janadhvani

Kannada Online News Paper

ವಿಮಾನ ನಿಲ್ದಾಣಗಳಲ್ಲಿ ವಿದೇಶಿ ಪ್ರಯಾಣಿಕರ RTPCR ಟೆಸ್ಟ್‌ಗೆ ವಿನಾಯಿತಿ

ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ವಿದೇಶದಿಂದ ಆಗಮಿಸುವವರ ಆರೋಗ್ಯ ತಪಾಸಣೆ ಕ್ರಮಗಳನ್ನು ಸರಳಗೊಳಿಸಲಾಗಿದೆ.

ಬೆಂಗಳೂರು,ಅ.19: ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ದಿನೇದಿನೇ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಪರಿಷ್ಕೃತ ಕೋವಿಡ್‌ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಈಜುಕೊಳ ಆರಂಭ, 1ರಿಂದ 5ನೇ ತರಗತಿ ಪುನಾರಂಭಕ್ಕೆ ಅನುಮತಿಸಿದೆ. ವಿಮಾನ ನಿಲ್ದಾಣಗಳಲ್ಲಿ ವಿದೇಶಿ ಪ್ರಯಾಣಿಕರ ಆರೋಗ್ಯ ತಪಾಸಣೆ, ಕೋವಿಡ್‌ ಪರೀಕ್ಷೆಗೆ ವಿನಾಯಿತಿ ಕಲ್ಪಿಸಿದೆ.

ರಾಜ್ಯದಲ್ಲಿ ಕಳೆದ ಒಂದು ತಿಂಗಳಿಂದಲೂ ಪಾಸಿಟಿವಿಟಿ ದರ ಇಳಿಕೆಯಾಗಿದೆ. ಅಲ್ಲದೆ ಒಟ್ಟಾರೆ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲೂ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ಚಟುವಟಿಕೆಗಳಿಗೆ ಅವಕಾಶ ನೀಡಲು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿತ್ತು. ಈ ಶಿಫಾರಸಿನ ಅನ್ವಯ ಸರ್ಕಾರ ಹೊಸ ಕೋವಿಡ್‌-19 ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಇವುಗಳು ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶಿಸಿದೆ.

ಹೊಸ ಮಾರ್ಗಸೂಚಿಗಳೇನು:

  • ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ವಿದೇಶದಿಂದ ಆಗಮಿಸುವವರ ಆರೋಗ್ಯ ತಪಾಸಣೆ ಕ್ರಮಗಳನ್ನು ಸರಳಗೊಳಿಸಲಾಗಿದೆ.
  • ಪ್ರಯಾಣಿಕರಿಗೆ ಎಸ್‌ಪಿಒ2 (SPO) ಸಾಮಾನ್ಯ ತಪಾಸಣೆಯನ್ನು ನಿಲ್ಲಿಸಲು (ಜ್ವರ, ಕೆಮ್ಮು, ಶೀತ, ಉಸಿರಾಟದಲ್ಲಿ ತೊಂದರೆ ಪ್ರಕರಣಗಳನ್ನು ಹೊರತುಪಡಿಸಿ) ಆದೇಶಿಸಿದೆ.
  • ಕೇಂದ್ರ ಸರ್ಕಾರದ ಸೂಚಿಸಿರುವ ಆದೇಶಗಳನ್ನು ಹೊರತುಪಡಿಸಿ, ಉಳಿದಂತೆ ವಿದೇಶಗಳಿಂದ ಆಗಮಿಸಿದ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್‌ (RTPCR) ಟೆಸ್ಟ್‌ ರಿಪೋರ್ಟ್‌ (Test Report) ಚೆಕ್‌ ಮಾಡುವುದನ್ನು ನಿಲ್ಲಿಸುವುದು.
  • ಇದರ ಬದಲು ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬರುವ ಮೊದಲೇ ತಮ್ಮ ಆರ್‌ಟಿಪಿಸಿಆರ್‌ ರಿಪೋರ್ಟ್‌ ಅನ್ನು ಏರ್‌ ಸುವಿಧಾ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡುವುದನ್ನು ಕಡ್ಡಾಯಗೊಳಿಸಬೇಕು.ಇದನ್ನು ಆಯಾ ಏರ್‌ಲೈನ್‌ಗಳು ಪರಿಶೀಲಿಸಬೇಕು ಎಂದು ಸೂಚಿಸಿದೆ.
  • ಪ್ರಯಾಣಿಕರನ್ನು ಸ್ವಯಂಚಾಲಿತ ಥರ್ಮಲ್‌ ಕ್ಯಾಮರಾ ಮೇಲ್ವಿಚಾರಣೆ ಮಾಡುವುದು ಮುಂದುವರೆಯಲಿದೆ.
  • ಆದರೆ, ಬ್ರಿಟನ್‌ನಿಂದ ಆಗಮಿಸುವ ಪ್ರಯಾಣಿಕರು ಭಾರತ ಸರ್ಕಾರದ ಕ್ವಾರಂಟೈನ್‌ ನಿಯಮಗಳನ್ನು ಅನುಸರಿಸಬೇಕು ಎಂದು ತಿಳಿಸಿದೆ.