಗಳಿಗೆ ವಾರ್ಷಿಕ ತಪಾಸಣೆ, ವರ್ಷಕ್ಕೊಮ್ಮೆ ದಂತ ಶುಚಿಗೊಳಿಸುವಿಕೆ, ಫಿಲ್ಲಿಂಗ್‌ಗಳು, ರೂಟ್ ಕೆನಾಲ್(root canal) ಚಿಕಿತ್ಸೆ ಮತ್ತು ತುರ್ತು ಹಲ್ಲಿನ ಸಮಸ್ಯೆ ಪ್ರಕರಣಗಳನ್ನು ಸಹ ಒಳಗೊಂಡಿದೆ.ಹಲ್ಲಿನ ಚಿಕಿತ್ಸೆಗಾಗಿ 1,200 ರಿಯಾಲ್‌ಗಳವರೆಗೆ ರಕ್ಷಣೆ ನೀಡಲಾಗುತ್ತದೆ. ಚಿಕಿತ್ಸಾ ವೆಚ್ಚದ ನಿಗದಿತ ಪ್ರಮಾಣವನ್ನು ಬಳಕೆದಾರರು ಭರಿಸುವ ಅಗತ್ಯವಿರುವುದಿಲ್ಲ.

ಮಹಿಳೆಯರ ಆರೋಗ್ಯ, ಬೊಜ್ಜಿನ ಶಸ್ತ್ರಚಿಕಿತ್ಸೆ(bariatric surgery) ಮತ್ತು ಮೂತ್ರಪಿಂಡ ಕಸಿ( kidney transplant) ಮೊದಲಾದವುಗಳ ಮೇಲೆ ಕೇಂದ್ರೀಕರಿಸುವುದರ ಜೊತೆಗೆ, ತಡೆಗಟ್ಟುವ ಪರೀಕ್ಷೆಗಳು ಮತ್ತು ವ್ಯಾಕ್ಸಿನೇಷನ್‌ಗಳು ಸಂಬಂಧಿತ ಹಲವಾರು ಪ್ರಯೋಜನಗಳನ್ನು ಹೊಸ ಪರಿಷ್ಕರಣೆಯು ಒಳಗೊಂಡಿದೆ ಎಂದು ಕೌನ್ಸಿಲ್ ಮಾಹಿತಿ ನೀಡಿದೆ.