janadhvani

Kannada Online News Paper

ಈ ವರದಿಯ ಧ್ವನಿಯನ್ನು ಆಲಿಸಿ


✍️ ಎಂ ಹೆಚ್ ಹಸನ್ ಝುಹ್‌ರಿ

ಇಸ್ಲಾಮಿನಲ್ಲಿ ಜಾತಿ ವ್ಯವಸ್ಥೆ ಇದೆ ಎಂದು ನೀವು ಮಾಡಿದ ವಿಡಿಯೋ ತುಣುಕು ನೋಡಲು ಸಾಧ್ಯವಾಯಿತು.ಈ ವಿಡಿಯೋ ದಿಂದ ನೀವು ಯಾವ ಸಂದೇಶ ಹರಡಲು ನೋಡುತ್ತಿದ್ದೀರೆಂದು ಯಾರಿಗೂ ಬಿಡಿಸಿ ಹೇಳಬೇಕಾಗಿಲ್ಲ. ಆಪ್ರೀಕಾ ಖಂಡದ ನೀಗ್ರೋ ವಂಶದ ಗುಲಾಮ ಪರಂಪರೆಯ ಕರಿಕಪ್ಪಗಿನ ಬಿಲಾಲ್ ರಳಿಯಲ್ಲಾಹು ಅನ್ಹು ರವರು ಇಸ್ಲಾಮ್ ಸ್ವೀಕರಿಸಿದಾಗ ಉನ್ನತ ಕುಲದ ಬಿಳಿ ವರ್ಣದ ಸಲ್ಮಾನ್ ಫಾರಿಸ್ ರವರಿಗಿಂತ ಉನ್ನತ ಸ್ಥಾನ ಕೊಟ್ಟು ಇಸ್ಲಾಂ ಅವರನ್ನು ಗೌರವಿಸಿತು.

ಮುಅದ್ಸಿನ್ ಎಂಬ ಅತ್ಯುನ್ನತ ಪದವಿಯನ್ನು ಪಡೆಯಲು ಪ್ರತಿಷ್ಠಿತ ಮನೆತನದ ಶ್ರೀಮಂತ ಅರಬಿಗಳು ಬಯಸಿದಾಗ ಪೈಗಂಬರ್ ﷺ ರು ಆ ಉನ್ನತ ಪದವಿಯನ್ನು ಕರಿಕಪ್ಪಗಿನ ಗುಲಾಮ ಪರಂಪರೆಯಿಂದ ಬಂದ ಬಿಲಾಲ್ ರಳಿಯಲ್ಲಾಹು ಅನ್ಹು ರವರಿಗೆ ನೀಡಿ ಗೌರವಿಸಿದರು.

ಬಿಳಿಯರಾದ ಅಂದಿನ ಅರಬಿಗಳು ಅವರನ್ನು ತಮ್ಮ ನಾಯಕ ಎಂದು ಕರೆದರು. ಪೈಗಂಬರ್ ﷺ ರ ನಿಧನದ ಬಳಿಕ ಮದೀನಾ ತೊರೆದು ಹೋಗಿದ್ದ ಬಿಲಾಲ್ ರಳಿಯಲ್ಲಾಹು ಅನ್ಹು ರವರು ಉಮರ್ ರಳಿಯಲ್ಲಾಹು ಅನ್ಹು ರವರ ಆಡಳಿತ ಕಾಲದಲ್ಲಿ ಮದೀನಕ್ಕೆ ಬಂದಾಗ ಅಂದಿನ ಇಸ್ಲಾಮಿಕ್ ರಿಪಬ್ಲಿಕ್‌ನ ಅಧ್ಯಕ್ಷರಾಗಿದ್ದ ಉಮರ್ ರಳಿಯಲ್ಲಾಹು ಅನ್ಹು ರವರು ಎದ್ದು ನಿಂತು ಅಪ್ಪಿ ಹಿಡಿದು ಅವರನ್ನು ಗೌರವಿಸಿದ್ದರು.

