janadhvani

Kannada Online News Paper

ಮತಾಂತರ ನಿಷೇಧ ಮಸೂದೆ- ಹೈಕೋರ್ಟ್ ಮೆಟ್ಟಿಲೇರಲು ಮುಂದಾದ ಕ್ರೈಸ್ತರು

ಬೆಂಗಳೂರಿನ ಆರ್ಚ್ ಬಿಷಪ್ ಪೀಟರ್ ಮಾಚಾಡೋ ನೇತೃತ್ವದಲ್ಲಿ ಕ್ರೈಸ್ತ ಸಮುದಾಯದ ಒಕ್ಕೂಟ ಹೈಕೋರ್ಟ್ ಮೆಟ್ಟಿಲೇರಲು ನಿರ್ಧಾರ ಮಾಡಿದೆ.

ಬೆಳಗಾವಿ: ಚಳಿಗಾಲದ ಅಧಿವೇಶನದಲ್ಲಿ ಧರ್ಮಯುದ್ಧಕ್ಕೆ ವೇದಿಕೆ ಸಜ್ಜಾಗಿದೆ. ಮತಾಂತರ ನಿಷೇಧ ಮಸೂದೆ ಮಂಡನೆಗೆ ಸರ್ಕಾರ ಎಲ್ಲಾ ಸಿದ್ಧತೆಗಳನ್ನು ನಡೆಸಿದೆ. ನಿನ್ನೆ ಕ್ಯಾಬಿನೆಟ್​ನಲ್ಲಿ ಅನುಮೋದನೆ ಪಡೆದಿದ್ದು, ಇಂದು ಮಸೂದೆ ಮಂಡಿಸಲಿದೆ. ಆದ್ರೆ ಕ್ರೈಸ್ತ ಸಮುದಾಯ ಕಾಯ್ದೆ ವಿರೋಧಿಸಿ ಹೈಕೋರ್ಟ್ ಕದ ತಟ್ಟಲು ಮುಂದಾಗಿದೆ.

ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಸಾಕಷ್ಟೂ ಸದ್ದು ಮಾಡ್ತಿದೆ. ಆರ್​ಎಸ್​ಎಸ್​​ನ ಅಜೆಂಡಾದಂತಿರುವ ಮಸೂದೆ ಮಂಡನೆಗೆ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಆದ್ರೆ ಕಾಯ್ದೆಗೆ ಕ್ರೈಸ್ತ ಸಮುದಾಯ ಸೇರಿದಂತೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸ್ತಿವೆ. ವಿರೋಧದ ನಡುವೆಯೂ ಮತಾಂತರ ನಿಷೇಧ ಕಾಯ್ದೆಗೆ ನಿನ್ನೆ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. ಇಂದು ಅಧಿವೇಶನದಲ್ಲಿ ಮಸೂದೆ ಮಂಡನೆಗೆ ಸರ್ಕಾರ ಸಿದ್ಧತೆ ನಡೆಸಿದೆ.

ಕಾಯ್ದೆ ವಿರೋಧಿಸಿ ಹೈಕೋರ್ಟ್ ಮೆಟ್ಟಿಲೇರಲು ಮುಂದಾದ ಕ್ರೈಸ್ತರು
ರಾಜ್ಯ ಸರ್ಕಾರ ತರಲು ಹೊರಟಿರೋ ಮತಾಂತರ ನಿಷೇಧ ಕಾಯ್ದೆ ಕ್ರೈಸ್ತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ವಿಚಾರವಾಗಿ ಕ್ರೈಸ್ತ ಮುಖಂಡರು ಸಿಎಂ ಬೊಮ್ಮಾಯಿಯವರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ರು.. ಕಾಯ್ದೆ ಜಾರಿಯಿಂದ ಆಗಬಹುದಾದ ತೊಂದರೆಗಳ ಬಗ್ಗೆಯೂ ಅಳಲು ತೋಡಿಕೊಂಡಿದ್ರು.. ಆದರೂ ರಾಜ್ಯ ಸರ್ಕಾರ ಇದಕ್ಕೆಲ್ಲಾ ಜಗ್ಗದಂತೆ ಕಾಣ್ತಿದೆ. ಇಂದು ಮಸೂದೆ ಮಂಡನೆಯೂ ಆಗ್ತಿದೆ. ಇದ್ರ ಬೆನ್ನಲ್ಲೇ ಕ್ರೈಸ್ತ ಸಮುದಾಯ ಒಂದು ಹೆಜ್ಜೆ ಮುಂದೆ ಹೋಗಿ ಕಾಯ್ದೆ ಜಾರಿ ತಡೆ ಕೋರಿ ಹೈಕೋರ್ಟ್​​ ಕದ ತಟ್ಟಲು ಮುಂದಾಗಿದೆ.

