janadhvani

Kannada Online News Paper

‘ಕೈ’ ಪಾಲಯಕ್ಕೆ ಸಿಎಂ ಇಬ್ರಾಹಿಂ ಗುಡ್ ಬೈ – ಜೆಡಿಎಸ್ ಸೇರುವುದು ಖಚಿತ.?

70 ವರ್ಷದಿಂದ ಕಾಂಗ್ರೆಸ್ ನಲ್ಲಿ ಯಾರಾದರೂ ಸಾಬ್ರು ಅಧ್ಯಕ್ಷರಾಗಿದ್ದಾರಾ? ಯಾವುದಾದರೂ ಒಳ್ಳೆ ಖಾತೆಯನ್ನು ಸಾಬ್ರಿಗೆ ಕೊಟ್ಟಿದ್ದಾರಾ? - ಸಿಎಂ ಪ್ರಶ್ನೆ

ಬೆಂಗಳೂರು,ಮಾ.12: ಕಾಂಗ್ರೆಸ್ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯರಾಗಿದ್ದ ಸಿ.ಎಂ ಇಬ್ರಾಹಿಂ ಕೊನೆಗೂ ಕಾಂಗ್ರೆಸ್ ಪಕ್ಷ ತೊರೆದಿರುವುದಾಗಿ ಘೋಷಿಸಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಸಿ.ಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ.

ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ, ಸೋನಿಯಾ ಗಾಂಧಿಗೆ ಪತ್ರ ಕಳುಹಿಸಿದ್ದೇನೆ ಅಂತ ಸಿಎಂ ಇಬ್ರಾಹಿಂ ಹೇಳಿದ್ದಾರೆ. ಇನ್ನು ಇನ್ಮುಂದೆ ನಾನು ಫ್ರೀ ಮ್ಯಾನ್ ಅಂತ ಹೇಳಿದ್ದಾರೆ. ಇದೇ ವೇಳೆ ಜೆಡಿಎಸ್ ಸೇರುವ ಬಗ್ಗೆ ಸುಳಿವು ಸಹ ಕೊಟ್ಟಿದ್ದಾರೆ.

ಪಂಚರಾಜ್ಯ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿರುವ ಕಾಂಗ್ರೆಸ್ ಬಗ್ಗೆ ಮಾತನಾಡಿದ ಇಬ್ರಾಹಿಂ ಅವರು, ಕಾಂಗ್ರೆಸ್ ಪಕ್ಷ ದೇಶದೆಲ್ಲೆಡೆ ತನ್ನ ನೆಲೆ ಕಳೆದುಕೊಳ್ತಿದೆ. ಪಂಚ ರಾಜ್ಯಗಳಲ್ಲಿ ಕಾಂಗ್ರಸ್ ನೆಲಕಚ್ಚಿದೆ ಆದರೆ, ಯುಪಿ ರೀತಿ ಆಗೋದಕ್ಕೆ ಇಲ್ಲಿ ನಾವು ಬಿಡೋದಿಲ್ಲ ಎಂದ್ರು. ಎಂಎಲ್ಸಿ ಸ್ಥಾನಕ್ಕೂ ನಾನು ರಾಜೀನಾಮೆ ಕೊಟ್ಟಿದ್ದೇನೆ. ನಾನು ಇವತ್ತಿಂದ ಫ್ರೀ ಮ್ಯಾನ್, ಇನ್ಮುಂದೆ ಯಾವುದೇ ರೀತಿಯ ತೀರ್ಮಾನ ತಗೊಳ್ಳೋದಕ್ಕೆ ನನಗೆ ಸ್ವತಂತ್ರ ಇದೆ ಅಂತ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಸ್ವಾಭಿಮಾನ ಉಳಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ, ಹೀಗಾಗಿ ನಾನು ರಾಜೀನಾಮೆ ನೀಡುವ ತೀರ್ಮಾನ ತಗೊಂಡಿದ್ದೇನೆ. ಅನೇಕ ಜನರು ನನ್ನ ಜೊತೆ ಕಾಂಗ್ರೆಸ್ ಬಿಟ್ಟು ಬರ್ತಾ ಇದ್ದಾರೆ. 20 ರಿಂದ ಎಲ್ಲಾ ಕಡೇ ರಾಜೀನಾಮೆ ಪರ್ವ ಶುರುವಾಗಲಿದೆ. ನಾನು ಮುಂಚೆಯೇ ಹೇಳಿದ್ದೆ ಕಾಂಗ್ರೆಸ್ ಮುಳುಗಿದ ಹಡಗು ಅಂತಾ ಪಂಜಾಬ್ ತರ ಕರ್ನಾಟಕದಲ್ಲೂ ಆಗುತ್ತದೆ.

