janadhvani

Kannada Online News Paper

ಬ್ಯಾಂಕ್ ದಿವಾಳಿಯು ಭಾರತೀಯ ನಾಗರಿಕರಿಗೆ ತೊಂದರೆ-ರಾಷ್ಟ್ರಪತಿ

ನವದೆಹಲಿ: ‘ವ್ಯಾಪಾರದಲ್ಲಿ ನಷ್ಟವಾಗುವುದು ಸಹಜ. ಆದರೆ, ಮೋಸ ಮಾಡುವ ಉದ್ದೇಶದಿಂದ ಬ್ಯಾಂಕ್‌ ಸಾಲ ಪಡೆದು ನಷ್ಟ ಉಂಟು ಮಾಡುವುದರಿಂದ ಭಾರತೀಯ ಕುಟುಂಬಗಳು ತೊಂದರೆಗೊಳಗಾಗುತ್ತಿವೆ’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಹೇಳಿದರು.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣ ಬೆಳಕಿಗೆ ಬಂದ ನಂತರ ಇದೇ ಮೊದಲ ಬಾರಿಗೆ ಕೋವಿಂದ್‌ ಈ ಬಗ್ಗೆ ಮಾತನಾಡಿದ್ದಾರೆ. ದೊಡ್ಡ ಮೊತ್ತದ ಹಣ ಪಾವತಿಯಾಗದೇ ಇದ್ದಾಗ ಅಮಾಯಕ ಜನರಿಗೆ ತೊಂದರೆಯಾಗುತ್ತದೆ. ಅಂತಿಮವಾಗಿ ಪ್ರಾಮಾಣಿಕ ತೆರಿಗೆದಾರರು ನಷ್ಟವನ್ನು ಭರಿಸಬೇಕಾಗುತ್ತದೆ ಎಂದರು.

‘ಗ್ರಾಮೀಣ ಪ್ರದೇಶದ ದುರ್ಬಲರು ಮತ್ತು ಕೆಳ ಸಮುದಾಯದವರು, ಸಣ್ಣಪುಟ್ಟ ಉದ್ಯಮಿಗಳು ತಮ್ಮ ಸಾಲ ಮರು ಪಾವತಿಸಲು ಪ್ರಯತ್ನಿಸುತ್ತಿದ್ದಾರೆ. ಇವರು ಹೆಚ್ಚು ಶ್ರಮಪಡುವ ಭಾರತೀಯರು, ಹೆಚ್ಚಿನವರು ಮಹಿಳೆಯರು. ಸಣ್ಣ ಮೊತ್ತದ ಸಾಲಗಳನ್ನು ಪಡೆದು ವ್ಯಾಪಾರ ನಡೆಸುತ್ತಿದ್ದಾರೆ. ಅವರು ತಮ್ಮ ಕನಸುಗಳನ್ನು ಕಟ್ಟುತ್ತಿದ್ದಾರೆ. ಜೊತೆಗೆ ನಮ್ಮ ಭಾರತದ ಕನಸನ್ನೂ ಕಾಣುತ್ತಿದ್ದಾರೆ’ ಎಂದು ಹೇಳಿದರು.

ಕೋವಿಂದ್‌ ಅವರು ಎಫ್‌ಐಸಿಸಿಐ ಮಹಿಳಾ ಸಂಘಟನೆಯ 34ನೇ ವಾರ್ಷಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಮಾನ್ಯ ನಾಗರಿಕರು, ಅದರಲ್ಲಿಯೂ ಮಹಿಳೆಯರಲ್ಲಿ ಉದ್ಯಮಶೀಲತೆ ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಎಂದರು.

error: Content is protected !! Not allowed copy content from janadhvani.com