janadhvani

Kannada Online News Paper

ಕೋವಿಡ್ ವಾರ್ಡ್‌ನಲ್ಲಿ ಬೆಂಕಿ ಅವಘಡ- 10 ಮಂದಿ ಸಜೀವ ದಹನ

ಬೆಂಕಿಯಲ್ಲಿ ಸಿಲುಕಿದ ಕೆಲವರನ್ನು ಉಳಿಸಲು ವೈದ್ಯರು ಯತ್ನಿಸುತ್ತಿರುವ ದೃಶ್ಯಗಳು ಹೃದಯ ಕಲಕುತ್ತಿವೆ.

ಅಹಮದ್‌ನಗರ: ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿರುವ ಸಿವಿಲ್ ಆಸ್ಪತ್ರೆಯ ಐಸಿಯುನಲ್ಲಿ (ತೀವ್ರ ನಿಗಾ ಘಟಕ) ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡು ಹತ್ತು ರೋಗಿಗಳು ಮೃತಪಟ್ಟಿದ್ದಾರೆ. ಮತ್ತೋರ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೋವಿಡ್‌ ವಾರ್ಡ್‌ನಲ್ಲಿ ಘಟನೆ ನಡೆದಿದ್ದು, 17 ರೋಗಿಗಳು ದಾಖಲಾಗಿದ್ದರು. ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ಘಟನೆಯಲ್ಲಿ ಮರಣ ಹೊಂದಿದವರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ. ಘೋಷಿಸಿದ್ದಾರೆ.

ಉಳಿದ ರೋಗಿಗಳನ್ನು ಮತ್ತೊಂದು ಆಸ್ಪತ್ರೆಯಲ್ಲಿ ಕೋವಿಡ್ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಭೋಸ್ಲೆ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅಗ್ನಿ ಅವಘಡಕ್ಕೆ ಕಾರಣವನ್ನು ತಿಳಿಯಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಬೆಂಕಿಯ ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಅಗ್ನಿಶಾಮಕ ಇಲಾಖೆಯ ಪ್ರಾಥಮಿಕ ತನಿಖೆಗಳು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಹೇಳಿರುವುದಾಗಿ ಭೋಸ್ಲೆ ತಿಳಿಸಿದ್ದಾರೆ.ಬೆಂಕಿಯಲ್ಲಿ ಸಿಲುಕಿದ ಕೆಲವರನ್ನು ಉಳಿಸಲು ವೈದ್ಯರು ಯತ್ನಿಸುತ್ತಿರುವ ದೃಶ್ಯಗಳು ಹೃದಯ ಕಲಕುತ್ತಿವೆ.

ಕರೋನವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಹೊಸದಾಗಿ ಐಸಿಯು ನಿರ್ಮಿಸಲಾಗಿದೆ. ಆದರೆ ಬೆಂಕಿ ಕಾಣಿಸಿಕೊಂಡಿರುವುದು “ಬಹಳ ಗಂಭೀರ ಸಮಸ್ಯೆ” ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಹೇಳಿದ್ದಾರೆ.

ಮುಖ್ಯಮಂತ್ರಿ ಠಾಕ್ರೆ ಅವರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಅವರಿಗೆ ಸಾಧ್ಯವಿರುವ ಎಲ್ಲ ಭರವಸೆ ನೀಡಿದ್ದಾರೆ ಎಂದು ಸಚಿವರು ಹೇಳಿದರು.

error: Content is protected !! Not allowed copy content from janadhvani.com