janadhvani

Kannada Online News Paper

ಸತ್ತು ಬಿದ್ದ ಅಮಾಯಕರ ನೆತ್ತರಲ್ಲಿ ಓಟು ಹುಡುಕುತ್ತಿದ್ದಾರೆ!! ಕೆಲವರು ಹುತಾತ್ಮ, ಶಹೀದ್ ಎಂಬ ಪದವಿಯನ್ನು ನೀಡಲು ಮುಗ್ಧರ ಶವ ಹುಡುಕುತ್ತಿದ್ದಾರೆ!

ಕೊಲೆಮಾಡಿದವನಿಗೆ ಗೊತ್ತಿಲ್ಲ ನಾನೇಕೆ ಕೊಲೆಮಾಡಿದೆ? ಕೊಲ್ಲಲ್ಪಟ್ಟವನಿಗೆ ತಿಳಿದಿಲ್ಲ ನಾನೇಕೆ ಕೊಲ್ಲಲ್ಪಟ್ಟೆ? ತಬ್ಬಲಿಯಾದ ಮಕ್ಕಳಿಗೆ, ವಿಧವೆಯಾದ ಪತ್ನಿಗೆ, ಅನಾಥವಾದ ಆ ಕುಟುಂಬಕ್ಕೆ ಅರಿವಿಲ್ಲ ನಾವೇಕೆ ನಮ್ಮವರನ್ನು ಕಳಕೊಂಡೆವೆಂದು?

✍🏻 ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ
(ಕೋಶಾಧಿಕಾರಿ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ)

ಇಲ್ಲಿ ಮನುಷ್ಯ ಜೀವಕ್ಕೆ ಬೆಲೆಯೇ ಇಲ್ಲದಂತಾಗಿ ಬಿಟ್ಟಿದೆ. ಕೊಲೆಮಾಡಿದವನಿಗೆ ಗೊತ್ತಿಲ್ಲ ನಾನೇಕೆ ಕೊಲೆಮಾಡಿದೆ? ಕೊಲ್ಲಲ್ಪಟ್ಟವನಿಗೆ ತಿಳಿದಿಲ್ಲ ನಾನೇಕೆ ಕೊಲ್ಲಲ್ಪಟ್ಟೆ? ತಬ್ಬಲಿಯಾದ ಮಕ್ಕಳಿಗೆ, ವಿಧವೆಯಾದ ಪತ್ನಿಗೆ, ಅನಾಥವಾದ ಆ ಕುಟುಂಬಕ್ಕೆ ಅರಿವಿಲ್ಲ ನಾವೇಕೆ ನಮ್ಮವರನ್ನು ಕಳಕೊಂಡೆವೆಂದು? ಆದರೆ ಕೆಲವರು ಮಾತ್ರ ನಾವು ಹೇಗೆ ಈ ಹೆಣದ ಮೇಲೆ ಸಿಂಹಾಸನ ಕಟ್ಟಿ ಕುಳಿತುಕೊಳ್ಳಬೇಕೆಂಬ ಲೆಕ್ಕಾಚಾರದಲ್ಲಿದ್ದಾರೆ! ಅವರು ಸತ್ತು ಬಿದ್ದ ಅಮಾಯಕರ ನೆತ್ತರಲ್ಲಿ ಓಟು ಹುಡುಕುತ್ತಿದ್ದಾರೆ! ಧರ್ಮವನ್ನೋ, ಧಾರ್ಮಿಕ ಕೇಂದ್ರಗಳನ್ನೋ, ಧರ್ಮ ಗುರುಗಳನ್ನೋ ಮಾತ್ರ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಹೀರೋ ಆಗುವ ಕನಸು ಕಾಣುತ್ತಿದ್ದಾರೆ.

