janadhvani

Kannada Online News Paper

“ದೇಶವನ್ನು ಕಟ್ಟುವ ಕೈಗಳಾಗೋಣ..ಕೋಮು ಮತಾಂಧ ಶಕ್ತಿಯನ್ನು ಸೋಲಿಸೋಣ”…

ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭಾಶಯಗಳು 🇮🇳... "ನಮ್ಮೊಳಗೆ ಗೋಡೆ ಕಟ್ಟಿದವರು ಯಾರು"?
ಈ ವರದಿಯ ಧ್ವನಿಯನ್ನು ಆಲಿಸಿ

🖊️ಮುಹಮ್ಮದ್ ಅಲಿ ತುರ್ಕಳಿಕೆ
(ಕಾರ್ಯದರ್ಶಿ, SSF ಕರ್ನಾಟಕ ರಾಜ್ಯ)

ಭವ್ಯ ಭಾರತ ಸ್ವತಂತ್ರಗೊಂಡು ಇದೀಗ ತನ್ನ ಅಮೃತ ಮಹೊತ್ಸವವನ್ನು ಆಚರಿಸುತ್ತಿದೆ. 75 ವರ್ಷಗಳ ಹಿಂದೆ ಬ್ರಿಟಿಷ್‌ ಸಂಕೋಲೆಯಿಂದ ಮುಕ್ತಗೊಂಡು ಸ್ವಾತಂತ್ರ್ಯದ೮ ಘೋಷಣೆ ಮೊಳಗಿದಾಗ ದೇಶವು ಆತ್ಮಾಭಿಮಾನದಿಂದ ದನ್ಯಗೊಂಡಿತು.

ಭಾರತದ ಪ್ರತಿಯೊಬ್ಬ ಪ್ರಜೆಗೂ ದೇಶದುದ್ದಕ್ಕೂ ತನಗೆ ಸಂವಿಧಾನ ನೀಡಿದ ಸ್ವಾತಂತ್ರ್ಯವನ್ನು ಅನುಭವಿಸಿ ಸ್ವಾಭಿಮಾನದಿಂದ ತಲೆಯೆತ್ತಿ ಜೀವಿಸಲು ಸಾಧ್ಯವಾಗಲಿ…..
ಎಲ್ಲಾ ಪೂರ್ವಿಕ ಹೋರಾಟಗಾರರನ್ನು ಹುತಾತ್ಮರನ್ನು ಸ್ಮರಿಸುತ್ತಾ ಸರ್ವರಿಗೂ ಸ್ವಾತಂತ್ರ್ಯ ಅಮೃತ ಮಹೋತ್ಸವ ಶುಭಾಶಯಗಳೊಂದಿಗೆ.. ಅತೀ ಪ್ರಧಾನವಾದ ಒಂದೆರಡು ವಿಷಯಗಳನ್ನು ಹಂಚಿಕೊಳ್ಳಿತ್ತಿದ್ದೇನೆ…….

