ಬೆಂಗಳೂರು, ಮಾ.17: ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗೆ ನಿರ್ಬಂಧ ವಿಧಿಸಿರುವ ರಾಜ್ಯ ಸರ್ಕಾರದ ಆದೇಶಕ್ಕೆ ಪೂರಕವಾಗಿ ರಾಜ್ಯ ಹೈಕೋರ್ಟ್ ಪ್ರಕಟಿಸರುವ, ಇಸ್ಲಾಮ್ ಧರ್ಮದ ಸಿದ್ದಾಂತಗಳಿಗೆ ವಿರುದ್ಧವಾದ ತೀರ್ಪಿನಲ್ಲಿ ಅಸಮಾಧಾನ ವ್ಯಕತಪಡಿಸುವಂತೆ ಮುಸ್ಲಿಂ ಸಂಘಟನೆಗಳು ಕರೆ ನೀಡಿದ್ದ ಸ್ವಯಂಪ್ರೇರಿತ ಕರ್ನಾಟಕ ಬಂದ್ ಗೆ ರಾಜ್ಯದಲ್ಲಿ ಬಹಳ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ಮುಸ್ಲಿಂ ಸಂಘಟನೆಗಳು,ರಾಜ್ಯಾದ್ಯಂತ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡುವ ಮೂಲಕ, ಹಿಜಾಬ್ ಎಂಬ ಧಾರ್ಮಿಕ ಉಡುಗೆಗೆ ತಮ್ಮ ಬೆಂಬಲವನ್ನು ಸೂಚಿಸಿ, ಹಿಜಾಬ್ ಕುರಿತ ಹೈಕೋರ್ಟ್ ತೀರ್ಪನ್ನು ಮರುಪರಿಶೀಲಿಸಬೇಕೆನ್ನುವ ಸಂದೇಶವನ್ನು ರವಾನಿಸಿದ್ದಾರೆ.
ಶಾಂತಿಯುತವಾಗಿ ಬಂದ್ ಆಚರಣೆ ಮಾಡುವಂತೆ ಮುಸ್ಲಿಂ ಸಂಘಟನೆಗಳು ಕರೆ ನೀಡಿದ್ದು, ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ನಗರದಲ್ಲಿ ಖಾಕಿ ಕಟ್ಟೆಚ್ಚರ ವಹಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಾದ ಜೆ ಜೆ ನಗರ, ಬ್ಯಾಟರಾಯನಪುರ, ಶಿವಾಜಿನಗರ, ಕೆ ಜಿ ಹಳ್ಳಿ, ನಾಗವಾರ, ಟ್ಯಾನಿ ರಸ್ತೆ, ಜೆಸಿ ನಗರ ಸೇರಿ ಪ್ರಮುಖ ಏರಿಯಾಗಳಲ್ಲಿ ಬಂದೋಬಸ್ತ್ ಮಾಡಲಾಗಿದೆ. ಈಗಾಗಲೇ ನಗರದಲ್ಲಿ ಒಂದು ವಾರ 144 ಸೆಕ್ಷನ್ ಹೇರಿರುವ ಪೊಲೀಸ್ ಕಮೀಷನರ್ ಕಮಲ್ ಪಂತ್, 144 ಸೆಕ್ಷನ್ ಇರುವುದರಿಂದ ಮೆರವಣಿಗೆ, ಪ್ರತಿಭಟನೆ, ಜಾಥಾಗಳಿಗೆ ನಿಷೇಧವಿದೆ.