janadhvani

Kannada Online News Paper

91 ನೇ ನ್ಯಾಶನಲ್ ಡೇ ಸಂಭ್ರಮದಲ್ಲಿ ಸೌದಿ ಅರೇಬಿಯಾ

✍️ಎಂಕೆ ಅಬ್ದುಲ್ ರಝಾಕ್ ಕೊಡಂಗಾಯಿ
(ತಾಯಿಫ್ ಫೈಟರ್ಸ್)

ಸೌದಿ ಅರೇಬಿಯಾ ರಾಷ್ಟ್ರವಿಡೀ 91 ನೆಯ ನ್ಯಾಶನಲ್ ಡೇ ಸಂಭ್ರಮದಲ್ಲಿರುವಾಗ ಸೌದಿ ಅರೇಬಿಯಾದ ತಾಯಿಫ್ ನಲ್ಲಿ ಉದ್ಯೋಗಿಯಾಗಿರುವ ಅನಿವಾಸಿ ಭಾರತೀಯ ಎಂಬ ನೆಲೆಯಲ್ಲಿ ಶುಭಾಶಯದೊಡನೆ ನನ್ನ ಅನಿಸಿಕೆಗಳನ್ನೂ ಹಂಚ ಬಯಸುತ್ತಿದ್ದೇನೆ.

ಸೌದಿ ದೇಶವು ಒಂದು ಸುರಕ್ಷಿತ ರಾಷ್ಟ್ರ. ಯಾವುದೇ ವಿಧ ಕಲುಷಿತ ರಾಜಕೀಯ, ಕೋಮುವಾದ, ಕೊಲೆಪಾತಕ, ಕಳ್ಳತನ ಮುಂತಾದ ಯಾವುದೇ ರಗಳೆಗಳಿಲ್ಲದೆ ನೆಮ್ಮದಿಯಾಗಿ ಬದುಕುವ ವಾತಾವರಣ ಇರುವ ಒಂದು ದೇಶವಾಗಿದೆ ಸೌದಿ. ವಿಶೇಷವೆಂದರೆ ಈ ಅನುಕೂಲಗಳು ಸೌದಿಯ ಪ್ರಜೆಗಳಿಗೆ ಮಾತ್ರವಲ್ಲ, ಇಲ್ಲಿ ವಾಸಿಸುವ ಯಾವುದೇ ದೇಶದ ಅನಿವಾಸಿಗಳಿಗೂ ಲಭ್ಯ ಎಂಬುದು. ಇಲ್ಲಿ ಹಿಂದೂಗಳು, ಯಹೂದಿಗಳು, ಕ್ರೈಸ್ತರು ಮಾತ್ರವಲ್ಲ, ಜಗತ್ತಿನ ಎಲ್ಲಾ ಧರ್ಮೀಯರೂ ಎಲ್ಲಾ ದೇಶ- ಭಾಷೆ, ವರ್ಣೀಯರೂ ನೆಲೆಸುತ್ತಿದ್ದಾರೆ. ಯಾರಿಗೂ ಅವರ ಧರ್ಮ ಅಥವಾ ದೇಶ ಅಥವಾ ವರ್ಣ, ವರ್ಗದ ಹೆಸರಲ್ಲಿ ಯಾವುದೇ ವಿಧ ತಾರತಮ್ಯವಿಲ್ಲದೆ ಸರ್ವರನ್ನೂ ಮಾನವೀಯ ದೃಷ್ಟಿಯಿಂದ ನೋಡಲಾಗುತ್ತದೆ.

ಸಾರ್ವಜನಿಕರಿಗೆ ಉಚಿತವಾಗಿ ದೊರೆಯುವ ಸರಕಾರೀ ವೈದ್ಯಕೀಯ ನೆರವಿನಿಂದ ಹಿಡಿದು ಎಲ್ಲಾ ಸವಲತ್ತುಗಳ ತನಕ ಸರ್ವರಿಗೂ ಸಮಾನ ಪರಿಗಣನೆಯೊಂದಿಗೆ ಲಭ್ಯವಾಗುತ್ತದೆ. ಇದು ಪರಿಶುದ್ಧ ಇಸ್ಲಾಮ್ ಧರ್ಮದ ನೀತಿಯಾಗಿದ್ದು ಆ ನೀತಿಯನ್ನು ಅಕ್ಷರಶಃ ಪಾಲಿಸುತ್ತಾ ಬರುತ್ತಿರುವುದು ಸೌದಿ ಆಡಳಿತದ ಒಂದು ಮಹತ್ವದ ಹಿರಿಮೆಯಾಗಿದೆ. ಸೌದಿ ಆಳುವ ಕೂಟದ ಹಿರಿಮೆ ಇರುವುದು ಇಲ್ಲೇ. ಯಾವುದೇ ಪ್ರತ್ಯಯ ಶಾಸ್ತ್ರ ಒಳ್ಳೆಯದಿರಬಹುದು.