ಇನ್ನೂರು ವರ್ಷಗಳಷ್ಟು ಕಾಲ ಭಾರತೀಯರು ಬ್ರಿಟಿಷರಿಂದ ಬೇಕಾದಷ್ಟು ನೋವುಗಳನ್ನು ಅನುಭವಿಸಿದ ತ್ಯಾಗಪೂರ್ಣ ಹೋರಾಟದ ಫಲವಾಗಿ ದೇಶ ಸ್ವಾತಂತ್ರ್ಯ ಗೊಂಡಿತು. ಬ್ರಿಟಿಷ್ ಆಡಳಿತಗಾರರು ಜನಾಂಗೀಯ ತಾರತಮ್ಯ, ರಾಜಕೀಯ ಮತ್ತು ಸಾಮಾಜಿಕ, ದಬ್ಬಾಳಿಕೆ, ಬ್ರಿಟಿಷರ ವಿರುದ್ಧ ಹೋರಾಡಿದವರ ಮರಣದಂಡನೆ ಮತ್ತು ಇನ್ನೂ ಅನೇಕ ದುಷ್ಕೃತ್ಯಗಳನ್ನು ಮಾಡಿದರು. ಸಾಕಷ್ಟು ಹೋರಾಟ, ತ್ಯಾಗ, ಮತ್ತು ನಿರಂತರ ಕಷ್ಟಗಳ ನಂತರ, ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಬ್ರಿಟಿಷರ ದ್ವೇಷ ಪೂರಿತ ಆಡಳಿತ ವ್ಯವಸ್ಥೆಯನ್ನು ಉರುಳಿಸಲು ಸಾಧ್ಯವಾಯಿತು. ಈ ಹೋರಾಟದಲ್ಲಿ ಹಲವು ಮಂದಿ ಪ್ರಾಣ ತ್ಯಾಗ ಮಾಡಿದರು, ಹಿಂದೂ ಮುಸ್ಲಿಂ, ಕ್ರೈಸ್ತ ಜೈನ ಹೀಗೆ ಎಲ್ಲರೂ ಒಟ್ಟಾಗಿ ಧರ್ಮಾತೀತವಾಗಿ ಹೋರಾಡಿದ ಕಾರಣ ದೇಶವು ಸ್ವತಂತ್ರಗೊಂಡಿತು.

ಇದು ಸರ್ವಧರ್ಮವನ್ನೊಳಗೊಂಡ ಸರ್ವ ಜನಾಂಗದ ದೇಶ. ಎಲ್ಲರಿಗೂ ಸಮಾನವಾದ ಸ್ವಾತಂತ್ರ್ಯ, ಹಕ್ಕು ಮತ್ತು ಅವಕಾಶಗಳಿರುವ ದೇಶ. ಆದರೆ ಭದ್ರವಾದ ಸಂವಿಧಾನ ನೀಡಿದ ಅವಕಾಶಗಳು ಮತ್ತು ಸ್ವಾತಂತ್ರ್ಯ ವನ್ನು ಎಲ್ಲರೂ ಸಮಾನವಾಗಿ ಅನುಭವಿಸುತ್ತಿದ್ದಾರೆಯೇ? ಅಲ್ಲ ರಾಜಕೀಯ ಪ್ರಭಾವದ ಕಾರಣ ಧರ್ಮ, ಜಾತಿ, ಶ್ರೇಣಿಯ ಮಾನದಂಡದಲ್ಲಿ ಸವಲತ್ತುಗಳು, ಅವಕಾಶಗಳು, ಪರಿಹಾರಗಳು ನೀಡಲ್ಪಡುತ್ತಿದೆಯೇ? ಇದೊಂದು ಗಂಭೀರ ಪ್ರಶ್ನೆ!