ಪ್ರಮುಖ ಕಡೆಗಳಲ್ಲಿ ರೂಟ್ ಮಾರ್ಚ್ ಮಾಡಲು ಸೂಚನೆ ನೀಡಲಾಗಿದೆ. ನಗರದಲ್ಲಿ 25 ಕೆಎಸ್ ಆರ್ ಪಿ, 35 ಸಿಎಆರ್ ತುಕಡಿಗಳ ನಿಯೋಜನೆ ಮಾಡಲಾಗಿದೆ. ಅಯಾ ಠಾಣಾ ವ್ಯಾಪ್ತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಬೆಂಗಳೂರು: ಶಿವಾಜಿನಗರದಲ್ಲಿ ಬೆಳಗಿನ ಜಾವ ಜನರಿಂದ ಕಿಕ್ಕಿರಿದು ತುಂಬಿರುತ್ತಿದ್ದ ಮಾರ್ಕೆಟ್ ಇಂದು ಬಂದ್ ಆಗಿವೆ. ಹಲವು ಅಂಗಡಿ ಮುಗ್ಗಟ್ಟುಗಳು ತೆರೆದಿಲ್ಲ. ತರಕಾರಿ ಹೂ ಹಣ್ಣು , ಮಟನ್ ಅಂಗಡಿ ಬಂದ್ ಆಗಿವೆ. ಕೆಲ ಟೀ ಅಂಗಡಿ ಹೊರತು ಪಡಿಸಿ ಬಹತೇಕ ಅಂಗಡಿ ಬಂದ್ ಆಗಿವೆ. ಕೆ ಜಿ ಹಳ್ಳಿ ಡಿಜೆಹಳ್ಳಿ , ಪಾದಾರಾಯನಪುರ ಸೇರಿ ಹಲವೆಡೆ ನಗರದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿದೆ. ನಿತ್ಯ ಅತ್ಯಗತ್ಯ ವಸ್ತುಗಳ ಮಾರಾಟವನ್ನು ಮಾತ್ರ ಮಾಡಲಾಗುತ್ತಿದೆ. ಉಳಿದಂತೆ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಇದುವರೆಗೆ ನಗರದಲ್ಲಿ ಶಾಂತಿಯುತವಾಗಿ ಬಂದ್ ನಡೆಯುತ್ತಿದೆ. ಕೇವಲ ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿದೆ. ಟೌನ್ ಹಾಲ್ ವೃತ್ತದಲ್ಲಿ ಮೂವರಿಂದ ಮೌನ ಪ್ರತಿಭಟನೆ ಮಾಡಲಾಗುತ್ತಿದೆ. ಓರ್ವ ವ್ಯಕ್ತಿ ಸೇರಿದಂತೆ ಯುವತಿ, ಯುವಕನಿಂದ ಮೌನ ಪ್ರತಿಭಟನೆ. “ಇಂಡಿಯಾ ಇಸ್ ಸೆಕ್ಯೂಲರ್ ಕಂಟ್ರಿ. ಹಿಜಾಬ್ ಈಸ್ ಅವರ್ ರೈಟ್ಸ್. ವಿ ವಾಂಟ್ ಜಸ್ಟಿಸ್. ಪ್ಲೀಸ್ ಡೋಂಟ್ ಟಾರ್ಗೆಟ್. ಒನ್ ರಿಲಿಜಿಯನ್ ಇಸ್ಲಾಂ. ಸ್ಟಾಪ್ ದಿಸ್ ಡರ್ಟಿ ಪಾಲಿಟಿಕ್ಸ್. ಭಾರತ್ ಮಾತಾಕಿ ಜೈ. ವಿ ವಾಂಟ್ ಪೀಸ್” ಅಂತಾ ಸ್ಲೋಗನ್ ಹಿಡಿದು ಮೌನ ಪ್ರತಿಭಟನೆ ಮಾಡಲಾಗುತ್ತಿದೆ. ಯಾವುದೆ ಪ್ರತಿಭಟನೆ, ರ್ಯಾಲಿಗೆ ಗೆ ಅವಕಾಶ ಇಲ್ಲಾ. ನಗರದಾದ್ಯಂತ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ.