ಸಿದ್ದರಾಮಯ್ಯ ಸಾಫ್ಟ್ ಕಾರ್ನರ್ ಇದ್ದಿದ್ದಕ್ಕೆ ಯಡಿಯೂರಪ್ಪ ಸರ್ಕಾರ ಬಂದಿರೋದು. ಪಂಜಾಬ್ ಕಾಂಗ್ರೆಸ್ ಒಳ ಜಗಳದಿಂದ ಕಾಂಗ್ರೆಸ್ ಪಕ್ಷ ಸೋತಿದೆ, ರಾಜ್ಯ ಕಾಂಗ್ರೆಸ್ ನಾಯಕರ ಒಳ‌ಜಗಳದಿಂದ ಕಾಂಗ್ರೆಸ್ ಸೋಲಿನ ಬಗ್ಗೆ ನಾನು ಮಾತಾಡಲ್ಲ ಅವ್ರು ದೊಡ್ಡವರು ಅವರಿಗೆ ಒಳ್ಳೆದಾಗಲಿ ಅಂದಷ್ಟೆ ಹಾರೈಸುತ್ತೇನೆ ಅಂತ ಸಿ.ಎಂ ಇಬ್ರಾಹಿಂ ಹೇಳಿದ್ದಾರೆ.

ಕಾಂಗ್ರೆಸ್ಗೆ ರಾಜೀನಾಮೆ ಕೊಟ್ಟ ಬಳಿಕ ಇಬ್ರಾಹಿಂ ಯಾವ ಪಕ್ಷ ಸೇರ್ತಾರೆ ಅನ್ನುವ ಪ್ರಶ್ನೆಗೆ ಅವರೇ ಉತ್ತರ ಕೊಟ್ಟಿದ್ದಾರೆ. ರಾಷ್ಟ್ರೀಯ ನಾಯಕ ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಜೊತೆ ಚರ್ಚೆ ಮಾಡಿ ಮುಂದಿನ ನಡೆ ಪ್ರಕಟ ಮಾಡುತ್ತೇನೆ ಎಂದ್ರು. ಜೆಡಿಎಸ್ಗೆ ಸೇರ್ಪಡೆಯಾಗುವುದೇ ನನ್ನ ಆಸೆ. ಅಲ್ಲಿಂದಲೇ ನನ್ನ ಹೋರಾಟ ಶುರು ಮಾಡುವುದಾಗಿ ಸಿ.ಎಂ ಇಬ್ರಾಹಿಂ ಹೇಳಿದ್ದಾರೆ.

