ಬೆಂಗಳೂರು: ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಂಬಂಧಿಸಿದ ಸಚಿವರು, ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಇಂದು ಸಂಜೆ ನಡೆಸಿದ ಸಭೆ ಮುಕ್ತಾಯವಾಗಿದೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಶಾಲೆಗಳಲ್ಲಿ ಸಮವಸ್ತ್ರ ಕುರಿತ ವಿವಾದ ಆಗಿತ್ತು. ವಿಷಯ ಹೈಕೋರ್ಟ್ ಮೆಟ್ಟಿಲೇರಿದೆ. ನ್ಯಾಯಾಲಯ ಯಾವುದೇ ತೀರ್ಪು ನೀಡಿದರೂ ನಾವು ಅದನ್ನು ಗೌರವಿಸಬೇಕು. ಈಗ ವಿದ್ಯಾರ್ಥಿಗಳಲ್ಲಿ ಗೊಂದಲ ಕಡಿಮೆಯಾಗಿದೆ. ಬಾಹ್ಯಶಕ್ತಿಗಳಿಂದ ಪ್ರಚೋದನೆ ಇನ್ನೂ ಇದೆ. ಅದು ಕೂಡ ನಿವಾರಣೆಯಾಗಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಸಂಯಮದಿಂದ ವರ್ತಿಸುತ್ತಿದ್ದಾರೆ. ಅವರಿಗೆ ಧನ್ಯವಾದ ತಿಳಿಸುತ್ತೇನೆ. ಶಾಂತಿ ಸುವ್ಯವಸ್ಥೆ ಕಾಪಾಡಬೇಕು, ಮುಂದಿನ ಆದೇಶದವರೆಗೂ ಯಾವುದೇ ಧಾರ್ಮಿಕ ವಸ್ತ್ರ ಸಂಹಿತೆ ಹಾಕಬಾರದು ಎಂದು ಹೈಕೋರ್ಟ್ ಸೂಚನೆ ನೀಡಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ.
ಸೋಮವಾರದಿಂದ ಶಾಲೆಗಳು ಪುನಾರಂಭವಾಗುತ್ತವೆ. ಎರಡನೇ ಹಂತದಲ್ಲಿ ಪಿಯುಸಿ ತರಗತಿಳನ್ನು ಆರಂಭ ಮಾಡಲಾಗುತ್ತದೆ ಎಂದು ತಿಳಿಸಿದರು. ನಾಳೆ ಬೆಳಗ್ಗೆ ಶಿಕ್ಷಣ ಇಲಾಖೆಯೊಂದಿಗೆ ಸಭೆ ಮಾಡುತ್ತಿದ್ದೇನೆ. ಬಳಿಕ ಸಂಜೆ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡುತ್ತಿದ್ದೇನೆ. ಆ ಬಳಿಕ ಪಿಯು ತರಗತಿಗಳ ಪುನರಾರಂಭದ ಬಗ್ಗೆ ತಿಳಿಸಲಾಗುತ್ತದೆ ಎಂದರು.