janadhvani

Kannada Online News Paper

EVM ಬಳಕೆಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿ

‘‘ನಾನು ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿದ್ದೇನೆ. ನ್ಯಾಯಾಂಗ ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಬೇಕು. ಮತಪತ್ರದ ಮೂಲಕ ಚುನಾವಣೆ ನಡೆಯಲಿ’’

ಹೊಸದಿಲ್ಲಿ: ದೇಶದಲ್ಲಿ ಮತದಾನಕ್ಕೆ ಮತಪತ್ರಗಳ ಬದಲಿಗೆ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಪರಿಚಯಿಸಲು ಕಾರಣವಾದ ಪ್ರಜಾಪ್ರತಿನಿಧಿ ಕಾಯ್ದೆಯ ನಿಬಂಧನೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿಗೆ ನೀಡಿದೆ. ಉತ್ತರಪ್ರದೇಶ, ಗೋವಾ, ಪಂಜಾಬ್, ಮಣಿಪುರ ಹಾಗೂ ಉತ್ತರಾಖಂಡದಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮನವಿಯ ವಿಚಾರಣೆ ನಡೆಸುವ ಅಗತ್ಯತೆ ಇದೆ ಎಂಬ ನ್ಯಾಯವಾದಿ ಎಂ.ಎಲ್. ಶರ್ಮಾ ಅವರ ಪ್ರತಿಪಾದನೆಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರನ್ನು ಒಳಗೊಂಡ ಪೀಠ ಆಲಿಸಿತು.

‘‘ನಾವು ಪರಿಶೀಲಿಸಲಿದ್ದೇವೆ. ನಾನು ಅದನ್ನು ಇತರ ಪೀಠದ ಮುಂದೆ ವಿಚಾರಣೆಗೆ ಪರಿಗಣಿಸಲಿದ್ದೇನೆ’’ ಎಂದು ರಮಣ ಅವರು ಹೇಳಿದರು.

ಇವಿಎಂಗಳ ಬಳಕೆಗೆ ಅನುಮತಿ ನೀಡುವ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 61 ಎ ಸಂಸತ್ತಿನಲ್ಲಿ ಅಂಗೀಕಾರಗೊಂಡಿಲ್ಲ. ಆದುದರಿಂದ ಅದನ್ನು ಹೇರಲು ಸಾಧ್ಯವಿಲ್ಲ ಎಂದು ಶರ್ಮಾ ಅವರು ತಿಳಿಸಿದರು. ‘‘ನಾನು ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿದ್ದೇನೆ. ನ್ಯಾಯಾಂಗ ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಬೇಕು. ಮತಪತ್ರದ ಮೂಲಕ ಚುನಾವಣೆ ನಡೆಯಲಿ’’ ಎಂದು ಶರ್ಮಾ ಅವರು ಪ್ರತಿಪಾದಿಸಿದರು.

error: Content is protected !! Not allowed copy content from janadhvani.com