ಮಂಗಳೂರು: ಖಾಸಗಿ ಬಸ್ನಲ್ಲಿ ಜತೆಯಾಗಿ ಪ್ರಯಾಣಿತ್ತಿದ್ದ ಭಿನ್ನ ಕೋಮಿನ ಯುವಕ ಮತ್ತು ಯುವತಿಯನ್ನು ಬೆದರಿಸಿ, ಅವ್ಯಾಚ ಶಬ್ದಗಳಿಂದ ಬೈದು ಅಲ್ಲದೇ ಅವರ ಭಾವಚಿತ್ರ ಹಾಗೂ ವೀಡಿಯೋ ಕ್ಲಿಪ್ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚುವ ಮೂಲಕ ಯುವತಿಯ ಗೌರವಕ್ಕೆ ದಕ್ಕೆ ತಂದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ಬಸ್ಸು ನಿಲ್ದಾಣದಲ್ಲಿ ನಡೆದಿದೆ ಎಂದು ಹೇಳಲಾಗಿದ್ದ ಪ್ರಕರಣಕ್ಕೆ ಸಂಭಂದಿಸಿದಂತೆ , ಅನ್ಯಮತೀಯ ಯುವಕ ಮತ್ತು ಯುವತಿಯ ಮೇಲೆ ದೌರ್ಜನ್ಯ ಎಸಗಿದ ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದರು.
ಉಡುಪಿ ಜಿಲ್ಲೆಯ ಬಸ್ಸು ನಿಲ್ದಾಣದಲ್ಲಿ ಮಂಗಳೂರು ನಗರದ ಕಾಲೇಜ್ ಒಂದರ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯನ್ನು ಅಡ್ಡ ಹಾಕಿ ಗದರಿಸಲಾಗಿತ್ತು ಎಂದು ವಿಡಿಯೋ ಹಾಗೂ ಅದಕ್ಕೆ ಸಂಬಂಧಿಸಿದ ಪೋಸ್ಟ್ ಶುಕ್ರವಾರ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ವರದಿಯಾಗಿತ್ತು .
ಈ ವಿಡಿಯೋ ಹಾಗೂ ಇದೇ ಘಟನೆಗೆ ಸಂಬಂದಿಸಿದ ಇನ್ನೆರಡು ವಿಡೀಯೊಗಳ ಪರಿಶೀಲನೆ ನಡೆಸಿದ ಮಂಗಳೂರು ಪೊಲೀಸರು ಪ್ರಸ್ತುತ ಘಟನೆಯು ಮಂಗಳೂರಿನ ಖಾಸಗಿ ಬಸ್ಸು ನಿಲ್ದಾಣದ ಬಳಿ ನಡೆದಿತ್ತು ಎನ್ನುವುದನ್ನು ಕಂಡು ಕೊಂಡಿದ್ದರು.
ಈ ಹಿನ್ನಲೆಯಲ್ಲಿ ಸೋಮೋಟೋ ಪ್ರಕರಣ ದಾಖಲಿಸಿಕೊಂಡ ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು .ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕಾಶ್ , ರಾಘವೇಂದ್ರ, ರಂಜೀತ್ ಹಾಗೂ ಪವನ್ ಎಂಬವರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ದ ಐಪಿಸಿ ಕಲಂ 153 ಎ ಹಾಗೂ 354 ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕೃತ್ಯವು ಉಡುಪಿಯಲ್ಲಿ ನಡೆದಿದೆ ಎಂಬ ಮಾಹಿತಿಯೂ ವ್ಯಾಪಕವಾಗಿ ಹಬ್ಬಿದ ಹಿನ್ನಲೆಯಲ್ಲಿ ಉಡುಪಿ ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬಹುದು ಎಂಬ ಉದ್ದೇಶದಿಂದ ಮಂಗಳೂರು ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿರಲಿಲ್ಲ. ಆದರೆ ಕೃತ್ಯ ಮಂಗಳೂರು ಖಾಸಗಿ ಬಸ್ಸು ನಿಲ್ದಾಣದಲ್ಲಿ ನಡೆದಿದೆ ಎಂಬ ಮಾಹಿತಿ ತಿಳಿಯುತ್ತಲೇ ಪೊಲೀಸರೇ ಸೊಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸ್ ಕಮೀಷನರ್ ತಿಳಿಸಿದ್ದಾರೆ