ಇವತ್ತಿನ ವಿದ್ಯಮಾನದಲ್ಲಿ ಸ್ಪಷ್ಟವಾಗಿ ಹೇಳಬೇಕಾದರೆ ಆರೋಗ್ಯಕರ ಪ್ರಜಾಪ್ರಭುತ್ವದಲ್ಲಿ ನಾಗರಿಕರ ಹಕ್ಕುಗಳು ಬೆಲೆ ಕಳೆದುಕೊಳ್ಳುತ್ತಿದೆ. ಪ್ರತೀ ಮನೆಗಳಿಗೂ ದ್ವೇಷದ ಅಜೆಂಡಾಗಳನ್ನು ತಲುಪಿಸುತ್ತಿದೆ. ಧರ್ಮ ವೈಷಮ್ಯ, ಮತಾಂಧತೆ, ಸಂಘರ್ಷಗಳು, ಕೊಲೆಗಳು, ಹಿಂಸೆಗಳು ಹೀಗೆ ದಿನದಿಂದ ದಿನಕ್ಕೆ ಭಾರತ‌ ಅಸಹಿಷ್ಣುಗಳ ತಾಣವಾಗುತ್ತಿರುವುದು ಕಳವಳದ ಸಂಗತಿಯಾಗಿದೆ. ಸೌಹಾರ್ದ ಭಾರತದ ಇತಿಹಾಸವನ್ನು ತಿರುಚಿ ಜನರೆಡೆಯಲ್ಲಿ ಗೊಂದಲ ಸೃಷ್ಟಿಸಿ ವಿವಾದವನ್ನು ಉಂಟು ಮಾಡುತ್ತಿದೆ.‌ ಇದನ್ನು ನಮ್ಮ ರಾಜ್ಯದಲ್ಲಿ ಪಠ್ಯ ಪುಸ್ತಕದ ಮೂಲಕ ತರುವ ಪ್ರಯತ್ನ ಮಾಡಲಾಗಿದೆ.ಜಾತೀಯತೆಯ ವಿಷಭೀಜವನ್ನು ಬಿತ್ತಲು ಶಿಕ್ಷಣ ಕ್ಷೇತ್ರವನ್ನು ಆಯ್ಕೆ ಮಾಡಿ ಮಕ್ಕಳ ಮೆದುಳಿನಲ್ಲಿ ಜಾತಿ ಆಧಾರಿತ ತಾರಮ್ಯಗಳನ್ನು ತುಂಬಿಸಲಾಗುತ್ತಿದೆ.

ಧರ್ಮದ ಅಮಲೇರಿಸಿಕೊಂಡು ಬೀದಿಗಳಲ್ಲಿ ಗಲಭೆ ಮಾಡುವ ಯುವಕರನ್ನು ಉತ್ಫಾದಿಸಲಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ನಮ್ಮ ದೇಶಗಳಲ್ಲಿ ಅಲ್ಪ ಸಂಖ್ಯಾತರು ಅನುಭವಿಸುತ್ತಿರುವ ದೌರ್ಜನ್ಯಗಳು ಅದೆಷ್ಟೋ….
ಯಾರದೋ ದ್ವೇಷಕ್ಕಾಗಿ ಇಡೀ ಸಮುದಾಯವನ್ನು ಎಳೆದು ತಂದು ದೇಶದಲ್ಲಿ ಅಶಾಂತಿಯನ್ನು ಕೆಡಿಸೋಕೆ ಅಂತಲೇ ಹುಟ್ಟಿಕೊಂಡ ಕೆಲವು ಧರ್ಮಾಂಧ ಸಂಘಟನೆಗಳಿಂದಾಗಿ ಭಾರತ ದೇಶವು ನಲುಗಿ,ಕರಗಿ ಹೋಗಿದೆ.ದೇಶ ಸ್ವತಂತ್ರಗೊಂಡು 7 ದಶಕಗಳು ಕಳೆದರೂ ಇನ್ನೂ ಕೂಡ ಸಂಪೂರ್ಣ ಸೌಹಾರ್ದಯುತ ವಾತಾವರಣವನ್ನು ನಿರ್ಮಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂಬುದು ತುಂಬಾ ವಿಷಾದನೀಯ ಸಂಗತಿ.