ಒಂದು ವೇಳೆ ಇವರೆಲ್ಲಾ ಧರ್ಮವನ್ನು, ಧರ್ಮದ ಮರ್ಮವನ್ನೂ ಚೆನ್ನಾಗಿ ಕಲಿಯುತ್ತಿದ್ದರೆ ಇಲ್ಲಿ ಯಾವುದೇ ಅಮಾಯಕ ಜೀವಗಳೂ ಬಲಿಯಾಗುತ್ತಿರಲಿಲ್ಲ, ಯಾವ ಕುಟುಂಬವೂ ಅನಾಥವಾಗುತ್ತಿರಲಿಲ್ಲ. ಕಾರಣ, ಧರ್ಮಗಳು ಪರಸ್ಪರ ಸಾಮರಸ್ಯದ ಸ್ನೇಹ ಸೇತುವೆಯನ್ನು ನಿರ್ಮಿಸಲು ಕಲಿಸುತ್ತವೆಯೇ ಹೊರತು ಮನುಷ್ಯ ಮನಸ್ಸುಗಳ ಮಧ್ಯೆ ದ್ವೇಷ ವೈಷಮ್ಯಗಳ ಅಡ್ಡಗೋಡೆ ಕಟ್ಟಲು ಕಲಿಸಿಕೊಟ್ಟಿಲ್ಲ. ಹೊಂಚು ಹಾಕಿ ಕುಳಿತು ಅಮಾಯಕನನ್ನು ಕೊಚ್ಚಿ ಕೊಂದು ‘ಧರ್ಮರಕ್ಷಣೆ’ ಮಾಡು ಎಂದು ಕಲಿಸಿಯೇ ಇಲ್ಲ! ಅಂಗಡಿಗೆ ಬೆಂಕಿ ಹಾಕಿ, ಕಲ್ಲು ತೂರಾಟ ನಡೆಸಿ, ಹಲ್ಲೆ ಕೊಳ್ಳೆಗಳ ಮೂಲಕ ಧರ್ಮವನ್ನು ಕಾಪಾಡಿ ಎಂದು ಯಾವ ಧರ್ಮವೂ ಕಲಿಸಲು ಸಾಧ್ಯವಿಲ್ಲ. ಅಧಿಕಾರದ ಅಮಲಿನಲ್ಲಿರುವವರಿಗೆ ಇದ್ಯಾವುದೂ ಅಷ್ಟು ಬೇಗ ಅರ್ಥವಾಗುವುದಿಲ್ಲ.

ಸ್ವತಂತ್ರ ಭಾರತವು ಅಮೃತ ಮಹೋತ್ಸವದ ಹೊಸ್ತಿಲಲ್ಲಿದೆ. ವೈವಿಧ್ಯತೆಯೇ ನಮ್ಮ ಸೌಂದರ್ಯ ಎಂದು ಎದೆಯುಬ್ಬಿಸಿ ಹೇಳುತ್ತಿದ್ದ ನಾವು ಪರಸ್ಪರ ಧರ್ಮ ಜಾತಿಯ ಹೆಸರಲ್ಲಿ ನರಿನಾಯಿಗಳಿಗಿಂತಲೂ ಕಡೆಯಾಗಿ ಬೀದಿಬೀದಿಗಳಲ್ಲಿ ಬಡಿದಾಡುತ್ತಿದ್ದೇವೆ. ಅಂದು ದೇವಸ್ಥಾನ ಕಟ್ಟಲು ದೇಣಿಗೆ ನೀಡಿದ್ದ ಮುಹಮ್ಮದ್ ಹಾಜಿಯ ಮೊಮ್ಮಕ್ಕಳು ಹಾಗೂ ಮಸೀದಿ ಕಟ್ಟಲು ಜಾಗ ನೀಡಿದ್ದ ರಾಮಣ್ಣನ ಮರಿಮಕ್ಕಳು ಪರಸ್ಪರ ಕತ್ತಿಹಿಡಿದು ಧರ್ಮರಕ್ಷಣೆಗೆ ನಿಂತಿದ್ದಾರೆ! ಕೆಲವರು ‘ಶಹೀದ್’ ಆಗಲು ಹೊರಟರೆ ಇನ್ನೂ ಕೆಲವರು ‘ಹುತಾತ್ಮ’ ಪದವಿ ಪಡೆಯುವ ತುರಾತುರಿಯಲ್ಲಿದ್ದಾರೆ.

