janadhvani

Kannada Online News Paper

ಮರ್ಕಝ್ ನಾಲೆಡ್ಜ್ ಸಿಟಿಯಲ್ಲಿ ದುರಂತ- ಸಾಮಾಜಿಕ ತಾಣದಲ್ಲಿ ಆಹ್ಲಾದಿಸುವವರ ವಿರುದ್ಧ ಆಕ್ರೋಶ

ತಾಮರಶ್ಶೇರಿ: ಇಲ್ಲಿನ ಮರ್ಕಝ್ ನಾಲೆಡ್ಜ್ ಸಿಟಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಕಾಂಕ್ರೀಟೀಕರಣದ ವೇಳೆ ದುರಂತ ಸಂಭವಿಸಿದ್ದು, ಸುಮಾರು 23 ಕಾರ್ಮಿಕರು ಗಾಯಗೊಂಡಿದ್ದಾರೆ.

“ಹಿಲ್ಸಿನಾಯಿ” ಎಂಬ ಶಾಲೆಯ ಕಟ್ಟಡದ ಎರಡನೇ ಮಹಡಿಯ ಕಾಂಕ್ರೀಟ್ ಕಾಮಗಾರಿ ವೇಳೆ ಕಾಂಕ್ರೀಟ್ ಗೆ ಆಧಾರವಾಗಿ ಇರಿಸಲಾಗಿದ್ದ ಕಬ್ಬಿಣದ ಕಂಬಗಳು ಜಾರಿ ಬಿದ್ದು ದುರಂತ ಸಂಭವಿಸಿ, ಹೊಸ ಕಾಂಕ್ರೀಟ್ ಸಂಪೂರ್ಣ ಕುಸಿದಿದೆ.

ಗಾಯಗೊಂಡವರನ್ನು ಕೋಝಿಕ್ಕೋಡ್ ಮೆಡಿಕಲ್ ಕಾಲೇಜ್ ಮತ್ತು ತಾಮರಶ್ಶೇರಿ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. “ಇಲ್ಲಿ ಯಾವುದೇ ಕಟ್ಟಡ ಕುಸಿದಿಲ್ಲ, ಕಟ್ಟಡದ ಕಾಂಕ್ರೀಟೀಕರಣದ ಕೆಲಸ ಕಾರ್ಯಗಳು ನಡೆಯುತ್ತಿದ್ದ ವೇಳೆ ಅದಕ್ಕೆ ಆಧಾರವಾಗಿ ಇರಿಸಲಾಗಿದ್ದ ಕಬ್ಬಿಣದ ಕಂಬವು ವಾಲಿದಕಾರಣ ಈ ದುರಂತ ಸಂಭವಿಸಿದೆ” ಎಂದು ಮರ್ಕಝ್ ನಾಲೆಡ್ಜ್ ಸಿಟಿಯ ಸಿಇಒ ಅಬ್ದುಲ್ ಸಲಾಂ ಸ್ಪಷ್ಟಪಡಿಸಿದ್ದಾರೆ.

ಮರ್ಕಝ್ ನಾಲೆಡ್ಜ್ ಸಿಟಿಯಲ್ಲಿ ಸರಿಸುಮಾರು ಹತ್ತು ವರ್ಷಗಳಿಂದ ಕಟ್ಟಡ ನಿರ್ಮಾಣ ಕಾರ್ಯಗಳು ನಡೆಯುತ್ತಿದೆ. ವಿದೇಶಗಳಲ್ಲಿ ಕಟ್ಟಡ ನಿರ್ಮಾಣದಲ್ಲಿ ಪರಿಚಯ ಸಂಪನ್ನರಾದ ಇಂಜಿನಿಯರಿಂಗ್ ಗಳು ಇದನ್ನು ನಿರ್ಮಿಸುತ್ತಿದ್ದಾರೆ. ಈ ತನಕ ಇಂತಹಾ ಯಾವುದೇ ಅಹಿತಕರ ಘಟನೆ ನಡೆದಿರಲಿಲ್ಲ, ಇನ್ನು ಮುಂದಕ್ಕೂ ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಹೇಳಿದ ಅವರು ಮಾಧ್ಯಮಗಳಲ್ಲಿ ಜನರಿಗೆ ತಪ್ಪು ಸಂದೇಶವನ್ನು ನೀಡಬೇಡಿ ಎಂದು ವಿನಂತಿಸಿದ್ದಾರೆ.

ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಮರ್ಕಝ್ ನಾಲೆಡ್ಜ್ ಸಿಟಿಯಲ್ಲಿ, ಪ್ರವಿಶಾಲವಾದ ಮಸೀದಿಯನ್ನೊಳಗೊಂಡ ಇಸ್ಲಾಮಿಕ್ ಕಲ್ಚರಲ್ ಸೆಂಟರ್, ಮೆಡಿಕಲ್ ಕಾಲೇಜ್, ಲಾ ಕಾಲೇಜ್, ಐಟಿ ಪಾರ್ಕ್ ವಾಣಿಜ್ಯ ಸಂಸ್ಥೆಗಳು ಮತ್ತು ಶಾಲೆಗಳಂತಹ ವಿವಿಧ ಯೋಜನೆಗಳ ಕಟ್ಟಡಗಳು ಇಲ್ಲಿ ನಿರ್ಮಾಣ ಹಂತದಲ್ಲಿವೆ.ಇವುಗಳಲ್ಲಿ ಮೆಡಿಕಲ್ ಕಾಲೇಜ್, ಲಾ ಕಾಲೇಜ್, ಅಲಿಫ್ ಗ್ಲೋಬಲ್ ಸ್ಕೂಲ್ ಮುಂತಾದವು ಈಗಾಗಲೇ ಕಾರ್ಯಾಚರಿಸುತ್ತಿದೆ.

ಈಗಾಗಲೇ ದೇಶ ವಿದೇಶಗಳ ವಿನೋದ ಸಂಚಾರಿಗಳ ಆಕರ್ಷಣೀಯ ಕೇಂದ್ರವಾಗಿ ಮಾರ್ಪಟ್ಟಿರುವ ಮರ್ಕಝ್ ನಾಲೆಡ್ಜ್ ಸಿಟಿ, ಭಾರತದಲ್ಲೇ ಅತ್ಯುತ್ತಮ ಟೂರಿಸ್ಟ್ ಕೇಂದ್ರವಾಗಿ ಹೊರ ಹೊಮ್ಮಲಿದೆ.

ನಾಲೆಡ್ಜ್ ಸಿಟಿ ನಿರ್ಮಾಣವಿರೋಧಿಸುವ ಕೆಲವು ಸ್ಥಾಪಿತ ಹಿತಾಸಕ್ತಿಗಳು ಇಂದು ನಡೆದ ಅಹಿತಕರ ಘಟನೆಯನ್ನು ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟು, ಆಹ್ಲಾದಿಸುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ದುರಂತದಲ್ಲೂ ಆಹ್ಲಾದಿಸುವ, ಮೃಗೀಯತೆಯನ್ನೂ ನಾಚಿಸುವಂತಹಾ ದುಷ್ಟ ಮನಸ್ಥಿತಿ ಎಲ್ಲಿಂದ ಬಂತು ಎಂದು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ.

error: Content is protected !! Not allowed copy content from janadhvani.com