ಸ್ವಾತಂತ್ರ್ಯದ ನಂತರ ರಚಿಸಲ್ಪಟ್ಟ ದೇಶದ ಸಂವಿಧಾನವೂ ಧಾರ್ಮಿಕ ಸ್ವಾತಂತ್ರ್ಯ ಮತ್ತು ವಿವಿಧ ಧಾರ್ಮಿಕ ವರ್ಗಗಳ ಮಧ್ಯೆ ಶಾಂತಿ ಮತ್ತು ಸಹೋದರತೆಗೆ ಬಲವಾದ ಬುನಾದಿಯನ್ನು ಒದಗಿಸಿದೆ.
ಇತ್ತೀಚಿನ ಕೆಲವು ವರ್ಷಗಳಿಂದ ದೇಶದ ಈ ಭದ್ರವಾದ ಸಾಮಾಜಿಕ ವ್ಯವಸ್ಥೆಯು ತೀವ್ರವಾದ ಪಂಥಾಹ್ವಾನಗಳನ್ನು ಎದುರಿಸುತ್ತಿದೆ. ಕೋಮು ಸೌಹಾರ್ದತೆ ವೇಗವಾಗಿ ಕೆಡುತ್ತಿದೆ. ಕೋಮುವಾದಿ ಶಕ್ತಿಗಳು ತಮ್ಮ ರಾಜಕೀಯ ಗೆಲುವು ಮಾತ್ರವಲ್ಲ ರಾಜಕೀಯ ಅಸ್ತಿತ್ವವೇ ಕೋಮು ವೈಷಮ್ಯವನ್ನು ಹೊಂದಿಕೊಂಡಿವೆಯೆಂದು ಚೆನ್ನಾಗಿ ಮನಗಂಡಿವೆ. ಈ ಧ್ರುವೀಕರಣ ಹೆಚ್ಚಿದಷ್ಟು ಅದರ ಯಶಸ್ಸು ಹೆಚ್ಚುತ್ತದೆ. ಆದ್ದರಿಂದ ಅವರು ಸಂಪೂರ್ಣ ದೇಶವನ್ನು ವಿಶೇಷತಃ ಸೂಕ್ಷ್ಮ ರಾಜ್ಯಗಳನ್ನು ನಿರಂತರ ಕೋಮುವೈಷಮ್ಯ ಮತ್ತು ಒತ್ತಡದಲ್ಲಿರಿಸಲು ಬಯಸುವಂತೆ ಭಾಸವಾಗುತ್ತದೆ.

ಭಾರತದಲ್ಲಿ ಎಂದಿನಿಂದ ಸಮಾಜ ಕಂಟಕವಾದ ಕೋಮುದಾದ ಎನ್ನುವ ಶಬ್ದ ಹುಟ್ಟಿಕೊಂಡಿತೋ ಅಂದಿನಿಂದ ಸಮಾಜ ಒಡೆಯುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಹಿಂದೂ ಮುಸ್ಲಿಮ್ ಸಹಭಾಳ್ವೆ ನಡೆಸುವುದು ಬಿಡಿ, ಹಿಂದೂ-ಮುಸ್ಲಿಮರ ಸ್ನೇಹಿತರಾಗಿದ್ದರೂ ಮಾತನಾಡುವುದು ಕಂಡರೆ ನೈತಿಕ ಪೊಲೀಸ್ ಗಿರಿ ಮೆರೆದು ಥಳಿಸುವ ಒಂದು ದುಷ್ಟರ ಗುಂಪೇ ದೇಶದಲ್ಲಿ ಕಾರ್ಯಾಚರಿಸುತ್ತಿದೆ.
ಭಾರತ ಹಿಂದೆಂದೂ ಕಂಡರಿಯದ ಬಿಕ್ಕಟ್ಟಿಗೆ ಇಂದು ಸಿಲುಕಿದೆ.ದೇಶದ ಬಹುಜನರ ಭಾವನೆ ಮತ್ತು ಬದುಕಿಗೆ ತೀವ್ರ ಸವಾಲೊಡ್ಡಿರುವ ಕೋಮುವಾದ ವ್ಯಾಪಕವಾಗುತ್ತಿದೆ.ಪರಸ್ಪರ ಸ್ನೇಹ ಸಹಬಾಳ್ವೆಗೆ ಮತ್ತು ಶಾಂತಿಯುತ ಬದುಕಿಗೆ ಹೆಸರಾಗಿದ್ದ ಭಾರತೀಯ ಸಮಾಜ ಈಗ ಕೋಮುದಳ್ಳುರಿಗೆ ಸಿಲುಕಿ ನರಳುತ್ತಿದೆ. ನಾವು ಇಂದು ಅತ್ಯಂತ ಆತಂಕದ ಸ್ಥಿತಿಯಲ್ಲಿದ್ದೇವೆ. ಮನುಷ್ಯನ ಸಾಮಾಜಿಕ,ಆರ್ಥಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯ ಕುರಿತು ಮಾಡಬೇಕಾದ ಚಿಂತನೆಗೆ ಬೇಕಾದ ಸಮಯವನ್ನು ಕೋಮುವಾದದ ವಿರುದ್ಧ ಹೋರಾಡಲು ಬಳಸುವ ಪರಿಸ್ಥಿತಿ ಬಂದೊದಗಿದೆ.

