ರಿಯಾದ್: ಸೌದಿ ಅರೇಬಿಯಾದಲ್ಲಿ ಪ್ರಾಯೋಜಕರು ನೀಡಬೇಕಾದ ಇಖಾಮಾ, ಲೆವಿ ಇತ್ಯಾದಿಗಳನ್ನು ಪಾವತಿಸದೆ ವಿದೇಶಿ ಉದ್ಯೋಗಿಗಳು ತಮ್ಮ ಪ್ರಾಯೋಜಕತ್ವವನ್ನು ಬದಲಾಯಿಸಬಹುದು ಎಂದು ಮಾನವಶಕ್ತಿ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯವು ಮಾಹಿತಿ ನೀಡಿದೆ.
ಅಂತಹ ಪಾವತಿಸಲು ಬಾಕಿ ಇರುವ ಶುಲ್ಕಗಳು ಹಳೆಯ ಪ್ರಾಯೋಜಕರ ಹೆಸರಿನಲ್ಲೇ ಉಳಿಸಿಕೊಳ್ಳಲಾಗುತ್ತದೆ. ಕಾರ್ಮಿಕ ಪರಿವರ್ತನಾ ಯೋಜನೆಯ ತಿದ್ದುಪಡಿಯ ಎರಡನೇ ಹಂತದಲ್ಲಿ ಸಚಿವಾಲಯದಿಂದ ಹೊಸ ಘೋಷಣೆ ಬಂದಿದೆ. ಹೊಸ ನಿರ್ಧಾರದಿಂದ ಭಾರತೀಯರು ಸೇರಿದಂತೆ ವಲಸಿಗರಿಗೆ ಸಮಾಧಾನಕರವಾಗಿದೆ.
ಈ ಹಿಂದೆ, ಈ ಸೌಲಭ್ಯವನ್ನು ವೈಯಕ್ತಿಕ ಪ್ರಾಯೋಜಕತ್ವದ ಅಡಿಯಲ್ಲಿನ ಕೆಲಸಗಾರರಿಗೆ ಮಾತ್ರ ಅನುಮತಿಸಲಾಗಿತ್ತು. ಆದರೆ ಕಾರ್ಮಿಕ ನಿಯಮಗಳಲ್ಲಿನ ಹೊಸ ತಿದ್ದುಪಡಿಯಂತೆ ಖಾಸಗಿ ವಲಯದಲ್ಲಿ ಕೆಲಸ ಮಾಡುವ ಎಲ್ಲಾ ಕಾರ್ಮಿಕರಿಗೆ ಈ ಪ್ರಯೋಜನ ಸಿಗಲಿದೆ.
ಇದರ ಪ್ರಕಾರ, ಪ್ರಾಯೋಜಕರು ಇಖಾಮಾವನ್ನು ನವೀಕರಿಸದ ಕಾರ್ಮಿಕರು ಸ್ವತಂತ್ರವಾಗಿ ಕಾರ್ಮಿಕ ಸಚಿವಾಲಯದ ‘ಖಿವಾ’ ಪೋರ್ಟಲ್ ಅನ್ನು ಪ್ರವೇಶಿಸಬಹುದು ಮತ್ತು ಹೊಸ ಉದ್ಯೋಗದಾತರ ಹೆಸರಿಗೆ ವರ್ಗಾಯಿಸಬಹುದು.
ಈ ರೀತಿ ಕೆಲಸಗಾರ ಪ್ರಾಯೋಜಕತ್ವ ಬದಲಿಸುವ ಮೂಲಕ, ಹಳೆಯ ಪ್ರಾಯೋಜಕರು ಬಾಕಿ ಇರುವ ಸಂಪೂರ್ಣ ಲೆವಿಯನ್ನು ಪಾವತಿಸಬೇಕಾಗುತ್ತದೆ. ಹೊಸ ಪ್ರಾಯೋಜಕರು, ಬದಲಾವಣೆಯ ದಿನದಿಂದ ಲೆವಿ ಮತ್ತು ಇತರ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ.
ಪ್ರಾಯೋಜಕತ್ವವನ್ನು ಬದಲಾಯಿಸಲು, ಹೊಸ ಉದ್ಯೋಗದಾತರು ಖಿವಾ ಪೋರ್ಟಲ್ ಮೂಲಕ ಕಾರ್ಮಿಕ ಸಚಿವಾಲಯಕ್ಕೆ ಕಾರ್ಮಿಕರ ಅಗತ್ಯತೆ ಬಗ್ಗೆ ಅರ್ಜಿಯನ್ನು ಸಲ್ಲಿಸಬೇಕು. ಕಾರ್ಮಿಕರು ಖಿವಾ ಪೋರ್ಟಲ್ ಮೂಲಕ ಈ ಅರ್ಜಿಯನ್ನು ಸ್ವೀಕರಿಸಿದ ನಂತರ, ಪ್ರಾಯೋಜಕತ್ವದ ಬದಲಾವಣೆಯು ಸಾಧ್ಯವಾಗುತ್ತದೆ.
ಇದಕ್ಕಾಗಿ, ಹಳೆಯ ಉದ್ಯೋಗದಾತನು ಪಾವತಿಸಲು ಬಾಕಿ ಇರುವ ಶುಲ್ಕವನ್ನು ಅದೇ ಖಾತೆಯಲ್ಲಿ ಉಳಿಸಿ, ಹೊಸ ಉದ್ಯೋಗದಾತನಿಗೆ ವರ್ಗಾವಣೆ ಮಾಡುವ ಆಯ್ಕೆಯನ್ನು ಕಾರ್ಮಿಕರು ಆರಿಸಬೇಕಾಗುತ್ತದೆ.
ಪ್ರಾಯೋಜಕರು ಲೆವಿ ಪಾವತಿಸದಿರುವುದು, ಇಖಾಮಾ ನವೀಕರಿಸದಿರುವುದು ಮುಂತಾದ ಕಾರಣಗಳಿಂದ ವರ್ಷಗಳಿಂದ ಮನೆಗೆ ಮರಳಲು ಸಾಧ್ಯವಾಗದೆ, ಉದ್ಯೋಗ ಬದಲಾಯಿಸಲೂ ಸಾಧ್ಯವಾಗದೆ ಸಂಕಷ್ಟದಲ್ಲಿದ್ದ ಅನೇಕ ವಲಸಿಗರಿಗೆ ಹೊಸ ನಿರ್ಧಾರವು ಸಾಕಷ್ಟು ಪರಿಹಾರದಾಯಕ.