70 ವರ್ಷದಿಂದ ಕಾಂಗ್ರೆಸ್ ನಲ್ಲಿ ಯಾರಾದರೂ ಸಾಬ್ರು ಅಧ್ಯಕ್ಷರಾಗಿದ್ದಾರಾ? ಯಾವುದಾದರೂ ಒಳ್ಳೆ ಖಾತೆಯನ್ನು ಸಾಬ್ರಿಗೆ ಕೊಟ್ಟಿದ್ದಾರಾ. ಹಿಜಾಬ್ ಅಂತಾ ಇವ್ರು ಶುರು ಮಾಡಿದ್ರು, ಸೆರಗು ಹಾಕಲಿ ಅಂತಾ ಯಾಕೆ ಹೇಳಿಲ್ಲ ಇವ್ರು. ಪಕ್ಷದ ಅಧ್ಯಕ್ಷರು ಯಾರು ಮಾತಾಡಬಾರದು ಅಂತ ಗದರಿದ್ರೆ, ನಾನು ಏನು ಮಾಡಬೇಕು. ಸ್ಥಾನ ಕೊಡದೆ ಇದ್ರು ಪರವಾಗಿಲ್ಲ, ಗೌರವ ಕೊಡದೆ ಇದ್ರೆ ಹೇಗೆ..? ಅಲ್ಪಸಂಖ್ಯಾತರ ಕಡೆಗಣಿಸಿದರ ಬಗ್ಗೆ 12 ಪತ್ರ ಕಳುಹಿಸಿದ್ದೇನೆ.

ಸಿದ್ದರಾಮಯ್ಯ ಸುಳ್ಳು ಹೇಳಲ್ಲ ಸರಿ, ಆದರೆ ಅವ್ರು ಎದೆ ಮುಟ್ಡಿಕೊಂಡು ಸತ್ಯ ಹೇಳಲಿ. ಸಿದ್ದರಾಮಯ್ಯ ಎಸಿ ರೂಮ್ ನಲ್ಲಿ ಇದ್ದಾರಾ..? ಅಥವಾ 50 ಪರ್ಸೆಂಟ್ ಡಿಗ್ರಿ ಸೆಲ್ಸಿಯಸ್ ನಲ್ಲಿ ಕೂತಿದ್ದಾರಾ ಹೇಳಲಿ. ಹಾಗಿದ್ರೆ ಅವರನ್ನು ವಿರೋಧ ಪಕ್ಷ ಸ್ಥಾನದಿಂದ ತಗೀತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಇಬ್ರಾಹಿಂ, ನೋಡಿ, ಬಿಲ್ಡಿಂಗ್ ಕಂಬ ತೆಗೆದ್ರೆ ಬಿಲ್ಡಿಂಗ್ ಬೀಳುತ್ತೆ. ಅದಕ್ಕಾಗಿ ನೋಡಿಕೊಂಡು ತಗೀತ್ತಾರೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರು ಸಿದ್ದರಾಮಯ್ಯ ಅಂತೂ ಮತ್ತೆ ಸಿಎಂ ಆಗೋದಿಲ್ಲ ಅಂತ ಹೇಳಿದ್ರು.

ನಾನು ಸೈದ್ದಾಂತಿಕವಾಗಿ ಹೋರಾಟ ಮಾಡಿ ಬಂದವನು ಹಾಗಾಗಿ ಜೆಡಿಎಸ್ ಕಡೆ ಹೋಗ್ತಿದ್ದೇನೆ. ನನ್ನ ಕಂಡೀಷನ್ ಏನು ಅಂತ ಸಾರ್ವಜನಿಕವಾಗಿ ಚರ್ಚೆ ಮಾಡಲ್ಲ. ದೇವೇಗೌಡರ ವ್ಯಕ್ತಿತ್ವಕ್ಕೆ ನಾನು ಬೆಲೆ ಕೊಡ್ತೀನಿ. ಕಾಂಗ್ರೆಸ್‌ನಿಂದ, ಬಿಜೆಪಿ ಇಂದ ಎಲ್ಲಾ ಕಡೆಯಿಂದಲೂ ರಾಜೀನಾಮೆ ಪರ್ವ ಶುರುವಾಗಲಿದೆ ಅಂತ ಇಬ್ರಾಹಿಂ ಹೇಳಿದ್ದಾರೆ.

error: Content is protected !! Not allowed copy content from janadhvani.com