ಬಿಲಾಲ್ ರವರು ನೀಗ್ರೋ ಜಾತಿಯವರೆಂದೋ, ಕರಿಕಪ್ಪಗಿನವರೆಂದೋ ಅವರನ್ನು ನೋಡಲಿಲ್ಲ. ಅವರನ್ನು ಗೌರವಿಸಿದರು. ಪೈಗಂಬರ್ ﷺ ರ ಮೊಮ್ಮಕ್ಕಳು ಓಡಿ ಬಂದು ಅವರೊಂದಿಗೆ ಬಾಂಗ್ ಕರೆ ನೀಡಲು ಬೇಡಿಕೊಂಡರು. ಇಡೀ ಅರಬ್ ಸಮೂಹ ಅವರೊಂದಿಗೆ ಬಾಂಗ್ ಕರೆ ನೀಡುವಂತೆ ಬೇಡಿ ಕೊಂಡಿತು.ಇದಾಗಿದೆ ಇಸ್ಲಾಮಿನ ಪರಂಪರೆ ಮತ್ತು ಇಸ್ಲಾಂ ಜಗತ್ತಿಗೆ ಬೋಧಿಸಿದ ಸುಂದರವಾದ ಸಂದೇಶ. ಇಸ್ಲಾಮಿನಲ್ಲಿ ಜಾತಿ ವ್ಯವಸ್ಥೆ ಯಾಗಲಿ, ವರ್ಣ,ವರ್ಗ ಬೇಧ ವಾಗಲಿ ಇಲ್ಲ.

ಇಸ್ಲಾಮಿನ ಬಗ್ಗೆ ಕಲಿಯದ ಹೆಸರಿಗೆ ಮಾತ್ರ ಮುಸ್ಲಿಮರಾಗಿರುವ ಯಾವುದಾದರೂ ಹಳ್ಳಿಗಳಲ್ಲಿ ಇಂತಹ ವ್ಯವಸ್ಥೆ ಇದೆಯೋ,ಇಲ್ಲವೋ ಗೊತ್ತಿಲ್ಲ. ಹಾಗೆ ಇದ್ದರೆ ಅವರಿಗೆ ಇಸ್ಲಾಮಿನ ನೈಜವಾಗಿ ಸಂದೇಶ ತಲುಪಿಸಿ ಕೊಡಬೇಕು. ಅದು ಇಲ್ಲಿಯ ಉಲಮಾಗಳ ಕರ್ತವ್ಯ ಕೂಡ.

