janadhvani

Kannada Online News Paper

‘ಹಲೋ ಇದು ಶೈಖ್ ಹಮ್ದಾನ್’: ಡೆಲಿವರಿ ಬಾಯ್ ಗೆ ದುಬೈನ ಕ್ರೌನ್ ಪ್ರಿನ್ಸ್ ನೇರ ಕರೆ- ಕಾರಣವೇನು ಗೊತ್ತೇ?

ಡೆಲಿವರಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿರುವ ಪಾಕಿಸ್ತಾನಿ ಪ್ರಜೆ ಅಬ್ದುಲ್ ಗಫೂರ್ ಅಬ್ದುಲ್ ಹಕೀಂ ತಮ್ಮ ಒಳ್ಳೆಯ ಕೆಲಸಗಳಿಂದ ದುಬೈನಲ್ಲಿ ಸ್ಟಾರ್ ಆಗಿದ್ದಾರೆ.

ದುಬೈ(ಜನಧ್ವನಿ ವಾರ್ತೆ): ‘ಹಲೋ ಇದು ಶೇಖ್ ಹಮ್ದಾನ್’. ದುಬೈನಲ್ಲಿ ಡೆಲಿವರಿ ಬಾಯ್ ಆಗಿರುವ ಪಾಕಿಸ್ತಾನ ಮೂಲದ ಅಬ್ದುಲ್ ಗಫೂರ್ ಅವರಿಗೆ ಬಂದ ದೂರವಾಣಿ ಕರೆಯನ್ನು ನಂಬಲಾಗಲಿಲ್ಲ. ದುಬೈನ ಕ್ರೌನ್ ಪ್ರಿನ್ಸ್ ಶೈಖ್ ಹಮ್ದಾನ್ ಬಿನ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮಖ್ತೂಮ್ ಅವರು ಅಬ್ದುಲ್ ಗಫೂರ್ ಅವರು ಮಾಡಿರುವ ಜನಹಿತ ಕಾರ್ಯಕ್ಕಾಗಿ ಅಭಿನಂದಿಸಲು ವೈಯಕ್ತಿಕವಾಗಿ ಕರೆ ಮಾಡಿದರು.

ಕಳೆದ ದಿನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಯುಎಇಯ ಫುಡ್ ಡೆಲಿವರಿ ಕಂಪನಿ ತಲಬಾತ್ ನಲ್ಲಿ ಡೆಲಿವರಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿರುವ ಪಾಕಿಸ್ತಾನಿ ಪ್ರಜೆ ಅಬ್ದುಲ್ ಗಫೂರ್ ಅಬ್ದುಲ್ ಹಕೀಂ ತಮ್ಮ ಒಳ್ಳೆಯ ಕೆಲಸಗಳಿಂದ ದುಬೈನಲ್ಲಿ ಸ್ಟಾರ್ ಆಗಿದ್ದಾರೆ. ವೀಡಿಯೋ ವೀಕ್ಷಿಸಿ

ದುಬೈನ ಜನನಿಬಿಡ ಅಲ್ಕೂಸ್ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ. ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತಿದ್ದಾಗ ಎದುರಿಗೆ ರಸ್ತೆಯಲ್ಲಿ ಎರಡು ಕಾಂಕ್ರೀಟ್ ಬ್ಲಾಕ್ ಗಳು ಬಿದ್ದಿರುವುದು ಗಮನಕ್ಕೆ ಬಂದಿದೆ. ಬೇರೆ ವಾಹನಗಳು ಅದರಲ್ಲಿ ಸಿಲುಕಿ ಅಪಘಾತಕ್ಕೀಡಾಗುವ ಸಾಧ್ಯತೆಯನ್ನು ಮನಗಂಡ ಗಫೂರ್, ಬೈಕ್‌ನಿಂದ ಇಳಿದು ಸಿಗ್ನಲ್‌ನಲ್ಲಿ ವಾಹನಗಳು ಹೊರಡುವವರೆಗೆ ಕಾದು ಕಾಂಕ್ರೀಟ್ ಬ್ಲಾಕ್‌ಗಳನ್ನು ತೆಗೆಯುತ್ತಿದ್ದರು.

ಬಿಡುವಿಲ್ಲದ ಕೆಲಸದ ಮಧ್ಯೆಯೂ ಡೆಲಿವರಿ ಬಾಯ್ ಒಳ್ಳೆಯ ಕಾರ್ಯಕ್ಕೆ ಸಮಯ ಮೀಸಲಿಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಯಾರೋ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಈ ದೃಶ್ಯ ದುಬೈನ ಕ್ರೌನ್ ಪ್ರಿನ್ಸ್ ಗಮನವನ್ನೂ ಸೆಳೆದಿತ್ತು. “ದುಬೈನಲ್ಲಿ ನಡೆದಿರುವುದು ಶ್ಲಾಘನೀಯ. ಈ ವ್ಯಕ್ತಿ ಯಾರೆಂದು ಯಾರಾದರೂ ಸೂಚಿಸಬಹುದೇ?” ಎಂದು ಕೇಳಿಕೊಂಡು ಶೈಖ್ ಹಮ್ದಾನ್ ಟ್ವಿಟ್ಟರ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಕೆಲವೇ ಗಂಟೆಗಳಲ್ಲಿ, ಡೆಲಿವರಿ ಬಾಯ್ ಅನ್ನು ಗುರುತಿಸಲಾಗಿದೆ ಎಂದು ಶೈಖ್ ಹಮ್ದಾನ್ ಅವರೇ ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿದ್ದಾರೆ. ಅಬ್ದುಲ್ ಗಫೂರ್ ಅವರು ಡೆಲಿವರಿಗಾಗಿ ಹೊರಗಿರುವಾಗ ಶೈಖ್ ಹಮ್ದಾನ್ ಅವರಿಂದ ಕರೆ ಬರುತ್ತದೆ. ಅವರ ಕೆಲಸವನ್ನು ಶ್ಲಾಘಿಸಿ ಅವರಿಗೆ ಧನ್ಯವಾದ ಅರ್ಪಿಸಿದ ಶೈಖ್ ಹಮ್ದಾನ್ ಅವರು ಅಬ್ದುಲ್ ಗಫೂರ್ ಅವರನ್ನು ಶೀಘ್ರದಲ್ಲೇ ಭೇಟಿಯಾಗುವುದಾಗಿ ಹೇಳಿದ್ದಾರೆ.

error: Content is protected !! Not allowed copy content from janadhvani.com