ದುಬೈ: ದುಬೈನಲ್ಲಿ ಪ್ರವಾಸಿ ಮತ್ತು ಸಂದರ್ಶಕರ ವೀಸಾ ಪಡೆಯಲು ಹೋಟೆಲ್ ಬುಕಿಂಗ್ ದಾಖಲೆಗಳು ಮತ್ತು ರಿಟರ್ನ್ ಟಿಕೆಟ್ ಕಡ್ಡಾಯವಾಗಿದೆ. ಈ ಸಂಬಂಧ ದುಬೈ ಇಮಿಗ್ರೇಷನ್ ಟ್ರಾವೆಲ್ ಏಜೆನ್ಸಿಗಳಿಗೆ ನೋಟಿಸ್ ನೀಡಿದೆ. ವೀಸಾಕ್ಕೆ ಅರ್ಜಿ ಸಲ್ಲಿಸುವಾಗ ಕ್ಯೂಆರ್ ಕೋಡ್ ಹೊಂದಿರುವ ಹೋಟೆಲ್ ಬುಕಿಂಗ್ ದಾಖಲೆ ಮತ್ತು ರಿಟರ್ನ್ ಟಿಕೆಟ್‌ನ ನಕಲನ್ನು ಸಲ್ಲಿಸುವುದು ಅಗತ್ಯ. ಇಲ್ಲದಿದ್ದರೆ, ವೀಸಾ ಪ್ರಕ್ರಿಯೆಯು ವಿಳಂಬವಾಗಲಿದೆ. ಈ ಬದಲಾವಣೆಯು ವಿವಿಧ ಉದ್ದೇಶಗಳಿಗಾಗಿ ವಿಸಿಟ್ ವೀಸಾದಲ್ಲಿ ದುಬೈಗೆ ಬರುವ ಅನೇಕ ಜನರ ಮೇಲೆ ಪರಿಣಾಮ ಬೀರಲಿದೆ.
ಇಂತಹ ದಾಖಲೆಗಳನ್ನು ಸಲ್ಲಿಸದವರ ವೀಸಾ ಅರ್ಜಿಗಳು ಮೊಟಕುಗೊಂಡಿದೆ. ವಿಸಿಟ್ ವೀಸಾದಲ್ಲಿ ಬರುವವರಿಗೆ ರಿಟರ್ನ್ ಟಿಕೆಟ್ ಮತ್ತು ನಿವಾಸದ ದಾಖಲೆಗಳು ಮುಂಚಿನಿಂದಲೇ ಕಡ್ಡಾಯವಾಗಿತ್ತು. ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ನಲ್ಲಿ ಕೇಳಿದರೆ ಮಾತ್ರ ಈ ಎರಡು ದಾಖಲೆಯನ್ನು ತೋರಿಸಿದರೆ ಸಾಕಿತ್ತು.. ಆದರೆ ವೀಸಾ ಅರ್ಜಿಯ ಸಮಯದಲ್ಲಿ ಈ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿರಲಿಲ್ಲ. ಅದೂ ಅಲ್ಲದೆ, ಕ್ರೆಡಿಟ್/ಡೆಬಿಟ್ ಕಾರ್ಡ್‌ನಲ್ಲಿ 2 ತಿಂಗಳ ವೀಸಾಗೆ AED 5,000 ಮತ್ತು 1 ತಿಂಗಳ ವೀಸಾಗೆ AED 3,000 ಕಡ್ಡಾಯವಾಗಿದೆ.
ಪ್ರವಾಸಿ ವೀಸಾಗಳಿಗೆ ಟ್ರಾವೆಲ್ ಏಜೆನ್ಸಿಗಳ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು, ವ್ಯಾಪಾರ ಕಂಪನಿಗಳು ವ್ಯಕ್ತಿಗಳು ಮತ್ತು ಕುಟುಂಬಗಳು ಸಂದರ್ಶಕ ವೀಸಾಗಳಿಗೆ ಅರ್ಜಿ ಸಲ್ಲಿಸಬಹುದು.ಆದರೆ ಎರಡೂ ವೀಸಾಗಳ ನಿಯಮಗಳು ಮತ್ತು ಷರತ್ತುಗಳು ಒಂದೇ ಆಗಿದೆ. ಏತನ್ಮಧ್ಯೆ, ಯುಎಇಯಲ್ಲಿರುವ ಅನಿವಾಸಿಯೊಬ್ಬರು ತಮ್ಮ ಕುಟುಂಬದ ಪರವಾಗಿ ಸಂದರ್ಶಕ ವೀಸಾಕ್ಕೆ ಅರ್ಜಿ ಸಲ್ಲಿಸುವಾಗ ಹೋಟೆಲ್ ಬುಕಿಂಗ್ ಮತ್ತು ರಿಟರ್ನ್ ಟಿಕೆಟ್ ಅನ್ನು ಸಲ್ಲಿಸಬೇಕೇ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಸಂದರ್ಶಕ ವೀಸಾ ಅವಧಿ ಮುಗಿದಿರುವವರು ನೆರೆಯ ದೇಶಗಳಿಗೆ ಹೋಗಿ ಹೊಸ ಸಂದರ್ಶಕ ವೀಸಾಗಳನ್ನು ಪಡೆಯುವ ಕಾರ್ಯವಿಧಾನಗಳ ಮೇಲೂ ಇದು ಪರಿಣಾಮ ಬೀರಿದೆ.