ಉಡುಪಿ :ಉಡುಪಿ ಸರಕಾರಿ ಪಿಯು ಬಾಲಕಿಯರ ಕಾಲೇಜಿನಲ್ಲಿ ಸ್ಕಾರ್ಫ್ ಹಾಕಿದ್ದಕ್ಕೆ ತರಗತಿ ಪ್ರವೇಶವನ್ನು ನಿರಾಕರಿಸಿರುವ ಪ್ರಕರಣವು ಇದುವರೆಗೆ ಇತ್ಯರ್ಥಗೊಂಡಿಲ್ಲ. ಕಳೆದ ಮೂರು ವಾರಗಳಿಂದ ತರಗತಿಯಿಂದ ಹೊರಗೆ ಉಳಿಯಲ್ಪಟ್ಟ ವಿದ್ಯಾರ್ಥಿನಿಯರು ಗುರುವಾರ ಕಾಲೇಜಿನ ಗೇಟ್ ಬಳಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
‘ಹಿಜಾಬ್ ನನ್ನ ಹಕ್ಕು, ಅದನ್ನು ಪಡೆದೆ ತೀರುತ್ತೇವೆ, ನಮಗೆ ನ್ಯಾಯ ಬೇಕು’, ‘ಇದು ನನ್ನ ಮೂಲಭೂತ ಹಕ್ಕು’, ‘ನಾವು ಹಿಜಾಬ್ ಹಾಕಿದ ಕಾರಣಕ್ಕಾಗಿ ತರಗತಿಯಿಂದ ಹೊರಗೆ ಕುಳಿತುಕೊಂಡಿದ್ದೇವೆ’ ಎಂಬ ಭಿತ್ತಿಪತ್ರಗಳನ್ನು ಐವರು ವಿದ್ಯಾರ್ಥಿನಿಯರು ಪ್ರದರ್ಶಿಸಿದರು. ಅಧಿಕಾರಿಗಳು ಗಮನಹರಿಸದೆ ನಿರ್ಲಕ್ಷ್ಯವಹಿಸುತ್ತಿದ್ದಾರೆ, ನಮಗೆ ತರಗತಿಗಳು ಸಿಗುತ್ತಿಲ್ಲ, ನಮ್ಮ ಸಂವಿಧಾನಾತ್ಮಕ ಹಕ್ಕನ್ನು ಕಸಿದಿಟ್ಟು ಮಾನಸಿಕವಾಗಿ ತೊಂದರೆ ಕೊಡುತ್ತಿದ್ದಾರೆಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಕಾಲೇಜಿನ ದ್ವಿತೀಯ ಪಿಯುಸಿಯ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ತಲಾ ಮೂವರು ಹಾಗೂ ಪ್ರಥಮ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ತಲಾ ಒಬ್ಬರು ಸೇರಿದಂತೆ ಒಟ್ಟು ಎಂಟು ಮಂದಿ ವಿದ್ಯಾರ್ಥಿನಿಯರು ತರಗತಿ ಪ್ರವೇಶ ಇಲ್ಲದೆ ಕಾಲೇಜಿನ ಹೊರಗಡೆ, ಸ್ಟಾಫ್ ರೂಮ್, ಲೈಬ್ರರಿ ಯಲ್ಲಿ ಕುಳಿತು ಮನೆಗೆ ಹೋಗುತ್ತಿದ್ದಾರೆ. ಇವರಲ್ಲಿ ಮೂವರು ಅನಾರೋಗ್ಯದ ಕಾರಣ ಕಾಲೇಜಿಗೆ ಬಂದಿಲ್ಲ. ಉಳಿದ ಐವರು ವಿದ್ಯಾರ್ಥಿನಿಯರು ಭಿತ್ತಿಪತ್ರ ಪ್ರದರ್ಶಿಸಿ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
‘ನಮ್ಮ ಮನೆಯವರು ತುಂಬಾ ಮನವಿ ಮಾಡಿದ್ದಾರೆ. ನಮಗೆ ಯಾವುದೇ ಸಕರಾತ್ಮಕ ಸ್ಪಂದನೆ ಸಿಕ್ಕಿಲ್ಲ. ನಾನು ಪ್ರಥಮ ಪಿಯುಸಿಯಲ್ಲಿಯೂ ಸ್ಕಾರ್ಫ್ ಹಾಕಿ ತರಗತಿಗೆ ಬಂದಿದ್ದೇವೆ. ಆಗ ಬಲತ್ಕಾರವಾಗಿ ಸ್ಕಾರ್ಫ್ ತೆಗೆಸಿದರು. ಈಗ ನಾವು ಹೋರಾಟಕ್ಕೆ ಇಳಿದ ಕಾರಣಕ್ಕೆ ಪ್ರಾಂಶುಪಾಲರು ನಮಗೆ ಹಿಂಸೆ ನೀಡುತ್ತಿದ್ದಾರೆ. ನಮಗೆ ಶಿಕ್ಷಣ ಬೇಕು. ಅದರೊಂದಿಗೆ ನಮ್ಮ ಧಾರ್ಮಿಕ ಹಕ್ಕಿನಂತೆ ಸ್ಕಾರ್ಫ್ ಹಾಕಲು ಅವಕಾಶ ನೀಡಬೇಕು’ ಎಂದು ವಿದ್ಯಾರ್ಥಿನಿ ಆಲಿಯಾ ಅಸದಿ ಒತ್ತಾಯಿಸಿದ್ದಾರೆ.
‘ನಮ್ಮ ಯೂನಿಫಾರ್ಮ್‌ನಲ್ಲಿರುವ ಶಾಲನ್ನೇ ತಲೆಗೆ ಹಾಕಿಕೊಂಡು ಬರುತ್ತೇವೆ ಎಂದು ನಾವು ಕೇಳುತ್ತಿದ್ದೇವೆ. ಆದರೆ ಅದಕ್ಕೂ ಅವಕಾಶ ನೀಡುತ್ತಿಲ್ಲ. ನಮ್ಮ ಮನೆಯವರೆಲ್ಲ ನಮಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ನಮ್ಮ ಶಿಕ್ಷಣ ಹಾಳಾಗುತ್ತಿದೆ. ಪರೀಕ್ಷೆ ಬರುತ್ತಿದೆ. ನಮಗೆ ಹಿಜಾಬ್ ಹಾಕಲು ಅವಕಾಶ ಕೊಡಿ’ ಎಂದು ಆಲಿಯಾ ಬಾನು ಮನವಿ ಮಾಡಿದರು.
ಮುಸ್ಲಿಂ ಯುವತಿಯರು ತಮ್ಮ ತಲೆಗೂದಲನ್ನು ಮುಚ್ಚುವುದು ಧಾರ್ಮಿಕ ನಂಬಿಕೆಯ ಭಾಗವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿರುವುದು ದುರದೃಷ್ಟಕರವಾಗಿದ್ದು ಈ ಬಗ್ಗೆ ಶಿಕ್ಷಣ ಇಲಾಖೆಯವರು ಹಾಗೂ ಸಂಭಂದ ಪಟ್ಟ ಅಧಿಕಾರಿಗಳು ಮಧ್ಯಪ್ರವೇಶಿಸಿ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಹಾಗು ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಶೀಘ್ರ ಕ್ರಮ ಕೈಗೊಳ್ಳಬೇಕಾಗಿದೆ.