ಆದರೆ ಅದು ಕಾಗದದಲ್ಲಿ ಬರೆದಿಡಲು ಮಾತ್ರ ಸೀಮಿತಗೊಳಿಸಿ ಆಡಳಿತದಲ್ಲಿ ಜ್ಯಾರಿಗೆ ತರದಿದ್ದರೆ ಏನು ಪ್ರಯೋಜನ? ನಮ್ಮ ಭಾರತ ದೇಶದಲ್ಲೂ ಉತ್ತಮ ಸಂವಿಧಾನವಿದೆ. ಆದರೆ ಆಳುವ ಕೂಟವು ಅದನ್ನು ಜ್ಯಾರಿಗೆ ತಾರದೆ ಸ್ವಹಿತಾಕಾಂಕ್ಷೆಗೆ ಪರಿಗಣನೆ ಕೊಡುವುದರಿಂದ ಸಂವಿಧಾನ ನೀಡುವ ಸವಲತ್ತುಗಳು ಪ್ರಜೆಗಳಿಗೆ ತಲುಪುವುದಿಲ್ಲ. ಜಗತ್ತಿನ ಬಹುತೇಕ ದೇಶಗಳ ಅವಸ್ಥೆ ಕೂಡಾ ಇದುವೇ ಆಗಿರುತ್ತದೆ. ಆದರೆ ಸೌದಿಯ ಆಡಳಿತ ವರ್ಗದ ವಿಶೇಷತೆ ಎದ್ದು ಕಾಣುವುದು ಇಲ್ಲೇ. ಇಲ್ಲಿನ ಸಂವಿಧಾನವು ಮಾನವೀಯ ಮೌಲ್ಯಗಳು ತುಂಬಿ ತುಳುಕಾಡುವ ಇಸ್ಲಾಮ್ ಧರ್ಮ. ಆ ಮೌಲ್ಯಗಳನ್ನು ಅಕ್ಷರಶಃ ಪಾಲಿಸುತ್ತದೆ ಎಂಬುದಾಗಿದೆ ಸೌದಿ ಆಡಳಿತ ವರ್ಗದ ವೈಶಿಷ್ಟ್ಯ. ಒಂದು ದೇಶದ ಶಾಂತಿ ಸುವ್ಯವಸ್ಥೆಗೆ ಕಾನೂನು ಪಾಲನೆ ಬಿಗಿಯಾಗಿರಬೇಕು.

ಅಪರಾಧಿಗಳ ಮೇಲಿನ ಧಾಕ್ಷಿಣ್ಯವು ಅಪರಾಧಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ನಮ್ಮ ಭಾರತ ದೇಶವು ಉತ್ತಮ ಉದಾಹರಣೆಯಾಗಿದೆ. ಅಪರಾಧಿಗಳ ಮೇಲಿನ ನಿರ್ಧಾಕ್ಷಿಣ್ಯ ಹಾಗೂ ತಾರತಮ್ಯ ರಹಿತ ಕ್ರಮ ಕೈಗೊಳ್ಳುವಂತಹ ಬಿಗಿ ನೀತಿ ಇದ್ದರೆ ಮಾತ್ರ ಶಾಂತಿ, ಸುವ್ಯವಸ್ಥೆ ಕಾಯ್ದುಕೊಳ್ಳಲು ಸಾಧ್ಯ. ನಮ್ಮ ದೇಶದಲ್ಲಿ ಎಮ್ಮೆಲ್ಲೆ ಮಗ ಅಥವಾ ಮಂತ್ರಿಯ ಮಗ ಗೂಂಡಾಗಿರಿ ನಡೆಸಿದಾಗ ಪೊಲೀಸರು ಅವನಿಗೆ ಸೆಲ್ಯೂಟ್ ಹೊಡೆದು ಕಳುಹಿಸುತ್ತಾರೆ. ಆದರೆ ಸೌದಿಯಲ್ಲಿ ರಾಜಮನೆತನದವರೇ ತಪ್ಪು ಮಾಡಿದರರೂ ಅರ್ಹ ಶಿಕ್ಷೆ ಸಿಕ್ಕೇ ಸಿಗುತ್ತದೆ.

