janadhvani

Kannada Online News Paper

ಮಸೂದ್ ಮತ್ತು ಫಾಝಿಲ್ ಕುಟುಂಬಕ್ಕೆ ತಲಾ 30 ಲಕ್ಷ ರೂ. ಪರಿಹಾರ- ಮುಸ್ಲಿಂ ಸೆಂಟ್ರಲ್ ಕಮಿಟಿ ನಿರ್ಧಾರ

ಇಬ್ಬರು ಅಮಾಯಕ ಮುಸ್ಲಿಮರ ಮನೆಗೆ ಭೇಟಿ ನೀಡದ ಮುಖ್ಯಮಂತ್ರಿಯವರ ಅಮಾನವೀಯ ನಿಲುವಿಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಯಿತು.
ಈ ವರದಿಯ ಧ್ವನಿಯನ್ನು ಆಲಿಸಿ

ಮಂಗಳೂರು, ಜು.30: ದ.ಕ.ಜಿಲ್ಲೆಯಲ್ಲಿ ಮೊನ್ನೆ ನಡೆದ ಕೊಲೆ ಪ್ರಕರಣದ ಹಿನ್ನಲೆಯಲ್ಲಿ ದ.ಕ.ಜಿಲ್ಲಾಡಳಿತ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದ ಶಾಂತಿ ಸಭೆಯನ್ನು ಮುಸ್ಲಿಂ ಸಂಘಟನೆಗಳು ಬಹಿಷ್ಕರಿಸಿವೆ. ಈ ಮಧ್ಯೆ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಲಾಜ್ ಕೆ.ಎಸ್. ಮುಹಮ್ಮದ್ ಮಸೂದ್ರರ ಸ್ವಗೃಹದಲ್ಲಿ ಅವರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆದು ಮೃತ ಬೆಳ್ಳಾರೆಯ ಮುಹಮ್ಮದ್ ಮಸೂದ್ ಮತ್ತು ಮಂಗಳಪೇಟೆಯ ಮುಹಮ್ಮದ್ ಫಾಝಿಲ್ ಕುಟುಂಬಕ್ಕೆ ತಲಾ 30 ಲಕ್ಷ ರೂ. ಪರಿಹಾರ ನೀಡಲು ನಿರ್ಧರಿಸಿತು.

ಜಿಲ್ಲೆಯಲ್ಲಿ ನಡೆದ ಮೂರು ಅಮಾಯಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೇವಲ ಪ್ರವೀಣ್ ನೆಟ್ಟಾರು ಬಿಜೆಪಿ ಕಾರ್ಯಕರ್ತನ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ 25 ಲಕ್ಷ ರೂ. ಪರಿಹಾರ ನೀಡಿರುವುದನ್ನು ಮತ್ತು ಉಳಿದ ಇಬ್ಬರು ಅಮಾಯಕ ಮುಸ್ಲಿಮರ ಮನೆಗೆ ಭೇಟಿ ನೀಡದೆ ಮುಖ್ಯಮಂತ್ರಿಯವರ ಅಮಾನವೀಯ ನಿಲುವಿಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಯಿತು. ಅಲ್ಲದೆ ಮುಸ್ಲಿಂ ಸೆಂಟ್ರಲ್ ಕಮಿಟಿಯ ನೇತೃತ್ವದಲ್ಲಿ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಮಸೂದ್ ಮತ್ತು ಫಾಝಿಲ್‌ನ ಕುಟುಂಬಸ್ಥರಿಗೆ ತಲಾ 30 ಲಕ್ಷ ರೂ. ಸಹಾಯ ಧನ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಅಲ್ಲದೆ ಪ್ರಕರಣದ ಬಗ್ಗೆ ಕುಟುಂಬಸ್ಥರಿಗೆ ಕಾನೂನಿನ ನೆರವು ನೀಡಲು ನಿರ್ಣಯಿಸಲಾಯಿತು.

ಜಿಲ್ಲೆಯ ಸಮಸ್ತ ನಾಗರಿಕರು ಶಾಂತಿಯನ್ನು ಕಾಪಾಡಬೇಕು ಮತ್ತು ಮೃತಪಟ್ಟ ಮೂವರು ಕುಟುಂಬಸ್ಥರಿಗೆ ನೋವನ್ನು ಭರಿಸುವ ಶಕ್ತಿಯನ್ನು ದೇವನು ಅನುಗ್ರಹಿಸಲೆಂದು ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಲಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಸಭೆಯಲ್ಲಿ ಸಾಂತ್ವನ ನೀಡಿದರು.

ಸಭೆಯಲ್ಲಿ ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್, ಮಾಜಿ ಶಾಸಕ ಮೊಯ್ದಿನ್ ಬಾವಾ, ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷರಾದ ಹಾಜಿ ಇಬ್ರಾಹಿಂ ಕೋಡಿಜಾಲ್, ಹಾಜಿ ಬಿ.ಎಂ. ಮುಲ್ತಾಝ್ ಅಲಿ, ಕೆ. ಅಶ್ರಫ್, ಹನೀಫ್ ಹಾಜಿ ಬಂದರ್, ಸೈಯದ್ ಅಹ್ಮದ್ ಬಾಷಾ ತಂಬಳ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com