ಸಮಾಜದಲ್ಲಿ ಕೋಮು ಸೌಹಾರ್ದವು ಸಹಜವಾಗಿ ಇರುವಂಥ ವಾತಾವರಣವಿದ್ದಾಗ ಮಾತ್ರ ಮಾನವ ಅಭಿವೃದ್ಧಿ ಪಥದಲ್ಲಿ ಮುಂದುವರಿಯಲು ಸಾಧ್ಯ.
ಹಲವು ಧರ್ಮ, ಬಹುಭಾಷೆ, ಹಲವು ಸಮುದಾಯ, ವಿವಿಧ ಜನಾಂಗೀಯ ಸಾಂಸ್ಕ್ರತಿಕ ಬಹುತ್ವ ಎಲ್ಲವನ್ನೂ ಏಕ ಸೂತ್ರದಲ್ಲಿ ಬೆಸೆದು ಅನೇಕತೆಯಲ್ಲಿ ಏಕತೆಯನ್ನು ಸಾಧಿಸಿ ವಿಶ್ವದಲ್ಲೇ ಅತ್ಯಂತ ಶ್ರೇಷ್ಟತೆ ಪಡೆದ ಪ್ರಜಾಪ್ರಭುತ್ವ ಸಂವಿಧಾನ ದೇಶವಾಗಿದೆ ಭಾರತ . ಮಾಜಿ ರಾಷ್ಟಪತಿ ದಿವಗಂತ ಡಾ.ಎ.ಪಿ.ಜೆ ಅಬ್ದುಲ್ ಕಲಾಂರವರು ಕೂಡ ಭಾರತವು ಭವಿಷ್ಯದಲ್ಲಿ ಸ್ವಾತಂತ್ರ್ಯ ,ಅಭಿವೃಧ್ಧಿ ಹಾಗೂ ಬಲಿಷ್ಟ ರಾಷ್ಟ್ರವಾಗ ಬೇಕೆಂದು ಕನಸ್ಸು ಕಂಡಿದ್ದರು. ಎಲ್ಲರ ಬಾಯಲ್ಲಿ “ಮೇರಾ ಭಾರತ್ ಮಹಾನ್”ಎಂದು ಅನಿಸಿಕೊಳ್ಳುತ್ತಿದ್ದ ಭಾರತದ ಪರಿಸ್ಥಿತಿ ಈಗ ಹೇಗಿದೆ ಅಂದ್ರೆ ಊಹಿಸಲೂ ಸಾಧ್ಯವಿಲ್ಲದಂತಾಗಿದೆ.