ಮುಗ್ಧ ಯುವಕರಿಗೆ ಈ ಪದವಿ ನೀಡಲು ಕೆಲವು ಪಕ್ಷಗಳು, ಸಂಘಟನೆಗಳು ತುದಿಗಾಲಲ್ಲಿ ನಿಂತಿವೆ. ಇವರನ್ನೇ ನಂಬಿಕೊಂಡಿರುವ ಕುಟುಂಬ ಮಾತ್ರ ಕಣ್ಣೀರಿನಲ್ಲೇ ಕೈತೊಳೆಯುತ್ತಿದೆ! ಈ ಅಮಾಯಕರಿಗೆ ಪದವಿ ನೀಡಿ ಗೌರವಿಸುವ ನಾಯಕರು ಮತ್ತವರ ಮಕ್ಕಳು ಐಶಾರಾಮಿ ಕಟ್ಟಡಗಳಲ್ಲಿ ಹವಾನಿಯಂತ್ರಿತ ಕೊಠಡಿಯೊಳಗೆ ಗಹಗಹಿಸಿ ನಗುತ್ತಾ ಇನ್ನಷ್ಟು ಯುವಕರಿಗೆ ಪದವಿ ನೀಡುವ ಲೆಕ್ಕಾಚಾರದಲ್ಲಿದ್ದಾರೆ!

ನಮ್ಮ ಯುವಕರು ಪ್ರಬುದ್ಧರಾಗಬೇಕು. ಧರ್ಮದ ತಿರುಳನ್ನರಿಯದ ಧರ್ಮಾಂಧರ ಭಕ್ತರಾಗಿ ನೆತ್ತರಾಗುವ ಬದಲು ಮನುಷ್ಯರಾಗಿ ಬದುಕಲು ಕಲಿಯಬೇಕು. ಸ್ವಾರ್ಥಕ್ಕಾಗಿ ನಮ್ಮನ್ನು ಬಲಿಕೊಡಲು ಹವಣಿಸುವ ಕ್ಷುದ್ರಶಕ್ತಿಗಳ ಬಗ್ಗೆ ಅರಿತಿರಬೇಕು.
ಹುತಾತ್ಮಗಿರಿಗಾಗಿ ನಮ್ಮನ್ನು ಹುರಿದುಂಬಿಸುವವರು ರಕ್ತದ ಮಡುವಿನಲ್ಲಿ ಬಿದ್ದ ನಿನ್ನನ್ನು ಎತ್ತಿ ‘ಯಾ ಶಹೀದ್’ ಎಂದು ನಾಲ್ಕು ಬಾರಿ ಜೋರಾಗಿ ಹೇಳಿ ಮಣ್ಣು ಮಾಡಿ ಬಿಟ್ಟು ಅವರವರ ಹೆಂಡತಿ ಮಕ್ಕಳ ಜೊತೆ ಹಾಯಾಗಿ ಬದುಕುತ್ತಾರೆ. ನಿನ್ನ ಹೆಂಡತಿ ಮಕ್ಕಳು ಮಾತ್ರ ಜೀವನಪೂರ್ತಿ ವಿಧವೆ, ತಬ್ಬಲಿಯೆಂಬ ಪಟ್ಟಕಟ್ಟಿಕೊಂಡು ಕತ್ತಲಕೋಣೆಯಲ್ಲಿ ಕಣ್ಣೀರ ಕಡಲಲ್ಲಿ ಮುಳುಗಿ ಜೀವಂತ ಶವವಾಗಿ ರೋಧಿಸುತ್ತಿರುತ್ತಾರೆ.

ಸ್ವರ್ಗ ತೋರಿಸಿ ನರಕ ನೀಡುವ ಈ ಮೋಸದಾಟದಲ್ಲಿ ಸಿಲುಕದೆ ಮನುಷ್ಯರಾಗಿ ಬದುಕಲು ಕಲಿಯೋಣ, ಮತ್ತೊಬ್ಬನನ್ನು ಮನುಷ್ಯನಾಗಿ ಕಾಣಲು ಕಲಿಯೋಣ. ಧರ್ಮ ಜಾತಿಗಳ ಆಡ್ಡಗೋಡೆಗಳನ್ನು ಮೀರಿ ಸ್ನೇಹ ಸೌಹಾರ್ದತೆಯ ಸೇತುವೆಯನ್ನು ಕಟ್ಟೋಣ. ನಮ್ಮೂರಿನ ಗತಕಾಲದ ವೈಭವವನ್ನು ಮರಳಿ ಪಡೆಯೋಣ.

🗓️ 28-07-2022. 12:57pm. @ಕಾವಳಕಟ್ಟೆ

error: Content is protected !! Not allowed copy content from janadhvani.com