ರಾಜ ಕುಟುಂಬದ ಸದಸ್ಯರೊಬ್ಬರು ಒಬ್ಬ ವಿದೇಶಿಯ ಪ್ರಜೆಯ ಮೇಲೆ ಹಲ್ಲೆ ನಡೆಸಿದ್ದಕ್ಕೆ ಸೌದಿ ನ್ಯಾಯಾಲಯ ಜೈಲಿಗೆ ಕಳಿಸಿದ ವಾರ್ತೆ ಇತ್ತೀಚೆಗೆ ನಡೆದುದು ಎಲ್ಲರಿಗೂ ಗೊತ್ತಿರುವ ವಿಚಾರ. ಕಾನೂನು ಪಾಲನೆಯಲ್ಲಿ ಬಿಗಿತ ಕೂಡಾ ಮಾನವೀಯ ಅನುಕಂಪದ ಭಾಗವಾಗಿದೆ. ಇದನ್ನು ಚೆನ್ನಾಗಿ ಅರಿತು ಕೊಂಡು ಸೌದಿ ಆಡಳಿತ ಕೂಟವು ಕಾನೂನು ಪಾಲನೆಯ ವಿಚಾರದಲ್ಲಿ ಯಾವತ್ತೂ ರಾಜಿ ಮಾಡಿಕೊಳ್ಳದ ನೀತಿ ಅನುಸರಿಸುವುದರಿಂದ ಈ ದೇಶದಲ್ಲಿ ಹಲ್ಲೆ, ಕೊಲೆ, ಕೊಳ್ಳಿ, ದರೋಢೆ, ಗುಂಪು ಗಲಭೆ ಮುಂತಾದ್ದೆಲ್ಲ ವಿರಳಾತಿವಿರಳವಾಗಿವೆ.

ಪೆಟ್ರೋಲಿಯಂ ಉತ್ಪನ್ನದಿಂದ ಬರುವ ಹೇರಳ ಸಂಪತ್ತನ್ನು ರಾಜ ಕುಟುಂಬವು ಜನರಿಗಾಗಿ, ಜನ ಕಲ್ಯಾಣಕ್ಕಾಗಿ ಯಥೇಚ್ಛ ವೆಚ್ಚಮಾಡುತ್ತದೆ. ಅಧಿಕಾರವು ಯಾವತ್ತೂ ತಮ್ಮ ಕೈಯಲ್ಲೇ ಸುರಕ್ಷಿತವಾಗಿರುವುದರಿಂದ ಅಧಿಕಾರ ತಪ್ಪಿ ಹೋಗುವ ಭಯದಿಂದ ಅಧಿಕಾರ ಉಳಿಸಲು ಸ್ವಜನ ಪಕ್ಷಪಾತ, ರಾಜಕೀಯ ಗಿಮಿಕ್ ಗಳನ್ನು ಮಾಡುವ ಅಗತ್ಯ ಇರುವುದಿಲ್ಲ. ಏನಿದ್ದರೂ ಐದು ವರ್ಷ ಅಧಿಕಾರ, ಮುಂದೆ ಅಧಿಕಾರ ಸಿಗುವುದೋ ಇಲ್ಲವೋ ಗೊತ್ತಿಲ್ಲ , ಆದ್ದರಿಂದ ಸಿಕ್ಕಿದ ಈ ಅವಕಾಶದಲ್ಲಿ ಸಾಕಷ್ಟು ಬಾಚಿಕೊಳ್ಳೋಣ ಎಂಬಂತಹ ಭಾವನೆ ಇವರಿಗೆ ಬರುವುದಿಲ್ಲ. ಕಾರಣ, ಅಧಿಕಾರ ಯಾವತ್ತೂ ಅವರ ಕೈಯಲ್ಲೇ ಭದ್ರವಾಗಿರುತ್ತದೆ. ಆದ್ದರಿಂದ ನಮ್ಮ ಆಡಳಿತದಲ್ಲಿ ಪ್ರಜೆಗಳು ಸುಖವಾಗಿರಬೇಕು ಎಂಬುದೊಂದೇ ಅವರ ಚಿಂತೆಯಾಗಿದ್ದು ಆ ನಿಟ್ಟಿನಲ್ಲೇ ಹೇರಳ ಖರ್ಚು ಮಾಡಿ ಪ್ರಜೆಗಳ ಹಿತ ಕಾಪಾಡುತ್ತಾರೆ. ಪ್ರಜೆಗಳ ಜೊತೆಗೆ ಅನಿವಾಸಿಗಳಿಗೂ ಸವಲತ್ತುಗಳು ಲಭ್ಯವಾಗುತ್ತವೆ.