ಎಲ್ಲೆಡೆ ಕ್ಷೋಭೆ ,ಧ್ವೇಷ ಅರಾಜಕತೆ ,ಮತೀಯವಾದ ಕೋಮು ಸಂಘರ್ಷ ,ಕೊಲೆಗಳು ಹೆಚ್ಚಿವೆ. ಲಕ್ಷ ಗಟ್ಟಲೆ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ, ಭಯೋತ್ಪಾದನೆ, ಭ್ರಷ್ಟಾಚಾರ, ನಿರುದ್ಯೋಗ ಸಮಸ್ಯೆ, ಕಲಹ ,ದೌರ್ಜನ್ಯ ,ಅಶಾಂತಿ,ಅನೈತಿಕತೆ . ಸಾಮಾಜಿಕ ಅಭದ್ರತೆ , ಗೂಂಡಾಗಿರಿ, ಸ್ತ್ರೀ ಹಿಂಸೆ, ಗಲಭೆ ದಂಗೆಗಳ ಮಧ್ಯೆ ಭಾರತೀಯರ ಬದುಕು ಅಸ್ತವ್ಯಸ್ತವಾಗಿದೆ. ಇನ್ನು ದಲಿತರು,ದಮನಿತರು, ಅಲ್ಪ ಸಂಖ್ಯಾತರು ಅಸುರಕ್ಷಿತರಾಗಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಕೋಮುವಾದಿ ಶಕ್ತಿಗಳಿಂದ ದೇಶವು ಅಪಾಯದ ಅಂಚಿನಲ್ಲಿದ್ದು ಸ್ವತಂತ್ರ ಭಾರತದಲ್ಲಿ ನಾವು ಹಿಂದೆಂದೂ ಕಾಣದ ಕ್ಷಿಷ್ಟಕರ ಪರಿಸ್ಥಿತಿ ಅನಾವರಣಗೊಂಡಿದೆ.

ಒಂದು ಸಾವಿಗೆ ಮತ್ತೊಂದು ಸಾವು ಅಥವಾ ಒಂದು ಸಮುದಾಯದ ನೋವಿಗೆ ಮತ್ತೊಂದು ಸಮುದಾಯದ ನೋವು ಮುಖಾಮುಖಿಯಾಗುತ್ತಾ ಹೋದರೆ ನೊಂದ ಮನಗಳು, ಹತ್ಯೆಗೀಡಾಗುವ ಜೀವಗಳು ಅಸ್ಮಿತೆಯ ಚೌಕಟ್ಟಿನೊಳಗೇ ಕೊಳೆತು ಹೋಗಲಿದೆ.

ಜನತೆಯನ್ನು ಕಾಡುವ ಅಪೌಷ್ಟಿಕತೆ, ಮೌಲ್ಯಧಾರಿತ ಶಿಕ್ಷಣ, ಸ್ವಚ್ಛ ನೀರಿನ ಸಮಸ್ಯೆ ನಿರುದ್ಯೋಗ ಸಮಸ್ಯೆ , ರಸ್ತೆ ನೈರ್ಮಲಿಕರಣ ಇನ್ನು ಅನೇಕ ಮೂಲಭೂತ ಕೊರತೆಗಳ ಸೌಕರ್ಯಗಳನ್ನು ಸರಕಾರ ಒದಗಿಸಿ ಕೊಡಬೇಕು . ನಾಗರಿಕರು ಜನಸಾಮಾನ್ಯರು ,ಕಾರ್ಮಿಕರು ದುಷ್ಟ ರಾಜಕಾರಣಿಗಳ ಹಣದ ಆಮಿಷಗಳಿಗೆ ಮರುಳಾಗದೇ ಪರಸ್ಪರ ಕಚ್ಚಾಡದೆ ದೇಶದಲ್ಲಿ ಶಾಂತಿ ,ಸೌಹಾರ್ದತೆ ಸಾಮರಸ್ಯವನ್ನು ಕಾಪಾಡಿಕೊಂಡು ಬರಬೇಕು .ಭ್ರಷ್ಟಾಚಾರಿಗಳು, ಕೋಮುವಾದಿಗಳು , ನರಹಂತಕರು, ಆತ್ಯಾಚಾರಿಗಳಿಗೆ ಶಿಕ್ಷೆಯಾಗಬೇಕು.