ಇಸ್ಲಾಮಿನಲ್ಲಿ ಗೌರವಿಸಲ್ಪಡುವ ವ್ಯಕ್ತಿಗಳು ಮತ್ತು ಉನ್ನತರು ಪೈಗಂಬರ್ ﷺ ರ ಕುಟುಂಬಸ್ಥರು. ಮತ್ತು ಇಸ್ಲಾಮನ್ನು ಕಲಿತ ಧರ್ಮ ವಿದ್ವಾಂಸರು ಅಂದರೆ ಉಲಮಾಗಳು. ಇವರು ಯಾವ ಊರಿನಲ್ಲಿದ್ದರೂ ಆ ಊರಿನಲ್ಲಿ ನಡೆಯುವ ಔತಣ ಕೂಟ,ಮದುವೆ ಸಮಾರಂಭ, ಇನ್ನಿತರ ಸಭೆ ಸಮಾರಂಭಗಳಿಗೆ ಇವರ ಸಾನಿಧ್ಯ ಅಗತ್ಯ. ಇವರನ್ನು ಕರೆದೇ ಸಮಾರಂಭಗಳು ನಡೆಸುವುದು ಸಂಪ್ರದಾಯವಾಗಿದೆ.ಸಮಾರಂಭಗಳಿಗೆ‌ ಕರೆದಾಗ ಯಾವ ವಿದ್ವಾಂಸರಾದರೂ ಅವರು ಕೆಳ ಜಾತಿಯವರು,ಅಸ್ಪರ್ಶರು ಎಂದು ಹೋಗಲು ನಿರಾಕರಿಸಿದ ಒಂದೇ ಒಂದು ಘಟನೆ ತೋರಿಸಲು ಸಾಧ್ಯವಿಲ್ಲ.ಆಹ್ವಾನ ನೀಡಿದ ಸಭೆ,ಸಮಾರಂಭಗಳಲ್ಲಿ ಕೆಳ ಜಾತಿಯವರೆಂದು ಆಹಾರ ಸೇವಿಸದೆ ಬಿಟ್ಟು ಬಂದ ಘಟನೆ ಇದೆಯೇ ? ಮಸೀದಿಗೆ ನಮಾಝ್‌ಗೆ ಬಂದವನನ್ನು “ನೀನು ಕೆಳ ಜಾತಿಯವನು” ಎಂದು ತಡೆದ ಇತಿಹಾಸ ಇದೆಯೇ ? ಮಸೀದಿಗೆ ತಡೆಯುವ,ಸಹ ಭೋಜನ ನಿರಾಕರಿಸುವ, ಸ್ಪರ್ಶವನ್ನು ಇಷ್ಟ ಪಡದ ರೀತಿಯಲ್ಲಿ ಇರುವ ಆಚರಣೆ ಮುಸ್ಲಿಮರ ನಡುವಿನಲ್ಲಿ ಇಲ್ಲ. ಅಂತಹ ಆಚರಣೆ ಮುಸ್ಲಿಮರ ನಡುವೆ ನೀವು ನೋಡಿದ್ದರೆ ಅವರು ಇಸ್ಲಾಮಿನ ಬಗ್ಗೆ ಕಲಿಯದವರಾಗಿರಬಹುದು. ದಲಿತ ಮುಸ್ಲಿಂ, ಬ್ರಾಹ್ಮಣ ಮುಸ್ಲಿಂ ಎಂಬ ವಿಭಜನೆ ಇಸ್ಲಾಮಿನದ್ದಲ್ಲ. ಯಾವುದೇ ಜಾತಿಯವನಿರಲಿ; ಆತ ಇಸ್ಲಾಂ ಸ್ವೀಕರಿಸಿದರೆ ಬಳಿಕ ಆತನ ಜಾತಿ ಒಂದೇ ಇಸ್ಲಾಂ ಮಾತ್ರ. ಅಲ್ಲಾಹನ ಬಳಿ ಉತ್ತಮರು,ಉನ್ನತ ಸ್ಥಾನ ಪಡೆದವರು ಭಯಭಕ್ತಿ ಉಳ್ಳವರು ಮಾತ್ರ.

ಮುಸ್ಲಿಮರು ಅತ್ಯಂತ ಶ್ರೇಷ್ಠವಾಗಿ ಕಾಣುವ,ಮಸೀದಿಗಳ ಪೈಕಿ ಅತ್ಯುನ್ನತ ಸ್ಥಾನವಿರುವ ಮಕ್ಕಾದ ಮಸೀದಿ ‌ಕ‌ಅ್‌ಬಾ ಶರೀಫ್ ಬಳಿ ವಿವಿಧ ದೇಶಗಳ, ವಿವಿಧ ಬಣ್ಣಗಳ ಜನರು ಒಂದೇ ತಾಯಿಯ ಮಕ್ಕಳಂತೆ ಒಟ್ಟುಗೂಡಿ ಅಲ್ಲಾಹನಿಗೆ ಆರಾಧನೆ ನಿರ್ವಹಿಸುವ,ನಮಾಝ್ ಮಾಡುವ,ಹಜ್ ನಿರ್ವಹಿಸುವ ರಮಣೀಯವಾದ ಅತ್ಯಂತ ಸುಂದರವಾದ ದೃಶ್ಯವೇ ಮುಸ್ಲಿಮರ ನಡುವೆ ಜಾತಿ,ವರ್ಗ,ವರ್ಣಗಳ ವ್ಯವಸ್ಥೆ ಇಲ್ಲ ಎನ್ನುದಕ್ಕೆ ಸಾಕ್ಷಿಯಾಗಿದೆ.

error: Content is protected !! Not allowed copy content from janadhvani.com