ಪವಿತ್ರ ಮಕ್ಕಾ ಮತ್ತು ಮದೀನಾ ನಗರಗಳು ಇರುವುದು ಸೌದಿಯಲ್ಲಿ. ಇದು ಸೌದಿ ದೊರೆಗಳಿಗೆ ಬಹಳ ಹೆಮ್ಮೆಯ ವಿಚಾರ. ಜಗತ್ತಿನ ಎಲ್ಲಾ ಕಡೆಗಳಿಂದ ಬರುವ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರಲ್ಲಿ ಸರಕಾರ ವಹಿಸುವ ಮುತುವರ್ಜಿ ಬಹಳ ಅದ್ಭುತವಾಗಿದೆ. ಸೌದಿಯ ದೊರೆ ತನ್ನನ್ನು ಕರೆಸಿಕೊಳ್ಳುವುದೇ
ಖಾದಿಮುಲ್ ಹರಮೈನಿ ಶ್ಶರೀಫೈನಿ ” ಎಂದಾಗಿದೆ. ಎರಡು ಪವಿತ್ರ ಹರಮ್ ಗಳ ( ಮಕ್ಕಾ- ಮದೀನಾ) ಸೇವಕ ಎಂದರ್ಥ. ಒಂದು ದೊಡ್ಡ ಶ್ರೀಮಂತ ರಾಷ್ಟ್ರದ ಅಧಿಪತಿಯಾಗಿದ್ದೂ ಕೂಡಾ ತನ್ನನ್ನು ಹರಮ್ ಗಳ ಸೇವಕ ಎಂದು ಕರೆಸಿಕೊಳ್ಳುವುದರಲ್ಲಿ ಅಭಿಮಾನ ಪಡುತ್ತಿರುವುದು ಪವಿತ್ರ ನಗರಗಳ ಮೇಲೆ ತಮಗಿರುವ ಗೌರವಗಳ ಸಂಕೇತವಾಗಿದೆ.

ಕೊರೋನಾ ಕಾಲದಲ್ಲಿ ಭಾರತದಲ್ಲಿ ಪ್ರಜೆಗಳು ಅದೆಷ್ಟು ತೊಂದರೆ ಪಟ್ಟರು, ಅದೆಷ್ಟು ಜನರ ಆರ್ಥಿಕ ನೆಲೆ ಕುಸಿದು ಬಿತ್ತು ಎಂಬುದನ್ನೆಲ್ಲ ನಾವು ಕಂಡೆವು. ಆದರೆ ಸೌದಿಯಲ್ಲಿ ಕೊರೊನಾ ಕಾಲದಲ್ಲಿ ಸರಕಾರವು ಪ್ರಜೆಗಳಿಗೂ ಅನಿವಾಸಿಗಳಿಗೂ ಯಾವುದೇ ವಿಧ ತೊಂದರೆ ಬಾರದಂತೆ ನೋಡಿಕೊಂಡಿತು. ಇದರ ಕಾರಣದಿಂದ ಕೊರೋನಾ ಸಂಬಂಧಿತ ಬಿಗಿ ಕಟ್ಟುನಿಟ್ಟಿನ ಕ್ರಮದಿಂದಾಗಿ ಪ್ರಜೆಗಳು ಸ್ವಾಭಾವಿಕವಾಗಿ ಸ್ವಲ್ಪ ಕಷ್ಟ ಅನುಭವಿಸಬೇಕಾಗಿ ಬಂದರೂ ಅನ್ನ, ವೈದ್ಯಕೀಯ, ಸಂಚಾರ ಮುಂತಾದ ವಿಷಯಗಳಲ್ಲಿ ತತ್ವಾರವಿರಲಿಲ್ಲ‌. ಪ್ರಜೆಗಳಿಗೆ ಆರ್ಥಿಕ ಸಂಕಷ್ಟ ಬಾರದಂತೆಯೂ ಸೌದಿ ಆಡಳಿತ ನಿಗಾ ವಹಿಸಿತ್ತು.

ಜಾತಿ, ಮತ, ವರ್ಣ, ದೇಶ ನೋಡದೆ ದೇಶದಲ್ಲಿ ನೆಲೆಸುವ ಮನುಷ್ಯರು ಎಂಬುದನ್ನು ಮಾತ್ರ ಕಂಡು ನಿವಾಸಿಗಳ ಸರ್ವತೋಮುಖ ಹಿತಗಳನ್ನೇ ಮುಖ್ಯವಾಗಿ ಪರಿಗಣಿಸಿ ಅದಕ್ಕಾಗಿ ಕೋಟ್ಯಾಂತರ ಮಿಲಿಯನ್ ವೆಚ್ಚ ಮಾಡಿ ಇಡೀ ದೇಶದ ನಿವಾಸಿಗಳಿಗೆ ಶಾಂತಿ, ಸಂತೋಷ, ಸುರಕ್ಷೆ , ನೆಮ್ಮದಿ ನೀಡುತ್ತಿರುವ ಸೌದಿಯ ದೊರೆ ಹಾಗೂ ಅವರ ಪರಿವಾರಕ್ಕೆ ಅಲ್ಲಾಹು ದೀರ್ಘಾಯುಷ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತಾ ನ್ಯಾಶನಲ್ ಡೇ ಗೆ ಸರ್ವ ವಿಧ ಶುಭಕಾಮನೆಗಳನ್ನು ಸಲ್ಲಿಸುತ್ತಿದ್ದೇನೆ.

error: Content is protected !! Not allowed copy content from janadhvani.com