ಮನಾಮ: ಬಹ್ರೇನ್‌ಗೆ ಸಂದರ್ಶಕರ ವೀಸಾದಲ್ಲಿ(Visit Visa) ಆಗಮಿಸುವವರು, ಪ್ರಯಾಣದ ಮುಂಚಿತವಾಗಿ ಮಾರ್ಗಸೂಚಿಗಳ ಪ್ರಕಾರವಿರುವ ಅಗತ್ಯ ದಾಖಲೆಗಳನ್ನ ಹೊಂದಿರುವುದಾಗಿ ಖಚಿತಪಡಿಸಿಕೊಳ್ಳುವಂತೆ ಭಾರತದ ರಾಯಭಾರ ಕಚೇರಿಯು ಸಲಹೆ ನೀಡಿದೆ.
ಬಹ್ರೇನ್ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ನಿಯಮಗಳ ಕುರಿತು ಅಧಿಕಾರಿಗಳು ಮಾರ್ಗದರ್ಶನ ನೀಡಿರುವ ಹಿನ್ನೆಲೆಯಲ್ಲಿ ರಾಯಭಾರ ಕಚೇರಿಯಿಂದ ಪ್ರಕಟಣೆ ಬಂದಿದೆ.
ಸಂದರ್ಶಕ ವೀಸಾದಲ್ಲಿ ಆಗಮಿಸಿ, ವಿಮಾನ ನಿಲ್ದಾಣದಿಂದ ಸ್ವದೇಶಕ್ಕೆ ಮರಳುವಂತಹಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಬಹ್ರೇನ್ ವಿಮಾನ ನಿಲ್ದಾಣ ಕಂಪನಿಯು ನಿಯಮವನ್ನು ಬಿಗಿಗೊಳಿಸಿದ ಕಾರಣ ಭಾರತೀಯ ರಾಯಭಾರ ಕಚೇರಿಯು ಸೂಚನೆಯನ್ನು ನೀಡಿದೆ.
ವಿಸಿಟ್ ವೀಸಾದಲ್ಲಿ ಆಗಮಿಸುವವರು ಪಾಲಿಸಬೇಕಾದ ನಿಯಮಗಳ ಬಗ್ಗೆ ಗಲ್ಫ್ ಏರ್(Gulf Air) ನಿನ್ನೆ ಟ್ರಾವಲ್ ಏಜೆನ್ಸಿಗಳಿಗೆ ಸುತ್ತೋಲೆಯನ್ನು ನೀಡಿದೆ.
ಷರತ್ತುಗಳನ್ನು ಪಾಲಿಸದೆ ವಿವಿಧ ದೇಶಗಳಿಂದ ಬಂದ 100 ಕ್ಕೂ ಹೆಚ್ಚು ಪ್ರಯಾಣಿಕರನ್ನು ಕಳೆದ ದಿನ ವಿಮಾನ ನಿಲ್ದಾಣದಿಂದ ವಾಪಸ್ ಕಳುಹಿಸಲಾಗಿತ್ತು. ಇತ್ತೀಚೆಗೆ ಇಂತಹ ಘಟನೆಗಳು ಮರುಕಳಿಸುತ್ತಿರುವುದರಿಂದ ನಿಯಮಗಳನ್ನು ಬಿಗಿಗೊಳಿಸಲಾಗಿದೆ.
ಬಹ್ರೇನ್‌ನಲ್ಲಿ ಬಳಸಬಹುದಾದ ಅನುಮೋದಿತ ಕ್ರೆಡಿಟ್ ಕಾರ್ಡ್ ಅನ್ನು ಹೊಂದಿರುವುದು ಅಥವಾ ದಿನಕ್ಕೆ ಕನಿಷ್ಠ 50 ದಿನಾರ್‌ಗಳನ್ನು ಹೊಂದಿರುವುದು ಮುಖ್ಯ ಅವಶ್ಯಕತೆಯಾಗಿದೆ. ಇದರ ಹೊರತಾಗಿ, ಹೋಟೆಲ್ ಬುಕಿಂಗ್ ದೃಢೀಕರಣ ಅಥವಾ ಬಹ್ರೇನ್‌ನಲ್ಲಿರುವ ಪ್ರಾಯೋಜಕರ ನಿವಾಸದ ವಿದ್ಯುತ್ ಬಿಲ್, ಕವರಿಂಗ್ ಲೆಟರ್ ಮತ್ತು ಸಿಪಿಆರ್ ರೀಡರ್ ಪ್ರತಿಯೊಂದಿಗೆ ಬಾಡಿಗೆ ಒಪ್ಪಂದದ ದಾಖಲೆ ಹಾಗೂ ರಿಟರ್ನ್ ಟಿಕೆಟ್ ಹೊಂದಿರಬೇಕು ಎಂಬುದಾಗಿದೆ ಸಂದರ್ಶಕರ ವೀಸಾ ಹೊಂದಿರುವವರು ಅನುಸರಿಸಬೇಕಾದ ಇನ್ನೊಂದು ಷರತ್ತು.
ಗಲ್ಫ್ ಏರ್‌ನ ರಿಟರ್ನ್ ಟಿಕೆಟ್ ಅಲ್ಲದಿದ್ದರೆ, ಬಹ್ರೇನ್‌ನಲ್ಲಿ ಎಮಿಗ್ರೇಷನ್ ತಪಾಸಣೆಯ ಸಮಯದಲ್ಲಿ ಮಾನ್ಯತೆ ಇರುವ ಟಿಕೆಟ್ ಸಂಖ್ಯೆಯನ್ನು ಹೊಂದಿರಬೇಕು.