ಕೋಲಾರ :ಕೋಲಾರದಲ್ಲಿ ಮುಸ್ಲಿಂ ಸಂಘಟನೆಗಳಿಂದ ಬಂದ್ ಆಚರಣೆ ಮಾಡಲಾಗುತ್ತಿದ್ದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ಗೆ ಬೆಂಬಲ ಸೂಚಸಲಾಗಿದೆ. ನಗರದ ಕ್ಲಾಕ್ ಟವರ್, ರಹಮತ್ ನಗರ್, ಶಹಿನ್ ಶಾ ನಗರ ಸೇರಿದಂತೆ ಮುಸ್ಲಿಂ ಬಡಾವಣೆಗಳಲ್ಲಿ ಬಂದ್ ಆಚರಣೆ ಮಾಡಲಾಗುತ್ತಿದೆ. ಹಾಲು ಔಷದ ಹೊರತು ಪಡಿಸಿ ಯಾವುದೇ ರೀತಿ ವಹಿವಾಟು ಇಲ್ಲ. ಬಂದ್ ಹಿನ್ನೆಲೆ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮತ್ತು ನಿಷೇದಾಜ್ಞೆ ಜಾರಿಯಲ್ಲಿರುವ ಹಿನ್ನೆಲೆ ಯಾವುದೇ ಮೆರವಣಿಗೆ, ಪ್ರತಿಭಟನೆಗೆ ಅವಕಾಶ ನೀಡಿಲ್ಲ.
ತುಮಕೂರು: ತುಮಕೂರಿನಲ್ಲಿ ಅಂಗಡಿ ಮುಂಗಟ್ಟುಗಳು ಮುಸ್ಲಿಂ ವ್ಯಾಪಾರಸ್ಥರು ಬಂದ್ ಮಾಡಿದ್ದಾರೆ. ಮುಸ್ಲಿಂ ಸಮುದಾಯದ ಅಂಗಡಿಗಳು ಸಂಪೂರ್ಣ ಬಂದ್ ಮಾಡಲಾಗಿದೆ. ಕಾಲ್ ಟ್ಯಾಕ್ಸ್ ಸರ್ಕಲ್, ಬಿ.ಜಿ.ಪಾಳ್ಯ ಸರ್ಕಲ್, ಗುಬ್ಬಿ ಗೇಟ್, ಕುಣಿಗಲ್ ರಿಂಗ್ ರಸ್ತೆಗಳಲ್ಲಿನ, ಪ್ರಮುಖಯ ಗ್ಯಾರೇಜ್, ಆಟೋ ಮೊಬೈಲ್ಸ್ ಅಂಗಡಿಗಳು ಬಂದ್ ಮಾಡಲಾಗಿದ್ದು, ನಮಗೆ ಕಾನೂನಿಂದ ಹಿಜಾಬ್ ವಿಷಯದಲ್ಲಿ ನ್ಯಾಯ ಸಿಕ್ಕಿಲ್ಲ ಎಂದು ಮುಸಲ್ಮಾನ್ ಮುಖಂಡರು ಹೇಳಿದ್ದಾರೆ.
ಚಿತ್ರದುರ್ಗ: ಚಿತ್ರದುರ್ಗದಲ್ಲಿ ಮುಸ್ಲಿಂ ವ್ಯಾಪಾರಿಗಳಿಂದ ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿದೆ. ಹಿಜಾಬ್ ಬೆಂಬಲಿಸಿ ಬಂದ್ ಕರೆಗೆ ಚಿತ್ರದುರ್ಗದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಗಡಿ ಬಂದ್ ಮಾಡಿ ಪೋಸ್ಟರ್ ಹಾಕಿರುವ ಕೆಲ ಮುಸ್ಲಿಂ ವ್ಯಾಪಾರಿಗಳು. ಕೆಲವೆಡೆ ಎಂದಿನಂತೆ ಅಂಗಡಿ ತೆರೆದಿರುವ ಮುಸ್ಲಿಂ ವ್ಯಾಪಾರ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ನಿಷೇದಾಜ್ಞೆ ಜಾರಿ ಹಿನ್ನೆಲೆ, ಪ್ರತಿಭಟನೆಗೆ ಅವಕಾಶವಿಲ್ಲ.
