janadhvani

Kannada Online News Paper

ಶೈಕ್ಷಣಿಕ ನೆರವು ತಡೆದು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ : ಕೆಎಂಡಿಸಿಯ ಅನ್ಯಾಯ ಕ್ರಮಕ್ಕೆ ಆಕ್ರೋಶ

ಅರಿವು ಶೈಕ್ಷಣಿಕ ಸಾಲ ನವೀಕರಣವನ್ನು ನಿಲ್ಲಿಸಿ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಸರಕಾರಿ ನಿಗಮ ಕೆಎಂಡಿಸಿಯ ಕ್ರಮಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಉಪಾಧ್ಯಕ್ಷ ಅಯೂಬ್ ಅಗ್ನಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ಕ್ಷೇತ್ರವು ದುಬಾರಿಯಾಗಿ ಪರಿಣಮಿಸುತ್ತಿರುವ ಈ ಸ‌ನ್ನಿವೇಶದಲ್ಲಿ ಉನ್ನತ ಶಿಕ್ಷಣದ ಕನಸು ಹೊತ್ತ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಈ ನಿಗಮದಿಂದ ದೊರಕುತ್ತಿದ್ದ ಸಾಲ ಯೋಜನೆಯು ಬಹಳಷ್ಟು ನೆರವಾಗುತ್ತಿತ್ತು‌. ಆದರೆ ಸರಕಾರ‌ವು ಅಲ್ಪಸಂಖ್ಯಾತರ ನಿಗಮದ ಮೂಲಕ ನೀಡುತ್ತಿದ್ದ ಶೈಕ್ಷಣಿಕ ನೆರವಿನ ಅನುದಾನವನ್ನು ನಿಧಾನವಾಗಿ ಕಡಿತಗೊಳಿಸುತ್ತಾ ಬರುತ್ತಿದೆ. ಈ ಹಿಂದೆ ಪಿ.ಎಚ್.ಡಿ ಮತ್ತು ಎಂ.ಫಿಲ್. ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಫೆಲೋಶಿಪ್ ಮೊತ್ತವನ್ನೂ ಕೋವಿಡ್ ನೆಪವೊಡ್ಡಿ ಕಡಿತಗೊಳಿಸಲಾಗಿತ್ತು. ಇವೆಲ್ಲವೂ ಅಲ್ಪಸಂಖ್ಯಾತ ಸಮಯದಾಯಗಳನ್ನು ಉನ್ನತ ಶಿಕ್ಷಣದಿಂದ‌ ವಂಚಿತರನ್ನಾಗಿಸುವ ಹುನ್ನಾರವಾಗಿದೆ.

ಪ್ರಿ ಮೆಟ್ರಿಕ್- ಪೋಸ್ಟ್ ಮೆಟ್ರಿಕ್ ಸ್ಕಾಲರ್ಶಿಪ್ ಮೊತ್ತವೂ ಸಮರ್ಪಕವಾಗಿ ದೊರಕುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿವೆ. ರಾಜ್ಯದ ಬಿಜೆಪಿ ಸರಕಾರವು ತಾಳುತ್ತಿರುವ ಈ ರೀತಿಯ ಅಲ್ಪಸಂಖ್ಯಾತ ವಿರೋಧಿ ಧೋರಣೆಯು ಎಲ್ಲರನ್ನೊಳಗೊಂಡ‌ ಅಭಿವೃದ್ಧಿಗೆ‌ ಮಾರಕವಾಗಿದೆ.

ಅರಿವು ಶೈಕ್ಷಣಿಕ ಸಾಲವನ್ನು ತಡೆ ಹಿಡಿಯುವುದರಿಂದ ಅಲ್ಪಸಂಖ್ಯಾತ ಸಮುದಾಯದ ಸಾವಿರಾರು ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸು ಕಮರಿ ಹೋಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ತಾರತಮ್ಯ ನೀತಿಯ‌‌ನ್ನು ಕೈಬಿಟ್ಟು ಸಂವಿಧಾನದ ಆಶಯದಡಿಯಲ್ಲಿ ಕಾರ್ಯ ನಿರ್ವಹಿಸಲು ಮುಂದಾಗಬೇಕು. ಅದೇ ರೀತಿ ವಿದ್ಯಾರ್ಥಿ ಸಮುದಾಯವೂ ಪ್ರಜಾಸತ್ತಾತ್ಮಕ ಹೋರಾಟಗಳ ಮೂಲಕ ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕೆಂದು ಅಯೂಬ್ ಅಗ್ನಾಡಿ ಕರೆ ನೀಡಿದ್ದಾರೆ.

error: Content is protected !! Not allowed copy content from janadhvani.com