ಹೈ ಕೋರ್ಟ್ ಮೆಟ್ಟಿಲೇರಲು ನಿರ್ಧಾರ
ರಾಜ್ಯ ಸರ್ಕಾರದ ನಡೆಗೆ ಕ್ರೈಸ್ತ ಸಮುದಾಯದ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ಬೆಂಗಳೂರಿನ ಆರ್ಚ್ ಬಿಷಪ್ ಪೀಟರ್ ಮಾಚಾಡೋ ನೇತೃತ್ವದಲ್ಲಿ ಕ್ರೈಸ್ತ ಸಮುದಾಯದ ಒಕ್ಕೂಟ ಹೈಕೋರ್ಟ್ ಮೆಟ್ಟಿಲೇರಲು ನಿರ್ಧಾರ ಮಾಡಿದೆ. ಸರ್ಕಾರದ ಮಸೂದೆಗೆ ತಡೆ ನೀಡುವಂತೆ ಕೋರಿ ಹೈಕೋರ್ಟ್​ ಮೊರೆ ಹೋಗಲು, ಸಮುದಾಯಗಳ ಒಕ್ಕೂಟ ಹಾಗೂ ಪೀಟರ್ ಮಾಚಾಡೋ ನಿರ್ಧಾರ ಮಾಡಿದ್ದಾರೆ. ಕ್ರೈಸ್ತ ಸಮುದಾಯವನ್ನು ಟಾರ್ಗೆಟ್ ಮಾಡಿ ಸರ್ಕಾರ ಮಸೂದೆ ಮಂಡಿಸುತ್ತಿದೆ. ನಮಗೆ ನೀಡಿದ ಹಕ್ಕು, ಮಾನ್ಯತೆಯ ಮೇಲೆ ಸರ್ಕಾರ ದಾಳಿ ಮಾಡುತ್ತಿದೆ. ಹೀಗಾಗಿ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡದಂತೆ ಸಮುದಾಯ ಹೈಕೋರ್ಟ್ ಮೂಲಕ ಒತ್ತಡ ಹಾಕಲು ಕ್ರೈಸ್ತ ಸಮುದಾಯ ಮುಂದಾಗಿದೆ.

ಒಟ್ಟಿನಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡನೆ ಮಾಡೇ ಮಾಡ್ತೀವಿ ಅಂತ ರಾಜ್ಯ ಸರ್ಕಾರ ಟೊಂಕ ಕಟ್ಟಿ ನಿಂತಿದೆ. ಈ ಬಗ್ಗೆ ಮಾಡಿದ ಮನವಿಗೂ, ಪ್ರತಿಭಟನೆಯ ಬಿಸಿಗೂ ಸರ್ಕಾರ ಜಗ್ಗುವಂತೆ ಕಾಣ್ತಿಲ್ಲ. ಇಂದು ಯಾರೇ ವಿರೋಧ ಮಾಡಿದ್ರೂ, ಅಧಿವೇಶನದಲ್ಲಿ ಯಾರು ಗದ್ದಲ ಎಬ್ಬಿಸಿದ್ರೂ ಮಸೂದೆ ಜಾರಿಯಾಗೋದಂತೂ ಪಕ್ಕಾ ಆಗಿದೆ. ಹೀಗಾಗಿ ಕ್ರೈಸ್ತ ಸಮುದಾದ ಹೈಕೋರ್ಟ್​ ಮೆಟ್ಟಿಲೇರಲು ನಿರ್ಧರಿಸಿದೆ. ಸದ್ಯ ಎಲ್ಲರ ಚಿತ್ತ ಇಂದಿನ ಮಸೂದೆ ಮಂಡನೆ ಹಾಗೂ ಕೋರ್ಟ್​ ಅಂಗಳ ತಲುಪುತ್ತಿರೋ ಕಾಯ್ದೆ ವಿರೋಧಿ ದೂರಿನತ್ತ ನೆಟ್ಟಿದೆ. ಈ ಬೆಳವಣಿಯನ್ನು ಸರ್ಕಾರ ಹೇಗೆ ನಿಭಾಯಿಸುತ್ತೇ ಅನ್ನೋದೆ ಸದ್ಯದ ಕುತೂಹಲ.