ಮಂಡ್ಯ: ಮಂಡ್ಯದ ಗುತ್ತಲು ರಸ್ತೆ ಸೇರಿದಂತೆ,ನಗರದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿದೆ. ಮುಸ್ಲಿಂ ಸಮಯದವರಿಂದ ಬಂದ್ಗೆ ಬೆಂಬಲ ನೀಡಲಾಗಿದೆ. ಮುಸ್ಲಿಂ ಸಮುದಾಯದ ಅಂಗಡಿಗಳನ್ನ ಮುಚ್ಚಿ ಪ್ರತಿಭಟನೆ ಮಾಡಲಾಗುತ್ತಿದೆ, ಸ್ವಯಂ ಪ್ರೇರಿತವಾಗಿ ಕುಡಚಿ ಪಟ್ಟಣದ ಅಂಗಡಿ ಮುಗ್ಗಟು ಬಂದ್ ಮಾಡಿ ಬಂದ್ಗೆ ಬೆಂಬಲ ನೀಡಿದ್ದಾರೆ.
ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣ ಬಂದ್. ಮಧ್ಯಾಹ್ನವರೆಗೆ ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ವ್ಯಾಪಾರಿಗಳು ಬಂದ್ ಮಾಡಿದ್ದಾರೆ.
ಶಿವಮೊಗ್ಗ: ಶಿವಮೊಗ್ಗದ ಮುಸ್ಲಿಂ ವರ್ತಕರು ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಬೆಂಬಲ ಸೂಚಿಸಿದ್ದು, ಬಸ್, ಆಟೋ ರಿಕ್ಷಾ, ಟ್ಯಾಕ್ಸಿಗಳು ಸಂಚಾರ ನಿಲ್ಲಿಸಿ ಬಂದ್’ಗೆ ಬೆಂಬಲ ಸೂಚಿಸಿವೆ.
ದಕ್ಷಿಣ ಕನ್ನಡ : ಪ್ರಮುಖ ವ್ಯಾಪಾರ ಕೇಂದ್ರವಾದ ಮಂಗಳೂರು ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮುಸ್ಲಿಂ ವರ್ತಕರು ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಬೆಂಬಲ ಸೂಚಿಸಿದ್ದು, ಬಸ್, ಆಟೋ ರಿಕ್ಷಾ, ಟ್ಯಾಕ್ಸಿಗಳು ಸಂಚಾರ ನಿಲ್ಲಿಸಿ ಬಂದ್’ಗೆ ಬೆಂಬಲ ಸೂಚಿಸಿವೆ. ಮುಸ್ಲಿಂ ಬಾಹುಳ್ಯ ಪ್ರದೇಶಗಳಾದ ಬೆಳ್ತಂಗಡಿ, ಉಳ್ಳಾಲ,ದೇರಳಕಟ್ಟೆ,ಫರಂಗಿಪೇಟೆ,ಉಪ್ಪಿನಂಗಡಿ ಇಂದು ಜನ ಸಂಚಾರವಿಲ್ಲದೆ ಖಾಲಿಯಾಗಿವೆ.
ಪುತ್ತೂರು ಉಪ್ಪಿನಂಗಡಿಯಲ್ಲಿ ಉತ್ತಮ ಸ್ಪಂದನ ವ್ಯಕ್ತವಾಗಿದೆ.ಮುಸ್ಲಿಂ ವರ್ತಕರು ಹಾಗೂ ವಾಹನ ಚಾಲಕರು ಬಂದ್ ಗೆ ಬೆಂಬಲ ವ್ಯಕ್ತಪಡಿಸಿ ಇಂದು ಪುತ್ತೂರಿನಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದಾರೆ. ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲೂ ಎಲ್ಲಾ ಮುಸ್ಲಿಮರ ಅಂಗಡಿಗಳು ಮುಚ್ಚಲ್ಪಟ್ಟಿವೆ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಸೇರಿದಂತೆ ಹಲವು ಸಂಘಟನೆಗಳು ಬಂದ್ ಗೆ ಬೆಂಬಲ ನೀಡುವುದಾಗಿ ಘೋಷಿಸಿತ್ತು.
ಬೆಳ್ತಂಗಡಿ: ಬಂದ್ ಗೆ ಬೆಳ್ತಂಗಡಿಯ ಹಲವು ಭಾಗಗಳಲ್ಲಿ ಬೆಂಬಲ ವ್ಯಕ್ತವಾಗಿದೆ.