ಭಾರತದ ಶಕ್ತಿಯು ದೇಶದ ಯುವ ಸಮೂಹವಾಗಿದೆ .ದಿಕ್ಕೆಟ್ಟ ಯುವ ಸಮೂಹವನ್ನು ಸರಿಪಡಿಸಿ ಅವರಲ್ಲಿ ಸಚ್ಚಾರಿತ್ರ್ಯವನ್ನು ತುಂಬಬೇಕು .ರಾಷ್ಟ್ರವು ಸಂಪೂರ್ಣ ಅವನತಿಯಡೆಗೆ ತಲುಪುವ ಮುನ್ನ ಸಮಾಜ ಚಿಂತಕರು ಎಚ್ಚೆತ್ತುಕೊಳ್ಳಬೇಕು. ಸರ್ವರಿಗೂ ಸಮಬಾಳು ಸಮಪಾಲು ಸ್ವಾತಂತ್ರ್ಯ ಸಿಗುವಂತಾಗಬೇಕು. ಭಾರತದ ಈಗಿನ ಅವ್ಯವಸ್ಥೆಯಲ್ಲಿ ಬದಲಾವಣೆ ತಂದರೆ ಖಂಡಿತ ಭಾರತದ ಭವಿಷ್ಯ ಉತ್ತಮಗೊಳ್ಳಲು ಸಾಧ್ಯವಿದೆ.

ಗಾಂಧೀಜಿಯವರು ಹೇಳಿರುವಂತೆ “ಮಾನವೀಯತೆಯಲ್ಲಿ ನೀವು ನಂಬಿಕೆಯನ್ನು ಕಳೆದುಕೊಳ್ಳದಿರಿ ,ಮಾನವೀತೆಯು ಒಂದು ಸಾಗರವಾಗಿದೆ. ಒಂದು ವೇಳೆ ಸಾಗರದ ಕೆಲವು ಹನಿಗಳು ಕೊಳಕಾದಲ್ಲಿ ಇಡೀ ಸಮುದ್ರವೇ ಕೊಳಕಾಗಳು ಸಾಧ್ಯವಿಲ್ಲ”. ಈ ನಿಟ್ಟಿನಲ್ಲಿ ನಾವು ಎಲ್ಲಾ ಧರ್ಮದ ಸಮಾನ ಮನಸ್ಕರನ್ನು ಸೇರಿಸಿ ನಮ್ಮ ದೇಶದ ಶಾಂತಿಯುತ ಸಹಬಾಳ್ವೆಗೆ ಕಳಂಕವಾಗಿರುವ ಕೋಮುವಾದವನ್ನು ಹಿಮ್ಮೆಟ್ಟಿಸಲು ಕೈಜೋಡಿಸಬೇಕಾಗಿದೆ. ಈ ದೇಶ ಅಥವಾ ಸಮಾಜ ನಮಗೇನು ನೀಡಿದೆ ಎಂಬುದನ್ನು ಚಿಂತಿಸುವುದರ ಬದಲಾಗಿ ನಾವೇನು ಈ ದೇಶಕ್ಕಾಗಿ ನೀಡಬಹುದು ಎಂದುದನ್ನು ಚಿಂತಿಸಬೇಕಾಗಿದೆ.

ಬನ್ನಿ….ನಾವು ದೇಶವನ್ನು ಒಡೆಯುವ ಕೈಗಳಾಗದೆ ದೇಶವನ್ನು ಕಟ್ಟುವ ಕೈಗಳಾಗೋಣ.ಭಾರತದ ಪುಣ್ಯ ಭೂಮಿಯಲ್ಲಿ ಹುಟ್ಟಿ ಬೆಳೆದಿರುವ ನಾವೆಲ್ಲರೂ ಸಹೋದರರು, ಇದನ್ನು ಉಳಿಸಿ ಬೆಳೆಸೋಣ.

ಸಹಬಾಳ್ವೆ, ಮಾನವೀಯತೆ, ಹಾಗೂ ಧರ್ಮ ಸಮನ್ವಯದ ಮೂಲಕ ಶ್ರೇಷ್ಠ ಭಾರತವನ್ನು ಉಳಿಸಲು ನಮ್ಮಿಂದ ಸಾಧ್ಯವಾಗಲಿ.

ಸರ್ವರಿಗೂ ದೇಶದ 75ನೇ ಸ್ವಾತಂತ್ರ್ಯೋತ್ಸವದ ಶುಭ ಕಾಮನೆಗಳು

error: Content is protected !! Not allowed copy content from janadhvani.com