ಭಾರತೀಯ ಮಾಧ್ಯಮಗಳು ಅಮೆರಿಕನ್ ಪತ್ರಿಕೆಗಳಿಗಿಂತ ಉತ್ತಮ ನಡವಳಿಕೆ ಹೊಂದಿದೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬಿಡೆನ್, ಪ್ರಧಾನಿ ಮೋದಿ ಅವರಿಗೆ ಶುಕ್ರವಾರ ಹೇಳಿದ್ದಾರೆ. ಮೂರು ದಿನಗಳ ಪ್ರವಾಸಕ್ಕೆ ಅಮೆರಿಕಾ ತಲುಪಿದ್ದ ಪ್ರಧಾನಿ ಮೋದಿಯೊಂದಿಗೆ ದ್ವಿಪಕ್ಷೀಯ ಮಾತುಕತೆಗೆ ಕುಳಿತುಕೊಳ್ಳುತ್ತಿರುವಾಗ ಅವರು ಇದನ್ನು ಹೇಳಿದ್ದಾರೆ.
ಬಿಡೆನ್ ಅವರು ದೇಶದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಭಾರತದೊಂದಿಗೆ ನಡೆಸುತ್ತಿರುವ ಮೊದಲ ದ್ವಿಪಕ್ಷೀಯ ಮಾತುಕತೆಯನ್ನು ಶ್ವೇತಭವನದ ಓವಲ್ ಕಚೇರಿಯಲ್ಲಿ ನಿನ್ನೆ ಆಯೋಜಿಸಲಾಗಿತ್ತು.
ಮಾತುಕತೆಗೆ ಶುರು ಮಾಡುವುದಕ್ಕಿಂತ ಮುಂಚೆಯೆ ಶುಭಾಶಯ ವಿನಿಮಯ ಮಾಡಿಕೊಂಡ ಬಿಡನ್, “ಭಾರತೀಯ ಮಾಧ್ಯಮಗಳು ಅಮೆರಿಕನ್ ಪತ್ರಿಕೆಗಳಿಗಿಂತ ಉತ್ತಮವಾಗಿ ನಡೆದುಕೊಳ್ಳುತ್ತವೆ. ನಿಮ್ಮ ಅನುಮತಿಯೊಂದಿಗೆ ಹೇಳುವುದಾದರೆ… ನೀವು ಅವರಿಗೆ(ಮಾಧ್ಯಮ) ಉತ್ತರಿಸುವ ಅಗತ್ಯವೆ ಇರುವುದಿಲ್ಲ, ಯಾಕೆಂದರೆ ಅವರು ನಿಮಗೆ ಪ್ರಶ್ನೆಯೆ ಕೇಳುವುದಿಲ್ಲ” ಎಂದು ಹೇಳಿದ್ದಾರೆ.
ಬಿಡೆನ್ ಅವರ ಈ ಮಾತನ್ನು ಪ್ರಧಾನಿ ಮೋದಿ ಅವರು ‘ಸಂಪೂರ್ಣವಾಗಿ ಒಪ್ಪಿಕೊಂಡರು’ ಎಂದು ಪಿಟಿಐ ಮತ್ತು ಎಎನ್ಐ ವರದಿ ಮಾಡಿದೆ.
ಪ್ರಧಾನಿ ಮೋದಿ ಅಧಿಕಾರಕ್ಕೆ ಏರಿದ ನಂತರ ದೇಶದ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಾಂಕ ಇಳಿಯುತ್ತಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ. ಅಲ್ಲದೆ, 2014 ರಲ್ಲಿ ಮೋದಿ ಅಧಿಕಾರಕ್ಕೆ ಬಂದಾಗಿನಿಂದ 2019 ರಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ನಡೆಸಿದ್ದಾರೆ. ಆದರೆ ಆ ಪತ್ರಿಕಾಗೋಷ್ಠಿಯಲ್ಲೂ ಅವರು ಪ್ರಶ್ನೆಗಳಿಗೆ ಉತ್ತರಿಸಿಲ್ಲ.
ಡೊನಾಲ್ಡ್ ಟ್ರಂಪ್ ಅವರು ಕೂಡಾ 2019 ರಲ್ಲಿ ಭಾರತೀಯ ಪತ್ರಕರ್ತನನ್ನು ಉಲ್ಲೇಖಿಸಿ, ಭಾರತದಲ್ಲಿ ‘ಉತ್ತಮ ವರದಿಗಾರರು ಇದ್ದಾರೆ’ ಎಂದು ಹೇಳಿದ್ದರು