ಉಜಿರೆ, ಕಕ್ಕಿಂಜೆ, ನಾವೂರು, ಕಜೂರು, ಗುರುವಾಯನಕೆರೆ, ಮಡಾಂತ್ಯಾರ್,ಶಿರ್ಲಾಲ್, ಅಳದಂಗಡಿ,ಪಿಲ್ಯ,ಸುನ್ನತ್ ಕೆರೆ, ಗೇರು ಕಟ್ಟೆ ಲಾಯಿಲ ಕೊಕ್ಕಡ ಮುಂಡಾಜೆ, ಚಾರ್ಮಾಡಿ, ಬಂಗಾಡಿ ಸೇರಿದಂತೆ ವಿವಿಧ ಕಡೆ ಮುಸ್ಲಿಂ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಬೆಂಬಲ ಸೂಚಿಸಿದ್ದಾರೆ.
ಉಡುಪಿ: ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಮುಸ್ಲಿಮರು ತಮ್ಮ ವ್ಯಾಪಾರ ವಹಿವಾಟುಗಳ ಮುಚ್ಚಿ ಸಮುದಾಯದ ಸಂಘಟನೆಗಳು ತೆಗೆದುಕೊಂಡ ನಿರ್ಣಯವನ್ನು ಬೆಂಬಲಿಸಬೇಕಾಗಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ವಿನಂತಿಸಿತ್ತು.
ಅದರಂತೆ ಜಿಲ್ಲೆಯ ಉಡುಪಿ ನಗರ, ಕಾರ್ಕಳ, ಕುಂದಾಪುರ, ಬೈಂದೂರು, ಕಾಪು, ಪಡುಬಿದ್ರೆ, ಶಿರ್ವಗಳಲ್ಲಿ ಮುಸ್ಲಿಮರು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಬಂದ್ಗೆ ಬೆಂಬಲ ನೀಡಿದರು. ಉಡುಪಿ ನಗರದಲ್ಲಿ ಜಾಮಿಯ ಮಸೀದಿ, ಅಂಜುಮನ್ ಮಸೀದಿ ರಸ್ತೆಯಲ್ಲಿ ಸಂಪೂರ್ಣ ಬಂದ್ ಕಂಡುಬಂದಿದೆ. ಅದೇ ರೀತಿ ತರಕಾರಿ ಮಾರುಕಟ್ಟೆಯಲ್ಲಿಯೂ ಬಹುತೇಕ ಅಂಗಡಿಗಳು ಬಂದ್ ಆಗಿವೆ. ಅಲ್ಲದೆ ಮುಸ್ಲಿಮರ ಹೊಟೇಲ್, ಹೂವು ಅಂಗಡಿ, ಚಪ್ಪಲಿ, ಬಟ್ಟೆ ಸೇರಿದಂತೆ ಹೆಚ್ಚಿನ ಅಂಗಡಿಗಳು ಮುಚ್ಚಿವೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಜಿಲ್ಲಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕೊಡಗು: ಜಿಲ್ಲೆಯ ಮುಸ್ಲಿಂ ವರ್ತಕರು ಗುರುವಾರ ತಮ್ಮ ಅಂಗಡಿಗಳನ್ನು ಬಂದ್ ಮಾಡಿದ್ದಾರೆ. ಮಡಿಕೇರಿಯ ಚೌಕಿ, ರೇಸ್ ಕೋರ್ಸ್ ರಸ್ತೆ, ಕಾಲೇಜು ರಸ್ತೆ, ತಿಮ್ಮಯ್ಯ ವೃತ್ತದಲ್ಲಿನ ಮೊಬೈಲ್ ಅಂಗಡಿ, ತರಕಾರಿ ಮಾರಾಟ ಅಂಗಡಿ, ಬಟ್ಟೆ, ದಿನಸಿ, ಸ್ಪೈಸಸ್ ಮಳಿಗೆ, ಹೋಟೆಲ್‌ಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿದೆ. ಕುಶಾಲನಗರ, ವಿರಾಜಪೇಟೆ, ಗೋಣಿಕೊಪ್ಪಲು, ಸೋಮವಾರಪೇಟೆಯಲ್ಲೂ ಶಾಂತಿಯುತ ಬಂದ್ ನಡೆಯುತ್ತಿದೆ.